ನವೀಕರಣಕ್ಕೆ ಅರ್ಜಿ ಹಾಕದ 1500 ಖಾಸಗಿ ಶಾಲೆ: ಸ್ವಯಂ ಘೋಷಣೆಗೆ 1 ವರ್ಷ ಮಾನ್ಯತೆ

By Kannadaprabha News  |  First Published Jan 1, 2025, 9:38 AM IST

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಸೇರಿ ತರಗತಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದರೂ 2024-25ನೇ ಸಾಲಿನ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆ ಮಾತ್ರ ಇನ್ನೂ ಮುಗಿದಿಲ್ಲ. 


• ಲಿಂಗರಾಜು ಕೋರಾ

ಬೆಂಗಳೂರು (ಜ.01): ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಸೇರಿ ತರಗತಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದರೂ 2024-25ನೇ ಸಾಲಿನ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆ ಮಾತ್ರ ಇನ್ನೂ ಮುಗಿದಿಲ್ಲ. ಶಿಕ್ಷಣ ಇಲಾಖೆ ಈಗಾಗಲೇ ಎರಡು ಬಾರಿ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡಿತ್ತಾದರೂ ಸುಮಾರು ಶಾಲೆಗಳು ಇನ್ನೂ ಅರ್ಜಿಯನ್ನೇ ಸಲ್ಲಿಸಿಲ್ಲ. 1500 ಸರ್ಕಾರ ಕಳೆದ ಸಾಲಿನಿಂದ ರಾಜ್ಯ ಪಠ್ಯಕ್ರಮದ ಶಾಲೆಗಳ ಹೊಸ ನೋಂದಣಿ, ಮೊದಲ ಮಾನ್ಯತೆ, ಮಾನ್ಯತೆ ನವೀಕರಣ, ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ ಒಸಿ) ನೀಡಿಕೆ, ಅವುಗಳ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಿದೆ. 

Tap to resize

Latest Videos

ಆ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಇದುವರೆಗೆ 8000ಕ್ಕೂ ಹೆಚ್ಚು ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು, 685 ಶಾಲೆಗಳಿಗೆ 2ನೇ ಅವಧಿಯಲ್ಲೂ ಮಾನ್ಯತೆ ನವೀಕರಣ ದೊರಕಿಲ್ಲ. 148 ಶಾಲೆಗಳ ಅರ್ಜಿಗಳನ್ನು ಜಿಲ್ಲಾ, ತಾಲೂಕು ಹಂತದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 15 ಸಾವಿರಕ್ಕೂ ಹೆಚ್ಚು ಅನುದಾನರಹಿತ ಖಾಸಗಿ ಶಾಲೆಗಳು, ಸುಮಾರು 6 ಸಾವಿರಕ್ಕೂ ಹೆಚ್ಚು ಅನುದಾನಿತ ಖಾಸಗಿ ಶಾಲೆಗಳಿವೆ. ಈ 21 ಸಾವಿರ ಶಾಲೆಗಳ ಪೈಕಿ ಸುಮಾರು 11 ಸಾವಿರ ಶಾಲೆಗಳು ಈಗಾಗಲೇ ಹಿಂದಿನ ಕೆಲ ವರ್ಷಗಳಲ್ಲಿ 5 ವರ್ಷಗಳ ವರೆಗೆ ಮಾನ್ಯತೆ ಪಡೆದುಕೊಂಡಿವೆ. 

