ಬೆಂಗಳೂರು: ಫೆ.29ಕ್ಕೆ ಬಿಬಿಎಂಪಿಯಿಂದ ₹13 ಸಾವಿರ ಕೋಟಿ ಬಜೆಟ್‌?

By Kannadaprabha NewsFirst Published Feb 26, 2024, 7:35 AM IST
Highlights

ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಬಿಬಿಎಂಪಿ ಫೆ.29ಕ್ಕೆ ಮುಹೂರ್ತ ನಿಗದಿ ಪಡಿಸಿದ್ದು, ಈ ಬಾರಿ 12ರಿಂದ 13 ಸಾವಿರ ಕೋಟಿ ರುಪಾಯಿ ಗಾತ್ರದ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಫೆ.26): ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಬಿಬಿಎಂಪಿ ಫೆ.29ಕ್ಕೆ ಮುಹೂರ್ತ ನಿಗದಿ ಪಡಿಸಿದ್ದು, ಈ ಬಾರಿ 12ರಿಂದ 13 ಸಾವಿರ ಕೋಟಿ ರುಪಾಯಿ ಗಾತ್ರದ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ.

ಬಿಬಿಎಂಪಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ₹3,589 ಕೋಟಿ ಅನುದಾನ, 15ನೇ ಹಣಕಾಸು ಆಯೋಗದಡಿ ಸುಮಾರು ₹500 ಕೋಟಿವರೆಗೆ ಅನುದಾನ ಬಿಬಿಎಂಪಿಗೆ ಲಭ್ಯವಾಗಲಿದೆ. ಈ ಅನುದಾನ ಒಳಗೊಂಡಂತೆ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲೋಕಸಭೆ ಚುನಾವಣೆ ವೇಳಾ ಪಟ್ಟಿ ಮಾರ್ಚ್‌ ಮೊದಲ ವಾರ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಫೆ.29ರ ಗುರುವಾರ ಬಜೆಟ್‌ ಮಂಡನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಹೊಸ ರೂಪ ನೀಡಲು ಪೂರಕವಾಗಿ ಬಿಬಿಎಂಪಿ ಬಜೆಟ್ ಮಂಡನೆ: ಡಿಕೆ ಶಿವಕುಮಾರ್

12ರಿಂದ 13 ಸಾವಿರ ಕೋಟಿ ರು. ಗಾತ್ರ:

2023-24ನೇ ಸಾಲಿನಲ್ಲಿ ₹11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು ₹11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್‌ ಗಾತ್ರವನ್ನು ₹11,885 ಕೋಟಿಗೆ ಹೆಚ್ಚಿಸಿತ್ತು. ಈ ವರ್ಷ ಹೆಚ್ಚಿನ ಆದಾಯ ನಿರೀಕ್ಷಿಸಿ ಬಜೆಟ್‌ ಗಾತ್ರ ₹12 ಸಾವಿರ ಕೋಟಿಯಿಂದ ₹13 ಸಾವಿರ ಕೋಟಿ ಆಸುಪಾಸಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಹೆಚ್ಚಿನ ಆದಾಯದ ನಿರೀಕ್ಷೆಗಳು?

2024-25ನೇ ಸಾಲಿನಲ್ಲಿ ₹4,100 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕ್ಯಾಪಿಟಲ್‌ ವ್ಯಾಲ್ಯೂ ವ್ಯವಸ್ಥೆಯಡಿ ಆಸ್ತಿ ತೆರಿಗೆ ಸಂಗ್ರಹಿಸಲು ಕರಡು ಅಧಿಸೂಚನೆ ಪ್ರಕಟಿಸಿದೆ. ಇದರಿಂದ ಹೆಚ್ಚುವರಿ ಒಂದು ಸಾವಿರ ಕೋಟಿ ರು., ಪ್ರೀಮಿಯಂ ಎಫ್‌ಐಆರ್‌ ಜಾರಿಯಿಂದ ಒಂದು ಸಾವಿರ ಕೋಟಿ ರು., ಜಾಹೀರಾತು ತೆರಿಗೆಯಿಂದ ₹750 ಕೋಟಿ, ಎಸ್‌ಡಬ್ಲ್ಯೂಎಂ ಬಳಕೆದಾರರ ಶುಲ್ಕ ₹850 ಕೋಟಿ ಸಂಗ್ರಹ ನಿರೀಕ್ಷೆ ಹೊಂದಿದೆ. ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವನ್ನು 4ರಿಂದ 6 ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಆಸ್ತಿ ತೆರಿಗೆ ಸುಸ್ತಿದಾರರಿಗೆ ಒಟಿಎಸ್‌ ಯೋಜನೆ ಜಾರಿ ಮಾಡಿದ್ದು, 500 ರಿಂದ ಒಂದು ಸಾವಿರ ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಹೊಂದಿದೆ.

