ರಾಜ್ಯದಲ್ಲಿ ಶುಕ್ರವಾರ ಕೊರೋನಾ ಸೋಂಕಿನ 1573 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1100 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 32 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.5ರಷ್ಟು ದಾಖಲಾಗಿದೆ.
ಬೆಂಗಳೂರು (ಆ.20): ರಾಜ್ಯದಲ್ಲಿ ಶುಕ್ರವಾರ ಕೊರೋನಾ ಸೋಂಕಿನ 1573 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1100 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 32 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.5ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆ ಎರಡು ಸಾವಿರ ಹೆಚ್ಚಾಗಿದ್ದರೂ ಹೊಸ ಪ್ರಕರಣಗಳು 756 ಇಳಿಕೆಯಾಗಿವೆ. (ಗುರುವಾರ 2329, ನಾಲ್ಕು ಸಾವು).
ಆರು ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ ಗುರುವಾರ ದಾಖಲಾಗಿತ್ತು, ಸದ್ಯ ಮತ್ತೆ ಇಳಿಕೆಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 9,777ಕ್ಕೆ ಏರಿಕೆಯಾಗಿವೆ. ಈ ಪೈಕಿ 67 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 5 ಮಂದಿ ಆಕ್ಸಿಜನ್, 57 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9710 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
Corona Crisis: ಕರ್ನಾಟಕದಲ್ಲಿ 2329 ಕೋವಿಡ್ ಕೇಸ್: ಆರು ತಿಂಗಳಲ್ಲೇ ಗರಿಷ್ಠ
935 ಜನರಲ್ಲಿ ಕೊರೋನಾ ಸೋಂಕು ದೃಢ: ಬೆಂಗಳೂರಿನಲ್ಲಿ ಆ.19ರ ಶುಕ್ರವಾರ 935 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.6.7 ದಾಖಲಾಗಿದೆ. 480 ಜನರು ಗುಣಮುಖರಾಗಿದ್ದು, ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6,989 ಸಕ್ರಿಯ ಸೋಂಕು ಪ್ರಕರಣಗಳಿದ್ದು ಈ ಪೈಕಿ 57 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 5 ಎಚ್‌ಡಿಯು ಮತ್ತು 37 ಮಂದಿ ಸಾಮಾನ್ಯ ವಾರ್ಡ್‌ಗೆ ದಾಖಲಾಗಿದ್ದಾರೆ.
ಉಳಿದವರು ಮನೆಗಳಲ್ಲಿ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 5817 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 166 ಮಂದಿ ಮೊದಲ ಡೋಸ್, 809 ಮಂದಿ ಎರಡನೇ ಡೋಸ್ ಮತ್ತು 4842 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 12 ಕ್ಲಸ್ಟರ್‌ಗಳಿದ್ದು 5ಕ್ಕಿಂತ ಹೆಚ್ಚು ಸೋಂಕಿತರಿರುವ ಎರಡು ಕ್ಲಸ್ಟರ್ ಇದೆ. ಉಳಿದಂತೆ 10 ಕ್ಲಸ್ಟರ್‌ಗಳಲ್ಲಿ 5ಕ್ಕಿಂತ ಕಡಿಮೆ ಸೋಂಕಿತರು ಇದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಎಲ್ಲಿ ಎಷ್ಟು ಕೇಸ್?: ಶುಕ್ರವಾರದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 935 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು 86, ಹಾಸನ 98, ಬಳ್ಳಾರಿಯಲ್ಲಿ 50 ಮಂದಿಗೆ ಸೋಂಕು ತಗುಲಿದೆ. 11 ಜಿಲ್ಲೆಗಳಲ್ಲಿ ಬೆರಳೆಣಿಕೆ, ಬೀದರ್‌ನಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
3ನೇ ಡೋಸ್‌ಗೆ ಭಾರೀ ಬೇಡಿಕೆ: ಕೇಂದ್ರ ಸರ್ಕಾರವು 18-59 ವರ್ಷದವರಿಗೂ ಕೊರೋನಾ ಲಸಿಕೆ 3ನೇ ಡೋಸ್ (ಮುಂಜಾಗ್ರತಾ ಡೋಸ್ ಅಥವಾ ಬೂಸ್ಟರ್ ಡೋಸ್) ಉಚಿತ ನೀಡಲಾರಂಭಿಸಿದ ನಂತರ ರಾಜ್ಯದಲ್ಲಿ ಮೂರನೇ ಡೋಸ್ ಪಡೆಯುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 15 ದಿನಗಳಲ್ಲಿ ನಿತ್ಯ ಸರಾಸರಿ 1 ಲಕ್ಷ ಮಂದಿಯಂತೆ 15.8 ಲಕ್ಷ ಮಂದಿ 3ನೇ ಡೋಸ್ ಪಡೆದಿದ್ದಾರೆ. ಏ.10ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್ ಆರಂಭಿಸಲಾಯಿತು.
ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಎಂದು ಘೋಷಿಸಲಾಗಿತ್ತು. ಆದರೆ, 18-59 ವರ್ಷದವರಿಗೆ ಮಾತ್ರ 225 ರು. ಶುಲ್ಕ ನಿಗದಿ ಪಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಲಾಗಿತ್ತು. ಲಸಿಕೆ ಉಚಿತವಾಗಿ ಲಭಿಸದಿದ್ದ ಕಾರಣ ಹಾಗೂ ಸರ್ಕಾರಿ ಆಸ್ಪತ್ರೆ ಬದಲು ಆಯ್ದ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಲಭಿಸುತ್ತಿದ್ದ ಕಾರಣ 18- 59 ವಯೋಮಾನದ ಬಹುತೇಕ ಜನರು ಲಸಿಕೆಯಿಂದ ದೂರು ಉಳಿದಿದ್ದರು.
ಉಚಿತ 3ನೇ ಡೋಸ್ ನೀಡಿದರೂ ಜನ ಪಡೆಯುತ್ತಿಲ್ಲ: ಸಚಿವ ಸುಧಾಕರ್
ಅದರಲ್ಲೂ ರಾಜ್ಯದಲ್ಲಿ ಏಪ್ರಿಲ್ 10ರಿಂದ ಜುಲೈ 15ವರೆಗೂ (96 ದಿನಗಳಲ್ಲಿ) ನಿತ್ಯ ಸರಾಸರಿ ನಾಲ್ಕು ಸಾವಿರದಂತೆ 3.9 ಲಕ್ಷ ಮಂದಿ (18-59 ವರ್ಷದವರು) ಮಾತ್ರ ಮೂರನೇ ಡೋಸ್ ಪಡೆದಿದ್ದರು. ಆದರೆ, ಜುಲೈ 15ರಿಂದ ಕೇಂದ್ರ ಸರ್ಕಾರವು ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ ಆರಂಭಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾರಂಭಿಸಿದ ನಂತರ ಮೂರನೇ ಡೋಸ್ ಪಡೆಯುವವರ ಸಂಖ್ಯೆ ನಿತ್ಯ 1 ಲಕ್ಷಕ್ಕೆ ಹೆಚ್ಚಳವಾಗಿದೆ.