ಆ ಶಾಲೆಗಳು ಈ ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಉಳಿದ 10 ಸಾವಿರ ಶಾಲೆಗಳ ಪೈಕಿ 8,637 ಶಾಲೆಗಳು ಈ ವರ್ಷ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಿವೆ. ಇದರಲ್ಲಿ 7804 ಶಾಲೆಗಳಿಗೆ ಮಾನ್ಯತೆ ನವೀಕರಿಸ ಲಾಗಿದೆ. ಉಳಿದ 685 ಶಾಲೆಗಳ ಅರ್ಜಿ ತಿರಸ್ಕೃತ ಗೊಂಡಿದ್ದು ಮಾನ್ಯತೆ ನವೀಕರಿಸಿಲ್ಲ, ಮತ್ತೆ ಅರ್ಜಿ ಆಹ್ವಾನ: ಅರ್ಜಿ ತಿರಸ್ಕೃತಗೊಂಡಿರುವ ಶಾಲೆಗಳು ಮತ್ತೆ ಶಿಕ್ಷಣ ಇಲಾಖೆಯ ಮೂರನೇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗಾಗಿ ಕಾಯುತ್ತಿವೆ. ಬಹಳಷ್ಟು ಶಾಲೆಗಳು ಮಾನ್ಯತೆ ನವೀಕರಣಕ್ಕೆ ಅಗತ್ಯವಿರುವ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಕೊನೆಯ ಹಂತದಲ್ಲಿ ಸರ್ಕಾರ ಹೇಗಿದ್ದರೂ ಮುಂದಿನ ವರ್ಷಕ್ಕೆ ಮಾನದಂಡಗಳನ್ನು ಪೂರ್ಣಗೊಳಿಸುವುದಾಗಿ ಮುಚ್ಚಳಿಕೆ ಬರೆಸಿಕೊಂಡು ಮಾನ್ಯತೆ ನವೀಕರಿಸುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಂಡಿವೆ ಎನ್ನುವುದು ಇಲಾಖೆಯಲ್ಲೇ ಕೇಳಿಬರುತಿದೆ.

ಅಸುರಕ್ಷಿತ ಖಾಸಗಿ ಶಾಲೆಗಳಿಗೂ ಮಾನ್ಯತೆ: ಅಕ್ರಮ ನಡೆದಿರುವ ಆರೋಪ

ಸ್ವಯಂ ಘೋಷಣೆಗೆ 1 ವರ್ಷ ಮಾನ್ಯತೆ: ಶಾಲಾ ಮಾನ್ಯತೆ ನವೀಕರಣಕ್ಕೆ ಶಾಲಾ ನೋಂದಣಿ ಪತ್ರ, ಮೊದಲ ಮಾನ್ಯತೆ ಪತ್ರ, ಮೊದಲ ನವೀಕರಣ ಪತ್ರ, ನಂತರ ಪ್ರತೀ ವರ್ಷಕ್ಕೆ ಸಂಬಂಧಿಸಿದನವೀಕರಣ, ಸೊಸೈಟಿಯಾ ಗಿದ್ದಲ್ಲಿ ಪಿಟಿಆರ್ ಪ್ರತಿ, ಶಾಲೆಯ ಸ್ವಂತ ಜಾಗದ ನಿವೇಶನ ಪತ್ರ, ಖಾತಾ, ಕಂದಾಯ ರಸೀದಿ, ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆದಿದ್ದಲ್ಲಿ ಕನಿಷ್ಠ 30 ವರ್ಷಗಳಿಗೆ ಪಡೆದಿರುವ ನೋಂದಣಿ ಪತ್ರ ಸೇರಿ 22 ದಾಖಲೆಗಳನ್ನು ಖಾಸಗಿ ಶಾಲೆಗಳು ಸಲ್ಲಿಸಬೇಕು. ಈ ಪೈಕಿ ಇತ್ತೀಚಿನ ವರ್ಷಗಳಲ್ಲಿ ಸೇರಿಸಲಾದ ಶಾಲಾ ಜಾಗ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸುವುದು, ಶಾಲಾ ಕಟ್ಟಡ ನಕ್ಷೆ ಮಂಜೂರಾತಿ ಮತ್ತು ಸುರಕ್ಷತಾ ಮಾನದಂಡ ಗಳು, ಅಗ್ನಿ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿರುವ ಮಾನದಂಡಗಳೂ ಸೇರಿವೆ. ಆದರೆ, ಈ ಕೆಲ ಮಾನದಂಡಗಳ ವಿರುದ್ಧ ಕೆಲ ಖಾಸಗಿ ಶಾಲೆಗಳು ಆಕ್ಷೇಪ ಎತ್ತಿ ನ್ಯಾಯಾಂಗ ಹೋರಾಟ ನಡೆಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯಿಸಿ ಮುಂದಿನ ವರ್ಷ ಈ ಮಾನದಂಡಗಳನ್ನು ಪೂರ್ಣ ಗೊಳಿಸುವ ಭರವಸೆಯ ಅಫಿಡವಿಟ್ ಪಡೆದು ಒಂದು ವರ್ಷದ ಮಟ್ಟಿಗೆ ಮಾತ್ರ ಮಾನ್ಯತೆ ನವೀಕರಿಸಲು ಅವಕಾಶ ನೀಡಲಾಗಿದೆ.

click me!