
ಶಿವಮೊಗ್ಗ (ಫೆ.25): ಬೆಂಗಳೂರಿನಲ್ಲಿ ಆಟೋ ಚಾಲಕರು ಹಾಗೂ ಇತರೆ ಬಡಜನರಿಗೆ ಮನೆ ನಿರ್ಮಿಸಿಕೊಡಲು 1,600 ಎಕರೆ ಜಾಗ ಖರೀದಿ ಮಾಡಲಾಗಿದೆ. ಇನ್ನು ರಾಜ್ಯಾದ್ಯಂತ ಬಡಜನರಿಗೆ 7.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಆಶ್ರಯ ಬಡಾವಣೆಯ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ಜೈ ಭೀಮ್ ಘೋಷಣೆಯೊಂದಿಗೆ ಭಾಷಣ ಆರಂಭಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿಲ್ಲವೆಂದಾದರೆ ನಾವುಗಳು ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಬಡ ಮತ್ತು ಮಧ್ಯಮ ವರ್ಗದ 7.5 ಲಕ್ಷ ರೂ.ಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಈ ಆಶ್ರಯ ಬಡಾವಣೆ ಬಗ್ಗೆ ಈಗಾಗಲೇ ಬಹಳಷ್ಟು ಬಾರಿ ಚರ್ಚೆ ನಡೆಸಿದ್ದೆವೆ. ಈಗಾಗಲೇ 3 ಸಾವಿರ ಮನೆಗಳ ನಿರ್ಮಾಣದಲ್ಲಿ 652 ಮನೆಗಳು ಹಂಚಿಕೆ ಮಾಡಲಾಗುತ್ತಿದೆ. ಈ ಹಿಂದೆ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಕೂಡ ಕೆಲವರಿಗೆ ಇಲ್ಲಿ ಮನೆಗಳ ಹಂಚಿಕೆ ಮಾಡಿದ್ದರು. ನಾನು ಮಂತ್ರಿಯಾದ ಬಳಿಕ ಈ ಬಡಾವಣೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಫಲಾನಭವಿಗಳಿಗೆ ಮನೆಗಳ ಹಣ 2 ಲಕ್ಷ ರೂ. ಹೆಚ್ಚುವರಿಯಾಗಿ ಕಟ್ಟುವಂತಾಗಿದೆ. ಈಗ 7.5 ಲಕ್ಷ ರೂ.ಗೆ ಬಡವರಿಗೆ ಮನೆ ಸಿಗುವಂತಾಗಿದೆ ಎಂದರು.
ಬಡವರಿಗೆ ಸರ್ಕಾರದಿಂದ ಮನೆ ಕಟ್ಟಲು ಹಣ ಹಂಚಿಕೆ ಮಾಡಲಾಗಿದೆ. ಈಗ 9.5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಸ್ಲಂ ಬೋರ್ಡ್ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಹಣ ಬಿಡುಗಡೆ ಮಾಡಿ ಬಡವರಿಗೆ ಮನೆ ನೀಡಲಾಗಿದೆ. ಬ್ಯಾಂಕ್ ಗೆ ಸಾಲ ಪಡೆದು ಕಟ್ಟಿರುವ ಮನೆಗಳ ಫಲಾನುಭವಿಗಳಿಗೆ ಮುಂದಿನ ಒಂದುವರೆ ತಿಂಗಳಲ್ಲಿ ಹಣ ನೀಡಲಾಗುವುದು. ಸರ್ಕಾರದಿಂದ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು. ಆಗ ಬಡವರು ಬ್ಯಾಂಕ್‌ಗೆ ಹಣ ವಾಪಾಸ್ ಕಟ್ಟಿ ಸಾಲ ತೀರಿಸಬಹುದು. ಬಡವರು ಸಾಲ ಮುಕ್ತ ಜೀವನ ನಡೆಸಬಹುದು. ಬಡವರಿಗೆ ಸೂರು ಕೊಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ಇದನ್ನೂ ಓದಿ: ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ಕೊಡಲ್ಲ, ₹90 ಸಾವಿರ ಫುಲ್ ಪೇಮೆಂಟ್ ಮಾಡ್ತೇವೆ: ಸಚಿವ ಜಮೀರ್ ಅಹಮದ್ ಖಾನ್
