ಬೆಂಗಳೂರು (ಡಿ.18) : ಪ್ರಸಕ್ತ 2022-23ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಮೀಸಲಿಟ್ಟಿರುವ 29,165 ಕೋಟಿ ರು. ಅನುದಾನದಲ್ಲಿ ಈವರೆಗೆ 18,649 ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ 14,166 ಕೋಟಿ ರು. ವೆಚ್ಚ ಮಾಡಲಾಗಿದೆ. ಬಾಕಿ ಇರುವ 10 ಸಾವಿರ ಕೋಟಿ ರು.ಗೂ ಹೆಚ್ಚಿನ ಅನುದಾನವನ್ನು ಆದ್ಯತೆಯಲ್ಲಿ ವಿನಿಯೋಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪರಿಶಿಷ್ಟಜಾತಿ ವಿಶೇಷ ಘಟಕ ಯೋಜನೆಯಡಿ (ಎಸ್‌ಸಿಎಸ್‌ಪಿ) 20,843.03 ಕೋಟಿ ರು. ಒದಗಿಸಿದ್ದು, ಬಿಡುಗಡೆ ಮಾಡಿದ 13,483.79 ಕೋಟಿ ರು.ಗಳ ಪೈಕಿ 10,783.47 ಕೋಟಿ ರು. ವೆಚ್ಚವಾಗಿದೆ. ಅದೇ ರೀತಿ ಗಿರಿಜನ ಉಪಯೋಜನೆಯಡಿ (ಟಿಎಸ್‌ಪಿ) 8,322.78 ಕೋಟಿ ರು. ಮೀಸಲಿಟ್ಟಿದ್ದು, ಬಿಡುಗಡೆ ಮಾಡಿದ 5,165.92 ಕೋಟಿ ರು. ಪೈಕಿ 3,383.25 ಕೋಟಿ ರು. ವೆಚ್ಚವಾಗಿದೆ. ಎರಡೂ ಯೋಜನೆಗಳಡಿ ಬಾಕಿ ಉಳಿದಿರುವ ಅನುದಾನವನ್ನು ಆರ್ಥಿಕ ವರ್ಷದೊಳಗೆ ವಿನಿಯೋಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಇಲಾಖೆ ಯೋಜನೆ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲು ತಾಕೀತು: ಸಚಿವ ಕೋಟ
ಈ ಎರಡು ಯೋಜನೆಗಳಡಿ ಸಮಾಜ ಕಲ್ಯಾಣ ಇಲಾಖೆಗೆ ನೀಡಿರುವ 4,314.28 ಕೋಟಿ ರು.ಗಳಲ್ಲಿ 3085 ಕೋಟಿ ರು. ಬಿಡುಗಡೆ ಮಾಡಿದ್ದು, 2,348.92 ಕೋಟಿ ರು. ವೆಚ್ಚವಾಗಿದೆ. ಪ. ಜಾತಿ. ಪ.ಪಂಗಡದವರಿಗೆ ಶಿಕ್ಷಣ, ಉದ್ಯೋಗ ಮೀಸಲಾತಿ, ಭೂ ಒಡೆತನ, ಉಚಿತ ವಿದ್ಯುತ್, ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ವಾಹನ ಖರೀದಿಗೆ ಸಹಾಯಧನ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳ ನಿರ್ಮಾಣ, ವಸತಿ ಯೋಜನೆ, ಕಟ್ಟಡ ನಿರ್ಮಾಣ, ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಭೇಟಿ ನೀಡಿದ 10 ಪ್ರಮುಖ ಸ್ಥಳಗಳ ಅಭಿವೃದ್ಧಿ ಕಾರ್ಯ ಸೇರಿದಂತೆ ಅನೇಕ ಯೋಜನೆಗಳಿಗೆ ಈ ಅನುದಾನ ಬಳಸಲಾಗುವುದು. ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಗಿಂತಲೂ ಹೆಚ್ಚಿನ ಅನುದಾನವನ್ನು ನಮ್ಮ ಸರ್ಕಾರ ಈ ಎರಡೂ ಯೋಜನೆಗಳಲ್ಲಿ ಒದಗಿಸಿದೆ ಎಂದು ಹೇಳಿದರು.
ಓಬಿಸಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಪ್ರೇಮದ ಪಾಠ: ಕೋಟಾ ಶ್ರೀನಿವಾಸ ಪೂಜಾರಿ
ಮೊದಲ ಬಾರಿಗೆ ಪರಿಶಿಷ್ಟರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಲು ‘ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ’ ಹೆಸರಿನಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1 ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯದ ಬಹುಮಹಡಿ ವಿದ್ಯಾರ್ಥಿನಿಲಯ ಸಮುಚ್ಚಯಗಳನ್ನು 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.