
ಬೆಂಗಳೂರು(ಮಾ.17): ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ಪರಿಹಾರವು(GST Compensation) 12,909 ಕೋಟಿ ರು. ಬಾಕಿ ಇದ್ದು, ರಾಜ್ಯಕ್ಕೆ ಮುಂಬರುವ ವರ್ಷದಲ್ಲಿ ಪಾವತಿಸುವ ಕುರಿತು ಕೇಂದ್ರ ತಿಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
ಬುಧವಾರ ಬಜೆಟ್(Karnataka Budget) ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಆರ್ಥಿಕ ವರ್ಷ 2017-18ನೇ ಸಾಲಿನಿಂದ ಶೇ.14ರ ಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿ ಇದೆ. ರಾಜ್ಯಕ್ಕೆ ಜಿಎಸ್‌ಟಿ ಪರಿಹಾರವಾಗಿ 97,688 ಕೋಟಿ ರು. ಬರಬೇಕಾಗಿದ್ದು, ಈವರೆಗೆ ಒಟ್ಟು 54,263 ಕೋಟಿ ರು. ಬಂದಿದೆ. 30,516 ಕೋಟಿ ರು. ಸಾಲದ ರೂಪದಲ್ಲಿ ನೀಡಲಾಗಿದೆ. ಇನ್ನು 12,909 ಕೋಟಿ ರು. ಬಾಕಿ ಇದೆ. ಮುಂಬರುವ ವರ್ಷದಲ್ಲಿ ಕೇಂದ್ರವು(Central Government) ನೀಡುವ ಭರವಸೆ ಇದೆ ಎಂದರು.
GST Council Meeting ಜಿಎಸ್‌ಟಿ ಕನಿಷ್ಠ ದರ ಶೇ.8ಕ್ಕೇರಿಕೆ?
ಕೆಲವು ಸಂದರ್ಭದಲ್ಲಿ ಅಭಿವೃದ್ಧಿ ಪ್ರಮಾಣ ಕಡಿಮೆಯೂ ಆಗಿದೆ. ಆದರೂ ರಾಜ್ಯದ ಅರ್ಥಿಕತೆಯನ್ನು ಸಮಾತೋಲನ ಕಾಯ್ದುಕೊಳ್ಳಲಾಗಿದೆ. ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿದಾಗ ಸತ್ಯಾಂಶ ತಿಳಿಯಲಿದೆ. ಕೋವಿಡ್‌ನಂತಹ ಸಮಯದಲ್ಲಿ ಆರ್ಥಿಕತೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕರು ರಾಜ್ಯ ಸರ್ಕಾರವು(Government of Karnataka) ಸಾಲದ ಮೊತ್ತ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಸಾಲ ಮೊತ್ತದ ಹೆಚ್ಚಾಗಲು ಕಾರಣಗಳೇನು ಎಂಬುದನ್ನು ಅವಲೋಕಿಸದೆ ಟೀಕೆ ಮಾಡಬಾರದು. ಎರಡು ವರ್ಷದಲ್ಲಿ ಕೋವಿಡ್(Covid-19) ನಿಯಂತ್ರಣಕ್ಕಾಗಿ 15,645 ಕೋಟಿ ರು. ವೆಚ್ಚ ಮಾಡಲಾಗಿದೆ. ಅಲ್ಲದೇ, ಅಬಕಾರಿ ಹೊರತುಪಡಿಸಿದರೆ ಇತರೆ ತೆರಿಗೆಯ ಸ್ವೀಕೃತಿ ಕಡಿಮೆಯಾಗಿದೆ. 20-21ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಲ್ಲಿ 636 ಕೋಟಿ ರು. ಹೆಚ್ಚಳವಾದರೆ, ಇನ್ನುಳಿದ ತೆರಿಗೆ ಇಲಾಖೆಯಲ್ಲಿ ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಯಲ್ಲಿ(Commercial Tax) 11,404 ಕೋಟಿ ರು., ಮೋಟಾರು ವಾಹನದಲ್ಲಿ 2079 ಕೋಟಿ ರು., ನೋಂದಣಿ ಮತ್ತು ಮುದ್ರಾಂಕದಲ್ಲಿ 1500 ಕೋಟಿರು, ಇತರೆ ತರಿಗೆಯಲ್ಲಿ 540 ಕೋಟಿ ರು., ಕಡಿಮೆಯಾಗಿದೆ. ಕೇಂದ್ರದ ತೆರಿಗೆ ಪಾಲಿನಲ್ಲಿಯೂ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಮಾಡಿದ ಅಂದಾಜಿಗಿಂತ 21,835 ಕೋಟಿ ರು. ಕಡಿಮೆಯಾಯಿತು. ಈ ಎಲ್ಲಾ ಕಾರಣಗಳಿಗಾಗಿ ಖರ್ಚು ನಿಭಾಯಿಸಲು ಅನಿವಾರ್ಯವಾಗಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು.
ಇತ್ತೀಚೆಗೆ ಅರ್ಥಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಮುಂದಿನ ದಿನದಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಆದಾಯ ಕೊರತೆಯನ್ನು ಕಡಿಮೆ ಮಾಡುತ್ತೇವೆ. ಬದ್ಧವೆಚ್ಚಗಳನ್ನು ಶೇ.98ರಷ್ಟು ಇರುವುದನ್ನು ಶೇ.89ಗೆ ಇಳಿಸುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಗಮನಿಸಿದಾಗ ರಾಜ್ಯದ ಅರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬುದನ್ನು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ
ನವದೆಹಲಿ: 2022ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರು. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ. ಇದು ಕಳೆದ ವರ್ಷ ಫೆಬ್ರವರಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.18ರಷ್ಟುಮತ್ತು 2020ರಲ್ಲಿ ಸಂಗ್ರಹವಾದ ತೆರಿಗೆಗಿಂತ ಶೇ.26ರಷ್ಟು ಅಧಿಕ ಎಂದು ಕೇಂದ್ರ ಹಣಕಾಸು ಸಚಿವಾಲಯ (Union finance ministry)ಮಾ. 01 ರಂದು ತಿಳಿಸಿತ್ತು. ಈ ಮೂಲಕ ಸತತ 9 ತಿಂಗಳಿನಿಂದ 1 ಲಕ್ಷ ಕೋಟಿ ರು. ಗೂ ಅಧಿಕ ಜಿಎಸ್‌ಟಿ ಸಂಗ್ರಹವಾದಂತಾಗಿದೆ.
2022ರ ಫೆಬ್ರವರಿಯ ಆರಂಭದಲ್ಲೂ ದೇಶಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರೋನ್ (Coronavirus) ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿತ್ತು. ಅಲ್ಲದೆ ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇತ್ತು. ಹೀಗಾಗಿ ಜಿಎಸ್‌ಟಿ ಸಂಗ್ರಹ ಕಳೆದ ಜನವರಿಗಿಂತ ಕಡಿಮೆಯಾಗಿದೆ. ಜನವರಿಯಲ್ಲಿ 1.40 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು.
ಫೆಬ್ರವರಿಯಲ್ಲಿ ಒಟ್ಟು 1,33,026 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರದ ಜಿಎಸ್‌ಟಿ 24,435 ಕೋಟಿ ರು., ರಾಜ್ಯ ಜಿಎಸ್‌ಟಿ 30,779 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ 67,471 ಕೋಟಿ ರು. ಇದೆ. ಸೆಸ್‌ನಿಂದ 10,340 ಕೋಟಿ ಸಂಗ್ರಹವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