ಅಂತರ್ಜಾಲ ಜ್ಞಾನಕೋಶ ಕಣಜದಲ್ಲಿ1500 ಕೃತಿಗಳು, ಪಠ್ಯ ಪುಸ್ತಕಗಳು ಲಭ್ಯ

By Kannadaprabha News  |  First Published Oct 17, 2024, 11:52 AM IST

ಕನ್ನಡ ಆನ್‌ಲೈನ್ ವಿಶ್ವಕೋಶ ಎಂದೇ ಬಿಂಬಿತವಾಗಿರುವ 'ಕಣಜ' ಅಂತರ್ಜಾಲ ಕನ್ನಡ ಜ್ಞಾನಕೋಶವು ಅಕಾಡೆಮಿ ಮತ್ತು ಪ್ರಾಧಿಕಾರಗಳ ಸುಮಾರು 1500ಕ್ಕೂ ಹೆಚ್ಚು ವಿವಿಧ ಲೇಖಕರ ಕೃತಿಗಳನ್ನು ಡಿಜಿಟಲೀಕರಣಗೊಳಿಸಿ (ಇ-ಪುಸ್ತಕ) ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದೆ.


• ಸಂಪತ್ ತರೀಕೆರೆ

ಬೆಂಗಳೂರು (ಅ.17): ಕನ್ನಡ ಆನ್‌ಲೈನ್ ವಿಶ್ವಕೋಶ ಎಂದೇ ಬಿಂಬಿತವಾಗಿರುವ 'ಕಣಜ' ಅಂತರ್ಜಾಲ ಕನ್ನಡ ಜ್ಞಾನಕೋಶವು ಅಕಾಡೆಮಿ ಮತ್ತು ಪ್ರಾಧಿಕಾರಗಳ ಸುಮಾರು 1500ಕ್ಕೂ ಹೆಚ್ಚು ವಿವಿಧ ಲೇಖಕರ ಕೃತಿಗಳನ್ನು ಡಿಜಿಟಲೀಕರಣಗೊಳಿಸಿ (ಇ-ಪುಸ್ತಕ) ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದೆ. 'ಕಣಜ' ಸಮಗ್ರ ಜ್ಞಾನಕೋಶದ ಮಾದರಿ ಯಾಗಿದ್ದು ಕರ್ನಾಟಕದ ಸಾಹಿತ್ಯ, ಸಿನಿಮಾ, ವಿಜ್ಞಾನ-ತಂತ್ರಜ್ಞಾನ, ಪರಿಸರ ಚಳವಳಿ, ಕ್ರೀಡೆ, ವೈದ್ಯಕೀಯ ರಂಗ, ಸಂಗೀತ-ನೃತ್ಯ, ರಂಗಭೂಮಿ, ಪತ್ರಿಕೋದ್ಯಮ... ಹೀಗೆ ಸಮಗ್ರ ಮಾಹಿತಿ ಸಿಗುವ ವೆಬ್‌ಪೋರ್ಟಲ್ ಆಗಿದೆ. 

Tap to resize

Latest Videos

2010ರಲ್ಲಿ ಇಂಗ್ಲೀಷ್ ವಿಕಿಪಿಡಿಯಾ ಮಾದರಿಯಲ್ಲಿ ರಾಜ್ಯ ಜ್ಞಾನ ಆಯೋಗ ಕಣಜವನ್ನು ಆರಂಭಿಸಿತ್ತು. 2013ರಿಂದ ಕಣಜವನ್ನು ರಾಜ್ಯ ಸರ್ಕಾರದ ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಐಐಐಟಿ-ಬಿ (ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ-ಬೆಂಗಳೂರು) ಸಂಸ್ಥೆಯು ನಿರ್ವಹಿಸುತ್ತಿತ್ತು. 2015ರ ಡಿಸೆಂಬರ್‌ವರೆಗೆ ಐಐಐಟಿ-ಬಿ ಉಸ್ತುವಾರಿಯಲ್ಲಿದ್ದ 'ಕಣಜ' ಮುಚ್ಚುವಂತ ಸ್ಥಿತಿಗೆ ಬಂದಿತ್ತು. ಆ ಅವಧಿಯಲ್ಲಿ 'ಕಣಜ'ದ ಒಡಲಿನಲ್ಲಿ ಇದ್ದದ್ದು ಕೇವಲ 2,420 ಲೇಖನಗಳು ಮತ್ತು 916 ಛಾಯಾಚಿತ್ರಗಳನ್ನು ಮಾತ್ರ ಇದ್ದವು. 

ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತೊಡಕು ಶೀಘ್ರ ನಿವಾರಣೆ?

