ಸುಮ್ಮನೆ ಹೊರ ಬಂದರೆ ಹುಷಾರ್‌: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು!

By Kannadaprabha NewsFirst Published May 10, 2021, 7:19 AM IST
Highlights

*  ಇಂದಿನಿಂದ 14 ದಿನ ರಾಜ್ಯದಲ್ಲಿ ಕಟ್ಟುನಿಟ್ಟಿನ ಸೆಮಿ ಲಾಕ್‌ಡೌನ್‌

* ಅಗತ್ಯ ವಸ್ತು ಖರೀದಿಗೆ ಮಾತ್ರ ನಿತ್ಯ ಬೆಳಿಗ್ಗೆ 4 ತಾಸು ಅವಕಾಶ

* ಬೆಳಗ್ಗೆ 10ರ ನಂತರ ರಸ್ತೆಗಿಳಿದರೆ ಪೊಲೀಸರಿಂದ ಶಾಸ್ತಿ, ವಾಹನ ಜಪ್ತಿ

ಬೆಂಗಳೂರು(ಮೇ.10): ಕೋವಿಡ್‌ ಸೋಂಕಿನ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಿಸಿರುವ ಎರಡು ವಾರಗಳ ಸೆಮಿ ಲಾಕ್‌ಡೌನ್‌ ಸೋಮವಾರ ಬೆಳಗ್ಗೆಯಿಂದ ಅನುಷ್ಠಾನಕ್ಕೆ ಬರಲಿದ್ದು, ಶತಾಯಗತಾಯ ಜನ ಸಂಚಾರವನ್ನು ನಿರ್ಬಂಧಿಸಲು ರಾಜ್ಯಾದ್ಯಂತ ಪೊಲೀಸರು ಸಜ್ಜಾಗಿದ್ದಾರೆ.

ವಾಹನಗಳ ಅನಗತ್ಯ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್‌ ಇರಲಿದ್ದು, ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಓಡಾಟ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಿ ಬರಬೇಕಾಗಿದೆ.

ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಕೇವಲ ನಾಲ್ಕು ತಾಸುಗಳ ಕಾಲ ದಿನಸಿ ಅಂಗಡಿ, ತರಕಾರಿ ವ್ಯಾಪಾರ, ಮಾಂಸ, ಮೀನಿನಂಗಡಿ, ಮದ್ಯದಂಗಡಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತದನಂತರದಲ್ಲಿ ಯಾವುದೇ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇಲ್ಲ.

ವ್ಯಾಪಾರ-ವಹಿವಾಟಿಗೆ ನೀಡಿರುವ ಕಾಲಾವಕಾಶದಲ್ಲಿ ಸಾರ್ವಜನಿಕರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ಒಂದು ವೇಳೆ ವಾಹನ ಬಳಕೆ ಮಾಡಿದರೆ ಪೊಲೀಸರು ವಾಹನಗಳನ್ನು ಜಪ್ತಿ ಮಾಡಲಿದ್ದಾರೆ. ಭಾನುವಾರದಿಂದಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಯ ಬಳಿಕ ಮತ್ತಷ್ಟುಕಟ್ಟುನಿಟ್ಟಾಗಿ ಜಾರಿ ಮಾಡಲಿದ್ದಾರೆ. ಒಂದು ರೀತಿ ಕರ್ನಾಟಕ ಬಂದ್‌ ರೀತಿ ಇರಲಿದೆ ಎನ್ನಲಾಗಿದೆ.

