Lok sabha election 2024: 17 ಕಾಂಗ್ರೆಸ್‌ ಅಭ್ಯರ್ಥಿ ಫೈನಲ್‌ ಖರ್ಗೆ ಸ್ಪರ್ಧೆ ಇಲ್ಲ, ಅಳಿಯಗೆ ಟಿಕೆಟ್‌!

Published : Mar 20, 2024, 05:13 AM IST
Lok sabha election 2024: 17 ಕಾಂಗ್ರೆಸ್‌ ಅಭ್ಯರ್ಥಿ ಫೈನಲ್‌ ಖರ್ಗೆ ಸ್ಪರ್ಧೆ ಇಲ್ಲ, ಅಳಿಯಗೆ ಟಿಕೆಟ್‌!

ಸಾರಾಂಶ

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಖೈರುಗೊಳಿಸುವಲ್ಲಿ ಯಶಸ್ವಿಯಾಗಿದೆ.

 ಬೆಂಗಳೂರು (ಮಾ.20) : ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಖೈರುಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ 6 ಮಂದಿ ಹಾಲಿ ಸಚಿವರ ಕುಟುಂಬಸ್ಥರಿಗೆ ಟಿಕೆಟ್‌ ದಯಪಾಲಿಸಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷವು ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಇದೀಗ 17 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಮೂಲಕ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿದಂತಾಗಿದೆ. ತೀವ್ರ ಪೈಪೋಟಿಯಿರುವ ನಾಲ್ಕು ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವುದು ಬಾಕಿಯಿದೆ. ಮೂಲಗಳ ಪ್ರಕಾರ ಈ ನಾಲ್ಕು ಕ್ಷೇತ್ರಗಳಿಗೂ ಅಭ್ಯರ್ಥಿ ಅಂತಿಮಗೊಳಿಸಲು ಬುಧವಾರ ಮತ್ತೆ ಸಭೆ ನಡೆಯಲಿದ್ದು, ಇದಾದ ಕೂಡಲೇ ಎರಡನೇ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ಎಲ್ಲ ಪಕ್ಷಗಳಿಗೂ ಟಿಕೆಟ್ ಕಗ್ಗಂಟಾದ ಕೋಲಾರ ಲೋಕಸಭಾ ಕ್ಷೇತ್ರ!

ಯಾವ ಸಚಿವರೂ ಇಲ್ಲ:

ಕುತೂಹಲಕಾರಿ ಸಂಗತಿಯೆಂದರೆ, ಸಚಿವರನ್ನು ಈ ಬಾರಿ ಸ್ಪರ್ಧೆಗೆ ಇಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿತ್ತಾದರೂ, ಬಹುತೇಕ ಘೋಷಣೆಯ ಹಂತದಲ್ಲಿರುವ 24 ಕ್ಷೇತ್ರಗಳ ಪೈಕಿ ಒಬ್ಬ ಸಚಿವರ ಹೆಸರೂ ಇಲ್ಲ. ಆದರೆ, ಹೆಸರು ಅಖೈರುಗೊಳ್ಳಲು ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಾದ ಕೋಲಾರ (ಕೆ.ಎಚ್. ಮುನಿಯಪ್ಪ) ಹಾಗೂ ಚಾಮರಾಜನಗರ (ಡಾ. ಎಚ್.ಸಿ. ಮಹದೇವಪ್ಪ) ಅವರ ಹೆಸರನ್ನು ತೇಲಿ ಬಿಡಲಾಗಿತ್ತು. ಮೂಲಗಳ ಪ್ರಕಾರ ಈ ಇಬ್ಬರು ಸಚಿವರು ಸ್ಪರ್ಧೆ ಒಪ್ಪುವ ಸಾಧ್ಯತೆಗಳು ಇಲ್ಲ.

6 ಕ್ಷೇತ್ರಗಳು ಸಚಿವರ ಕುಟುಂಬಕ್ಕೆ:

ಇನ್ನು ಹೆಸರು ಅಖೈರುಗೊಂಡಿರುವ 17 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಸಚಿವರ ಕುಟುಂಬಸ್ಥರ ಪಾಲಾಗಿದೆ. ಅದರಲ್ಲೂ ಸಚಿವರ ಪುತ್ರಿಯರು ಟಿಕೆಟ್‌ ಗಿಟ್ಟಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಾಂದ ಪಾಟೀಲ್, ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಟಿಕೆಟ್‌ ಗಿಟ್ಟಿಸಿದ್ದರೆ, ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹೆಸರು ಅಖೈರುಗೊಂಡಿದೆ. ಇನ್ನು ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಹೆಸರು ದಾವಣಗೆರೆ ಕ್ಷೇತ್ರಕ್ಕೆ ಅಖೈರುಗೊಂಡಿದೆ.

