ರಾಜ್ಯದಲ್ಲಿ ಕೊರೋನಾ ವೈರಸ್ ಕೋಲಾಹಲ: ಕರ್ನಾಟಕಕ್ಕೆ 'ಮಹಾ' ಆಘಾತ

By Suvarna News  |  First Published May 19, 2020, 2:34 PM IST

ಕರ್ನಾಟಕದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಂದು (ಮಂಗಳವಾರ) ಒಂದೇ ದಿನ ಮಹಾಮಾರಿ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ.


ಬೆಂಗಳೂರು, (ಮೇ.19): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂದು (ಮಂಗಳವಾರ) ಒಂದೇ ದಿನ ಕೊರೋನಾ 127 ಜನರಿಗೆ ಅಟ್ಯಾಕ್ ಆಗಿದೆ. ಈ ಪೈಕಿ 91 ಸೋಂಕಿತರಿಗೆ ಮಹಾರಾಷ್ಟ್ರದ ಲಿಂಕ್ ಇದೆ.

ಸೋಮವಾರ ಒಟ್ಟು ಸೋಂಕಿತರ ಸಂಖ್ಯೆ 99 ಆಗಿತ್ತು. ಆದರೆ ಮಂಗಳವಾರ ಮಧ್ಯಾಹ್ನದ ವರದಿಯಲ್ಲೇ 127 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಇದು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. 

Tap to resize

Latest Videos

ಪ್ರತಿ ಲಕ್ಷ ಜನರ ಪೈಕಿ ದೇಶದಲ್ಲಿ 7.1 ಮಂದಿಗೆ ಮಾತ್ರ ಸೋಂಕು!

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 1,373ಕ್ಕೇ ಏರಿಕೆಯಾಗಿದೆ. ಮತ್ತೊಂದೆಡೆ ಇಂದಿನಿಂದ ರಾಜ್ಯದಲ್ಲಿ ಲಾಕ್‌ಡೌನ್ ಬಹುತೇಕ ಸಡಿಲಗೊಳಿಸಿದ್ದು, ಮುಂದೇನಾಗಲಿದೆ ಎನ್ನುವ ಭಯ ಶುರುವಾಗಿದೆ.

ಮಂಡ್ಯಗೆ ಮಹಾ ಆಘಾತ
ಹೌದು...ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಹೊಸದಾಗಿ 62 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಎಲ್ಲಾ 62 ಪ್ರಕರಣಗಳು ಮುಂಬೈನಿಂದ ಬಂದವರಾಗಿದ್ದಾರೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.

ಇದುವರೆಗೆ ಯಾವುದೇ ಸೋಂಕು ಪ್ರಕರಣ ಇರದ ಚಿಕ್ಕಮಗಳೂರಿನಲ್ಲಿ ಎರಡು ಸೋಂಕು ಪ್ರಕರಣ ದೃಢವಾಗಿದೆ. ಓರ್ವ ವೈದ್ಯ ಮತ್ತು ಗರ್ಭಿಣಿಗೆ ಸೋಂಕು ತಾಗಿದೆ.

ದಾವಣಗೆರೆಯಲ್ಲಿ 19 ಜನರಿಗೆ ಮಾಹಾಮಾರಿ ಅಟ್ಯಾಕ್ ಆಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿದೆ (109). 

ಬೆಂಗಳೂರು ನಗರದಲ್ಲಿ 9 ಕಪ್ರಕರಣ ಪತ್ತೆಯಾಗಿದ್ರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 4, ಶಿವಮೊಗ್ಗದಲ್ಲಿ 12 ಮಂದಿಗೆ ಸೋಂಕು ತಗುಲಿದೆ.

ಉಡುಪಿ ಜಿಲ್ಲೆಯಲ್ಲಿ 8 ವರ್ಷದ ಮಗು ಸೇರಿ ನಾಲ್ಕು ಹೊಸ ಸೋಂಕು ಪ್ರಕರಣ ದೃಢವಾಗಿದೆ. ಇವರೆಲ್ಲರೂ ಮುಂಬೈನಿಂದ ಬಂದು ಕ್ವಾರಂಟೈನ್ ನಲ್ಲಿದ್ದರು.

ಕಲಬುರಗಿ ಜಿಲ್ಲೆಯಲ್ಲಿಇಬ್ಬರು ಮಕ್ಕಳು ಸೇರಿ 11 ಕೋವಿಡ್-19 ಸೋಂಕು ಪ್ರಕರಣ ದೃಢವಾಗಿದೆ. ಇವರೆಲ್ಲರೂ ಮುಂಬೈನಿಂದ ಬಂದವರಾಗಿದ್ದರೆ. ಯಾದಗಿರಿಯಲ್ಲಿ ಎರಡು ವರ್ಷದ ಮಗುವಿಗೆ ಸೋಂಕು ತಾಗಿದೆ. ಗದಗ, ವಿಜಯಪುರ, ಚಿತ್ರದುರ್ಗದಲ್ಲಿ ತಲಾ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ.

ಒಂದೇ ದಿನ ಮೂವರು ಸಾವು
ರಾಜ್ಯದಲ್ಲಿ ಕೊರೋನಾ ವೈರಸ್‌ ಮಂಗಳವಾರ ಒಂದೇ ದಿನ 3 ಬಲಿ ಪಡೆದುಕೊಂಡಿದೆ. ಬಳ್ಳಾರಿ, ವಿಜಯಪುರ ಹಾಗೂ ಬೆಂಗಳೂರಿನಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 40 ಜನರು ಮಾಹಾಮಾರಿಗೆ ಬಲಿಯಾಗಿದ್ದಾರೆ.

"

click me!