ಗಾರ್ಮೆಂಟ್ಸ್‌ ಉದ್ಯಮಕ್ಕೆ ನೀಡಿದ ಸಡಿಲಿಕೆಯನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆ ಮಾಡುವ ವಲಯವನ್ನು ಹೊರತುಪಡಿಸಿ ಇನ್ನಿತರ ಕೈಗಾರಿಕೆಗಳಿಗೆ ನಿಷೇಧ ಹೇರಲಾಗಿದೆ. ಯಾವ ಕೈಗಾರಿಕೆಗಳು ಕಾರ್ಯಾಚರಣೆ ಕೈಗೊಳ್ಳಲಿವೆ ಎಂಬುದನ್ನು ಕೈಗಾರಿಕೆ ಇಲಾಖೆಯೂ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ಖಾಸಗಿ ಕಂಪನಿಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಮನೆಯಿಂದಲೇ ಕೆಲಸ ಮಾಡಲು ಯಾವುದೇ ಸಮಸ್ಯೆ ಇಲ್ಲ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿದಂತೆ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ವಾಹನ ವ್ಯವಸ್ಥೆ ಇರುವುದಿಲ್ಲ. ಜನರು ತಮ್ಮ ಸ್ವಂತ ವಾಹನಗಳಲ್ಲಿಯೂ ಅನಿವಾರ್ಯ ಕಾರಣ ಹೊರತುಪಡಿಸಿ ಅನಗತ್ಯವಾಗಿ ಸಂಚರಿಸುವಂತಿಲ್ಲ. ಸಿನಿಮಾ ಮಂದಿರ, ಶಾಪಿಂಗ್‌ ಮಾಲ್‌ಗಳು, ಯೋಗ ಕೇಂದ್ರಗಳು, ಜಿಮ್‌ಗಳು, ಸ್ವಿಮ್ಮಿಂಗ್‌ ಫäಲ್‌, ಪಾರ್ಕ್ಗಳು ಬಂದ್‌ ಇರಲಿವೆ. ರಾಜಕೀಯ, ಧಾರ್ಮಿಕ ಕಾರ್ಯಗಳನ್ನು ನಿಷೇಧಿಸಲಾಗಿದೆ. ವಿಮಾನ , ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆದರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಪ್ರಯಾಣಿಸುವವರಿಗಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್‌ಗಳು, ಕ್ಯಾಬ್‌ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣಿಕರು ಕಡ್ಡಾಯವಾಗಿ ಟಿಕೆಟ್‌ ಹೊಂದಿರಬೇಕು. ಇಲ್ಲದಿದ್ದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಸೇವೆಗಳು, ಬ್ಯಾಂಕ್‌ಗಳು, ಎಟಿಎಂಗಳು, ಇನ್ಶೂರೆನ್ಸ್‌ ಕಂಪನಿಗಳು, ಕಡಿಮೆ ಸಂಖ್ಯೆಯ ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿಗಳು, ಕೇಂದ್ರ ಕಚೇರಿಗಳು, ಖಾಸಗಿ ಭದ್ರತೆ ಸೇವೆಗಳು ಲಭ್ಯ ಇರಲಿವೆ. ಪೆಟ್ರೋಲ್‌ ಬಂಕ್‌ಗಳು, ಗ್ಯಾಸ್‌ ವಿತರಕರ ಸೇವೆಗಳು ಕಾರ್ಯನಿರ್ವಹಿಸಲಿವೆ.

"

ಮದುವೆ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಯಲ್ಲಿ ಬದಲಾವಣೆಗೊಳಿಸಿ 50 ಮಂದಿಯ ಬದಲಿಗೆ 40 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅದೂ ಮನೆಯಲ್ಲಿ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಮದುವೆಗೆ ಬರುವವರ ವಿವರವನ್ನು ಬಿಬಿಎಂಪಿ ವಲಯ ಜಂಟಿ ಆಯುಕ್ತರು ಮತ್ತು ಇತರೆ ಜಿಲ್ಲೆಯಲ್ಲಿ ತಹಶೀಲ್ದಾರ್‌ಗಳಿಗೆ ನೀಡಬೇಕು. ಅಲ್ಲದೇ, ಮೃತರ ಅಂತ್ಯಸಂಸ್ಕಾರದಲ್ಲಿ ಕೇವಲ ಐವರು ಮಾತ್ರ ಭಾಗವಹಿಸಬೇಕು.

ಅಗತ್ಯ ಕೈಗಾರಿಕೆಗಳಿಗೆ ಅನುಮತಿ:

ಸ್ಥಳದಲ್ಲಿಯೇ ಕಾರ್ಮಿಕರು, ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದಾಗಿದೆ. ಉತ್ಪಾದನಾ ಘಟಕಗಳಿಗೆ ತೆರಳುವ ಕೈಗಾರಿಕೆಗಳ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರಬೇಕು. ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟನೆಗಳು ಕಾರ್ಯಾಚರಣೆ ನಡೆಸಲಿವೆ. ಅಲ್ಲದೇ, ಸ್ಥಳದಲ್ಲಿಯೇ ಕಾರ್ಮಿಕರು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಮತ್ತು ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಅದಿರು ಗಣಿಗಾರಿಕೆ, ಸಿಮೆಂಟ್‌ ಕಾರ್ಖಾನೆಗೆ ಬಳಕೆ ಮಾಡುವ ಕಲ್ಲುಗಾರಿಕೆಗೆ ಅವಕಾಶ ನೀಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!