ಆ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೆಕ್ಕೆಗೆ ಬಂದ ಕಣಜ ಸಾಕಷ್ಟು ಅಭಿವೃದ್ಧಿಯಾಗಿದ್ದು, 1500ಕ್ಕೂ ಹೆಚ್ಚು ಕೃತಿಗಳು, ಶಾಲಾ ಪಠ್ಯ ಪುಸ್ತಕಗಳು, ಸಾವಿರಾರು ಲೇಖನಗಳು, ಆಡಿಯೋಗಳು, ಛಾಯಾ ಚಿತ್ರಗಳು, ಶಬ್ದಕೋಶ, ಪತ್ರಿಕೆಗಳು, ಅಂಕಣಗಳು, ಆರೋಗ್ಯ, ಅಂಬೇಡ್ಕರ್  ಅವರ ಬರಹ, ಭಾಷಣಗಳು, ಸೇರ್ಪಡೆಗೊಂಡಿವೆ. ಈವರೆಗೆ ಕಣಜ ವೆಬ್‌ಸೈಟ್‌ಗೆ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿರುವುದು ಕಣಜದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಅಕಾಡೆಮಿ ಕೃತಿಗಳು: ಪ್ರಸ್ತುತ ಕಣಜ ತಂಡವು ಕರ್ನಾಟಕ ನಾಟಕ ಅಕಾಡೆಮಿ-70 ಕೃತಿಗಳು, ಜಾನಪದ ಅಕಾಡೆಮಿ- 33 ಕೃತಿಗಳು, ಕನ್ನಡ ಪುಸ್ತಕ ಪ್ರಾಧಿಕಾರ- 171, ಕರ್ನಾಟಕ ಯಕ್ಷಗಾನ ಅಕಾಡೆಮಿ-120, ಸಂಗೀತ ನೃತ್ಯ ಅಕಾಡೆಮಿ - 24, ಪದಕೋಶಪುಸ್ತಕಗಳು-35, ವ್ಯಕ್ತಿ ಪರಿಚಯದ 40, ಆರೋಗ್ಯ ಮಾಹಿತಿಯ 40, ವಿಜ್ಞಾನ ಮಾಹಿತಿಯ 10, ಋಗ್ವದ ಸಂಹಿತೆ-25, ಕರ್ನಾಟಕ ಕಾನೂನುಗಳು ಸಂಪುಟ 5ರಿಂದ 11ರವರೆಗೆ, ಜನಪದ ಹಾಗೂ ಜಾನಪದ ಕೃತಿಗಳು ಸೇರಿದಂತೆ ಅನೇಕ ಪುಸ್ತಕಗಳನ್ನು ಕಣಜ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಲಾಗಿದೆ. ಇನ್ನು 300ಕ್ಕೂ ಹೆಚ್ಚು ಕೃತಿಗಳನ್ನು ಸ್ಕ್ಯಾನ್ ಮಾಡಲಾಗಿದ್ದು ವೆಬ್ ಸೈಟ್‌ಗೆ ಸೇರ್ಪಡೆಗೊಳಿಸುವುದೊಂದು ಬಾಕಿ ಉಳಿದಿದೆ. 

ಸಮಗ್ರ ಅಭಿವೃದ್ಧಿ ಗುರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿ, ಪ್ರಾಧಿಕಾರಗಳು ಹೊರತಂದ ಕೃತಿಗಳನ್ನು ಮೊದಲು ಡಿಜಿಟಲೀಕರಣಗೊಳಿಸಿ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುವ ಗುರಿಯನ್ನು ಕಣಜ ತಂಡ ಇಟ್ಟುಕೊಂಡಿದೆ. ಆ ನಂತರ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳ ಅನುಮತಿ ಪಡೆದು ಅವರ ಕೃತಿಗಳನ್ನು ಹಾಗೂ ವಿಶ್ವವಿದ್ಯಾ ನಿಲಯಗಳನ್ನು ಸಂಪರ್ಕಿಸಿ ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಪ್ರಾಕಾರಗಳ ಕೃತಿಗಳನ್ನು ಕಣಜದ ಬುಟ್ಟಿಗೆ ಸೇರಿಸುವ ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ನಿಗಮ ಹಗರಣ: ಹವಾಲಾಗೆ 20 ರು. ನೋಟು ಪಾಸ್‌ವರ್ಡ್!

ಪಠ್ಯಪುಸ್ತಕಗಳು ಲಭ್ಯ: 2016-17ನೇ ಸಾಲಿನಲ್ಲಿ ಪ್ರಕಟವಾದ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ ವರೆಗಿನ ಶಾಲಾ ಪಠ್ಯಪುಸ್ತಕಗಳು ಸುಲಭವಾಗಿ ಕಣಜ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಪಿಡಿಎಫ್ ಮಾದರಿಯನ್ನು ಉಚಿತವಾಗಿ ಡೌನ್‌ ಲೋಡ್ ಮಾಡಿ ಕೊಂಡು ವಿದ್ಯಾರ್ಥಿಗಳು ಅಧ್ಯಯನಕ್ಕೆ ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಕನ್ನಡ ನಿಘಂಟು ಕಣಜದಲ್ಲಿದೆ. ಜನಪದ, ಸಾಹಿತ್ಯ, ವಿಜ್ಞಾನ, ತಂತ್ರ ಜ್ಞಾನ ಹೀಗೆ ಎಲ್ಲ ಮಾದರಿಯ ಮಾಹಿತಿ ಯೂ ಇಲ್ಲಿಲಭ್ಯವಿದ್ದು ವಿದ್ಯಾ ರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ.

click me!