4ನೇ ಬಾರಿ ಅಧಿಕಾರಿಗಳಿಂದ ಮಂಡನೆ

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆಪ್ಟಂಬರ್‌ನಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಆಯವ್ಯಯವನ್ನು ಪಾಲಿಕೆ ಅಧಿಕಾರಿಗಳೇ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಮಂಡಿಸಲಿದ್ದಾರೆ.

ಹೊಣೆಗಾರಿಕೆಯಷ್ಟೇ ಬಜೆಟ್‌?

ಆದಾಯಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳ ಘೋಷಣೆಯಿಂದ ಪ್ರಸ್ತುತ ಬಿಬಿಎಂಪಿಯು ವಿವಿಧ ಕಾಮಗಾರಿಗಳ ಸಂಬಂಧ ಒಟ್ಟು ₹13,657 ಕೋಟಿ ಬಾಕಿ ಬಿಲ್ಲನ್ನು ಗುತ್ತಿಗೆದಾರರಿಗೆ ಪಾವತಿಸುವ ಹೊಣೆಗಾರಿ ಹೊಂದಿದೆ. ಹೀಗಾಗಿ 2024-25 ಸಾಲಿನಲ್ಲಿ ಬಿಬಿಎಂಪಿಯು ತಾನು ಹೊಂದಿರುವ ಹೊಣೆಗಾರಿಕೆ ಮೊತ್ತದಷ್ಟೇ ಬಜೆಟ್‌ ಮಂಡಿಸಬೇಕಾಗಿದೆ.
ಆರ್ಥಿಕ ಶಿಸ್ತಿಗೆ ತಿಲಾಂಜಲಿ?

ಕಳೆದ ಎರಡು ವರ್ಷಗಳ ಹಿಂದೆ ಬಿಬಿಎಂಪಿಯ ಆದಾಯಕ್ಕೆ ತಕ್ಕಂತೆ ಬಜೆಟ್‌ ರೂಪಿಸಿ ಮಂಡನೆ ಮಾಡುವುದು. ಅನಗತ್ಯ ಘೋಷಣೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಬಿಬಿಎಂಪಿ ವಿತ್ತೀಯ ಹೊಂದಾಣಿಕೆ ಮತ್ತು ಬಜೆಟ್‌ ನಿರ್ವಹಣೆ ನಿಯಮ-2021 ಜಾರಿಗೊಳಿಸಲಾಗಿದೆ. ಆದರೆ, 2022-23 ಹಾಗೂ 2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ ರೂಪಿಸುವ ವೇಳೆ ಪಾಲನೆ ಮಾಡಿಲ್ಲ. ಈ ಬಾರಿಯೂ ಆರ್ಥಿಕ ಶಿಸ್ತು ಪಾಲನೆಯಾಗುವುದು ಅನುಮಾನವಾಗಿದೆ. 

ಆದಾಯ ಮೀರಿದ ಯೋಜನೆಗಳಿಂದ ಬಿಬಿಎಂಪಿಗೆ ₹13000 ಕೋಟಿ ಬಿಲ್‌ ಬಾಕಿ!

ಪುರಭವನದಲ್ಲಿ ಬಜೆಟ್‌:

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕೆಂಪೇಗೌಡ ಪೌರಸಭಾಂಗಣದ ನವೀಕರಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ, ಕಳೆದ ಬಾರಿಯಂತೆ ಆಯವ್ಯಯವನ್ನು ನಗರದ ಪುರಭವನದಲ್ಲಿ ಮಂಡನೆಯಾಗಲಿದೆ.

click me!