ಬೆಂಗಳೂರು ಆಟೋ ಚಾಲಕರಿಗೆ ಮನೆ ನಿರ್ಮಾಣ: ಬೆಂಗಳೂರಿನ ಆಟೋ ಚಾಲಕರು ಸೇರಿದಂತೆ ಬಡವರಿಗೆ ಮನೆ ನಿರ್ಮಿಸಲು 1600 ಎಕರೆ ಜಾಗ ಖರೀದಿ ಮಾಡಲಾಗಿದೆ. 2016ರಲ್ಲಿ ಸಿಎಂ ಸಿದ್ಧರಾಮಯ್ಯ ಅವರು, ಸರ್ಕಾರದ ಮೂಲಕ ಜಾಗ ಖರೀದಿ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆಗೆ ನೀಡಲಾಗಿದೆ. ಬೆಂಗಳೂರಿನ ಬಡವರಿಗೆ 6.5 ಲಕ್ಷದಿಂದ 7 ಲಕ್ಷ ರೂ. ಗಳಿಗೆ ಮನೆ ನಿರ್ಮಿಸಿಕೊಡಲು ಯೋಜಿಸಲಾಗಿದೆ. ನಾನು ಪಕ್ಷ ಭೇದ, ಜಾತಿ ಭೇದ ಮಾಡಲ್ಲ. ನಾನು ಮುಸ್ಲಿಂ ಇರಬಹುದು, ಆದರೆ ಜಾತಿ-ಧರ್ಮ ಬೇದಭಾವ ಮಾಡಲ್ಲ. ರಾಜಕೀಯಕ್ಕೆ ಬಂದ ಮೇಲೆ ಜಾತಿಯತೆ ಮಾಡಬಾರದು. ಯಾರು ಒಳ್ಳೆಯ ಕೆಲಸ ಮಾಡಿದ್ದಾರೋ ಅದನ್ನು ಒಪ್ಪಿಕೊಳ್ಳಬೇಕು. ಈ ಹಿಂದೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನು ಕೂಡ ನಾವು ಒಪ್ಪಿಕೊಳ್ಳಬೇಕು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಅವಧಿ ವೇಳೆ ಕೊಳೆಗೇರಿ ಮಂಡಳಿಯಿಂದ ಬಡವರಿಗೆ ಮನೆಗಳನ್ನು ನೀಡಬೇಕಿತ್ತು. ಆದರೆ ಅವರು ಮನೆಗಳನ್ನು ಬಡವರಿಗೆ ನೀಡಿಲ್ಲ. ನಮ್ಮ ಸಿಎಂ ಸಿದ್ಧರಾಮಯ್ಯನವರು ಗ್ಯಾರಂಟಿ ಯೋಜನೆಗಳ ನಡುವೆಯೂ ಬಡವರಿಗೆ ಮನೆಗಳನ್ನು ನೀಡುತ್ತಿದ್ದಾರೆ. ಬಡವರಿಗೆ ಮನೆಗಳನ್ನು ನೀಡಿಲ್ಲವೆಂದಾದರೆ ದೇವರು ಮೆಚ್ಚಲ್ಲ. ಬಡವರಿಗೆ ಮನೆ ನೀಡದೇ ವಂಚಿಸಿದರೆ, ನಮ್ಮ ಮಕ್ಕಳಿಗೆ ಒಳ್ಳೆದಾಗಲ್ಲ. ನಾನು ವಸತಿ ಇಲಾಖೆ ಕೊಡಿ ಅಂತಾನೆ ಕೇಳಿದ್ದೆ. ಬಡವರಿಗೆ ಸೂರುಗಳನ್ನು ನೀಡಬೇಕೆಂದೇ ಈ ಇಲಾಖೆ ಪಡೆದಿದ್ದೇನೆ. ಮನೆಗಳನ್ನು ಪಡೆದವರು 1 ಲಕ್ಷ ರೂ. ಗೂ ಹೆಚ್ಚು ನೀಡಿದ್ದಲ್ಲಿ, ಅದನ್ನು ಸರ್ಕಾರದಿಂದ ವಾಪಾಸ್ ನೀಡುವ ಕೆಲಸ ನಾವು ಮಾಡುತ್ತೇವೆ. ಅಧಿವೇಶನದ ಬಳಿಕ ಹುಬ್ಬಳ್ಳಿಯಲ್ಲಿ 41 ಸಾವಿರ ಮನೆಗಳ ಹಂಚಿಕೆ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ದಕ್ಷಿಣ ಭಾರತದ ನಟಿಯ ಬಾಲಿವುಡ್ ಅವಕಾಶ ಕಿತ್ತುಕೊಂಡ ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