ಮಹಿಳಾ ಟಿಕೆಟ್ ದಾಖಲೆ?:

ಕುತೂಹಲಕಾರಿ ಸಂಗತಿಯೆಂದರೆ ಮಂಗಳವಾರ ಅಖೈರುಗೊಂಡ ಪಟ್ಟಿಯಲ್ಲಿ ಐವರು ಮಹಿಳೆಯರು ಹಾಗೂ ಮೊದಲ ಪಟ್ಟಿಯಲ್ಲಿ (ಶಿವಮೊಗ್ಗಕ್ಕೆ ಗೀತಾ ಶಿವರಾಜಕುಮಾರ್‌) ಸೇರಿ ಒಟ್ಟು ಆರು ಮಂದಿ ಟಿಕೆಟ್‌ ಗಿಟ್ಟಿಸಿದಂತಾಗುತ್ತದೆ. ಹೀಗಾದರೆ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳೆಯರಿಗೆ ಟಿಕೆಟ್‌ ಕೊಟ್ಟಿದ್ದು ದಾಖಲೆಯಾಗುತ್ತದೆ.

ಇದಲ್ಲದೆ, ನಿವೃತ್ತ ಐಎಎಸ್‌ ಅಧಿಕಾರಿ ಕುಮಾರ ನಾಯಕ್‌ ರಾಯಚೂರಿಗೆ ಹಾಗೂ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಜಯಪ್ರಕಾಶ್‌ ಹೆಗ್ಡೆ ಅವರ ಹೆಸರು ಉಡುಪಿ- ಚಿಕ್ಕಮಗಳೂರಿಗೆ ಅಖೈರುಗೊಂಡಿದೆ.

ಬೆಂಗಳೂರು ಉತ್ತರಕ್ಕೆ ರಾಜೀವ್‌ ಗೌಡ?:

ಇನ್ನೂ ತೀವ್ರ ಕುತೂಹಲ ಹುಟ್ಟಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌ ದೊರೆಯಲಿದೆ ಎಂಬುದಕ್ಕೂ ಉತ್ತರ ದೊರಕಿದ್ದು, ಈ ಕ್ಷೇತ್ರಕ್ಕೆ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ ಪ್ರೊ। ರಾಜೀವ್‌ ಗೌಡ ಅವರ ಹೆಸರು ಅಂತಿಮಗೊಂಡಿದೆ. ಈ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಕಾರಣಕ್ಕೆ ಶಾಸಕ ಪ್ರಿಯಕೃಷ್ಣ ಅವರ ಮನವೊಲಿಸಲು ಕಾಂಗ್ರೆಸ್‌ ನಾಯಕತ್ವ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಆ ಪ್ರಯತ್ನ ವಿಫಲಗೊಂಡಿದೆ. ಇದಾದ ನಂತರ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರ ಹೆಸರು ಕೂಡ ತೇಲಿ ಬಿಡಲಾಗಿತ್ತು. ಆದರೆ, ಅಂತಿಮವಾಗಿ ರಾಜೀವ್ ಗೌಡ ಅವರ ಹೆಸರು ಅಖೈರುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯವಾಗಿ ನನಗೆ ಡಿಕೆಶಿ ವಿಷ ಹಾಕಿದ್ರು -ಎಚ್‌ಡಿಕೆ; ಯಾರಿಗೂ ವಿಷ ಹಾಕಿಲ್ಲ ಒಳ್ಳೇದು ಮಾಡಿದ್ದೇವೆ: ಡಿಕೆ ಸುರೇಶ್

ಅಂತಿಮಗೊಂಡ ಹೆಸರುಗಳು:

1-ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ 2-ಬೆಂಗಳೂರು ದಕ್ಷಿಣ- ಸೌಮ್ಯಾರೆಡ್ಡಿ3-ಬೆಂಗಳೂರು ಸೆಂಟ್ರಲ್-ಮನ್ಸೂರ್ ಆಲಿಖಾನ್4-ಮೈಸೂರು-ಲಕ್ಮಣ್5- ರಾಯಚೂರು- ಕುಮಾರ ನಾಯಕ್ 6- ಕೊಪ್ಪಳ-ರಾಜಶೇಖರ ಹಿಟ್ನಾಳ್7- ಬೀದರ್- ಸಾಗರ್ ಖಂಡ್ರೆ8-ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್9-ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್10-ದಕ್ಷಿಣ ಕನ್ನಡ- ಪದ್ಮರಾಜ್11-ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ12- ಬೆಂಗಳೂರು ಉತ್ತರ-ರಾಜೀವ್ ಗೌಡ13- ಧಾರವಾಡ- ವಿನೋದ ಅಸೂಟಿ14-ಬಾಗಲಕೋಟೆ-ಸಂಯುಕ್ತ ಪಾಟೀಲ್15-ಉಡುಪಿ/ಚಿಕ್ಕಮಗಳೂರು- ಜಯಪ್ರಕಾಶ್ ಹೆಗಡೆ16-ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್ 17-ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ

ಬಾಕಿ ಉಳಿದಿದ ಕ್ಷೇತ್ರಗಳು:ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್