ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಸಮಾಧಾನಗೊಂಡ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ಜಿಲ್ಲೆ ಸಿಂಧನೂರು ತಾಲೂಕಿನ ಆರ್ಎಚ್ ಕ್ಯಾಂಪ್ ನಂ.1 ರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ರಾಯಚೂರು (ಆ.6) : ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಸಮಾಧಾನಗೊಂಡ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ಜಿಲ್ಲೆ ಸಿಂಧನೂರು ತಾಲೂಕಿನ ಆರ್ಎಚ್ ಕ್ಯಾಂಪ್ ನಂ.1 ರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಗ್ರಾ.ಪಂ.ನಲ್ಲಿ ಒಟ್ಟು 38 ಸದಸ್ಯರಿದ್ದು, ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಳೆದ ಆ.2ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ 19 ಜನ ಸದಸ್ಯರ ಬೆಂಬಲದೊಂದಿಗೆ ಎಂ.ರಹಮ್ಮದ್ ಪಾಷಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಜೆಡಿಎಸ್-ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ 15 ಜನ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಸಾಮೂಹಿಕ ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಲು ಶುಕ್ರವಾರ ಗ್ರಾ.ಪಂ. ಕಚೇರಿಗೆ ಹೋಗಿದ್ದು ಅಲ್ಲಿ ಅಧ್ಯಕ್ಷರಿಲ್ಲದ ಕಾರಣಕ್ಕೆ ಆವಕ-ಜಾವಕ (ಇನ್ ವಾರ್ಡ್)ದಲ್ಲಿ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ಇನ್ನುಳಿದ ಮೂವರು ಸದಸ್ಯರು ತಟಸ್ಥ ಸ್ಥಿತಿಯಲ್ಲಿದ್ದಾರೆ.
undefined
ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!
ಕಳೆದ ತಿಂಗಳು ಆರ್ಎಚ್ಕ್ಯಾಂಪ್ ನಂ.2ರಲ್ಲಿ ಎರಡು ಕೋಮಿನ ನಡುವೆ ಸಂಘರ್ಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಸದಸ್ಯರು ನಮಗೆ ಅಲ್ಪಸಂಖ್ಯಾತರ ಅಧ್ಯಕ್ಷರು ಬೇಡವೆಂದು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಪುನರ್ವಸತಿ ಕ್ಯಾಂಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಗಾಲಿ ನಿವಾಸಿಗಳು ವಾಸವಾಗಿದ್ದು, ನಾವು ಸಾಮಾನ್ಯ ಮೀಸಲಾತಿ ಸ್ಥಾನದಲ್ಲಿ ಬರುತ್ತೇವೆ. ಆದಾಗ್ಯೂ ಸಾಮಾನ್ಯರಿಗೆ ಅಧ್ಯಕ್ಷ ಸ್ಥಾನ ನೀಡದೆ, ಕಡೆಗಣಿಸಿ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಖಂಡನೀಯ. ಇದನ್ನು ನಾವು ಒಪ್ಪುವುದಿಲ್ಲ. ಕುತಂತ್ರ ರಾಜಕೀಯದಿಂದ ಅಧ್ಯಕ್ಷ ಸ್ಥಾನದಿಂದ ಬಂಗಾಲಿ ಸಮುದಾಯ ವಂಚಿತವಾಗಿದೆ ಎಂದು ಬಂಗಾಲಿ ಸಮುದಾಯದ ಗ್ರಾಪಂ ಸದಸ್ಯರು ಆರೋಪಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ನಮಗೆ ಅಧ್ಯಕ್ಷ ಸ್ಥಾನ ಬಂದಿದ್ದು, ಇಲ್ಲಿವರೆಗೂ ನಮಗೆ ಮತ್ತೆ ಅಧ್ಯಕ್ಷ ಸ್ಥಾನದ ಅವಕಾಶ ಬಂದಿಲ್ಲ. ಈಗ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ. ಆದ್ದರಿಂದ ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡದೆ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ವಿರೋಧ ಇದೆ ಎಂದು ಅಸಮಧಾನಗೊಂಡಿರುವ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಗೆ ಮುಂದಾಗಿದ್ದಾರೆ. ಗ್ರಾಪಂ ಕಾರ್ಯಾಲಯದಲ್ಲಿ ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ಪಿಡಿಒ ಅಧ್ಯಕ್ಷರ ಗಮನಕ್ಕೆ ತಂದಿದ್ದು 15 ದಿನಗಳ ಗಡುವಿನಲ್ಲಿ ರಾಜೀನಾಮೆ ಪತ್ರಗಳನ್ನು ಸದಸ್ಯರು ವಾಪಸ್ ಪಡೆಯಲು ಕಾಲಾವಕಾಶವಿದೆ.
ದುರ್ಗಾ ದೇವಸ್ಥಾನಕ್ಕೆ ನುಗ್ಗಿ ದಾಂಧಲೆ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಆರ್ಎಚ್ ಕ್ಯಾಂಪ್ ನಂ.1 ಗ್ರಾಪಂ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಗ್ರಾಪಂ ಕಾರ್ಯಾಲಯಕ್ಕೆ ಸಲ್ಲಿಸಿರುವುದರ ಬಗ್ಗೆ ಪಿಡಿಒ ಗಮನಕ್ಕೆ ತಂದಿದ್ದಾರೆ. 15 ದಿನಗಳೊಳಗೆ ಅವರು ರಾಜೀನಾಮೆ ವಾಪಸ್ ಪಡೆಯಲು ಅವಕಾಶವಿದ್ದು, ವಾಪಸ್ ಪಡೆಯದೇ ಇದ್ದರು ರಾಜೀನಾಮೆಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಿದ್ದು ಅವರೇ ಮುಂದಿನ ಕ್ರಮ ಜರುಗಿಸಲಿದ್ದಾರೆ.
-ಅವಿನಾಶ ಶಿಂಧೆ, ಸಹಾಯಕ ಆಯುಕ್ತ, ಸಿಂಧನೂರು ವಿಭಾಗ
ಹಲವಾರು ವರ್ಷಗಳಿಂದ ಜಾತಿ, ಧರ್ಮ ಮರೆತು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಆದರೆ ಕೆಲವರು ಹಿಂದೂ-ಮುಸ್ಲಿಂ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ 15 ಜನ ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದು, ಅವರೊಂದಿಗೆ ಮುಕ್ತವಾಗಿ ಚರ್ಚಿಸಿ ರಾಜೀನಾಮೆ ವಾಪಾಸ್ ಪಡೆಯಲು ಮನ ಹೊಲಿಸಲಾಗುವುದು
. -ಎಂ.ರಹೆಮ್ಮದ್ ಪಾಷಾ, ಗ್ರಾಪಂ ಹೊಸ ಆಧ್ಯಕ್ಷ ಆರ್ಎಚ್ ಕ್ಯಾಂಪ್ ನಂ.1