
ಲಿಂಗರಾಜ ಕೋರಾ
ಬೆಂಗಳೂರು(ಏ.04): ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಸ್ಥಿರಾಸ್ತಿ ಇದುವರೆಗೂ ಆಯಾ ಶಾಲೆ-ಕಾಲೇಜು ಹೆಸರಿಗೆ ಖಾತೆ-ಕಂದಾಯ ಆಗಿಲ್ಲ ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಸ್ವಾಧೀನದಲ್ಲಿರುವ ಸ್ಥಿರಾಸ್ತಿಗಳನ್ನು ಆಂದೋಲನ ರೂಪದಲ್ಲಿ ಆಯಾ ಶಾಲಾ-ಕಾಲೇಜುಗಳ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಸರ್ಕಾರ ಆದೇಶಿಸಿದೆ.
ಈ ಖಾತೆ ಬದಲಾವಣೆ ಕಾರ್ಯವನ್ನು ಇದೇ ಏಪ್ರಿಲ್ ತಿಂಗಳ ಒಳಗೆ ಪೂರ್ಣಗೊಳಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಗಡುವನ್ನೂ ವಿಧಿಸಿದೆ.
ಖಾತೆಯಾಗದ ಸರ್ಕಾರಿ ಶಾಲೆಗಳ ಆಸ್ತಿಯನ್ನು ಭೂಗಳ್ಳರು ಒತ್ತುವರಿ, ಸುಳ್ಳು ದಾಖಲೆ ಸೃಷ್ಟಿಯಂತಹ ಅಕ್ರಮಗಳ ಮೂಲಕ ಕಬಳಿಸುವ ಪ್ರಯತ್ನ ನಡೆಸುತ್ತಿರುವುದು ವಿವಿಧೆಡೆ ಕಂಡು ಬಂದಿದೆ. ಅಲ್ಲದೆ, ದಶಕಗಳ ಹಿಂದೆ ಶಾಲೆಗೆಂದು ಸರ್ಕಾರಕ್ಕೆ ಭೂಮಿಯನ್ನು ದಾನ ನೀಡಿದ್ದ ಕೆಲ ಕುಟುಂಬಗಳ ಈಗಿನ ತಲೆಮಾರಿನ ಸದಸ್ಯರು ತಮ್ಮ ಭೂಮಿ ವಾಪಸ್ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿರುವುದು ಹಾಗೂ ಆ ಆಸ್ತಿಗಳು ಇನ್ನೂ ಆ ಕುಟುಂಬ ಸದಸ್ಯರ ಹೆಸರಲ್ಲೇ ಉಳಿದಿರುವೆಡೆ ನ್ಯಾಯಾಲಯಗಳಿಗೂ ಹೋಗುತ್ತಿರುವ ಪ್ರಕರಣಗಳು ಜರುಗಿವೆ.
ಕರಾವಳಿ, ಮಲೆನಾಡು ಭಾಗದ ಕೆಲವೆಡೆ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶದ ಶಾಲೆಗಳ ಭೂಮಿಯನ್ನು ಅರಣ್ಯ ಇಲಾಖೆಯ ಆಕ್ಷೇಪ, ತಕರಾರುಗಳಿಂದ ಖಾತೆ ಮಾಡಲಾಗಿಲ್ಲ. ಇದನ್ನು ವಿವಿಧ ಜಿಲ್ಲಾ ಉಪ ನಿರ್ದೇಶಕರು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ರಾಜ್ಯದಲ್ಲಿ ಖಾತೆಯಾಗದಿರುವ ಸರ್ಕಾರಿ ಶಾಲೆಗಳ ಸ್ವಾಧೀನದಲ್ಲಿರುವ ಸ್ಥಿರಾಸ್ತಿಗಳನ್ನು ಆಯಾ ಶಾಲೆ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸುವಂತೆ ಕೋರಿದ್ದಾರೆ.
ಶಿಕ್ಷಣ ಇಲಾಖೆ ಮನವಿಗೆ ಸ್ಪಂದಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಸರ್ಕಾರಿ ಶಾಲೆಗಳ ಜತೆಗೆ ರಾಜ್ಯದ ಎಲ್ಲಾ ಪಿಯು ಕಾಲೇಜು, ಪದವಿ ಕಾಲೇಜು, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಹೆಸರಿಗೆ ಖಾತೆಯಾಗದಿರುವ ಸ್ಥಿರಾಸ್ತಿಗಳನ್ನು ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟವರಿಂದ ಪಡೆದು ಕೂಲಂಕಷವಾಗಿ ಪರಿಶೀಲಿಸಿ ಆಂದೋಲನ ಕಾರ್ಯಕ್ರಮದ ಮೂಲಕ ಆಯಾ ಶಾಲೆ, ಕಾಲೇಜುಗಳ ಹೆಸರಿಗೆ ಖಾತೆ ಮಾಡಿಕೊಡಲು ಕ್ರಮ ವಹಿಸುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಖಾತೆ ಬದಲಾವಣೆ ಕಾರ್ಯವನ್ನು ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿವೆ 55000 ಶಾಲೆ, ಕಾಲೇಜು
ಶಿಕ್ಷಣ ಇಲಾಖೆಯಲ್ಲಿ ಶಾಲೆ, ಕಾಲೇಜುಗಳ ಜಾಗ ಖಾತೆಯಾಗದ ಎಷ್ಟುಪ್ರಕರಣಗಳಿವೆ ಎಂಬ ಮಾಹಿತಿ ಇಲ್ಲ. ಆದರೆ, ಇಲಾಖೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ನೀಡಿದ ಅಂದಾಜು ಮಾಹಿತಿ ಪ್ರಕಾರ, ರಾಜ್ಯದಲ್ಲಿರುವ 48 ಸಾವಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪೈಕಿ ಸುಮಾರು ಶೇ.25ರಷ್ಟುಅಂದರೆ 12 ಸಾವಿರದಷ್ಟುಶಾಲೆಗಳ ಸ್ವಾಧೀನದಲ್ಲಿರುವ ಸ್ಥಿರಾಸ್ತಿಗಳು ಶಾಲೆ ಹೆಸರಿನಲ್ಲಿ ಖಾತೆ ಹೊಂದಿಲ್ಲ. ಇನ್ನು ಸುಮಾರು 1200ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳು, 415ಕ್ಕೂ ಹೆಚ್ಚು ಪದವಿ ಕಾಲೇಜುಗಳು, 15ಕ್ಕೂ ಹೆಚ್ಚು ಸರ್ಕಾರಿ ಎಂಜಿನಿಯರಿಂಗ್, 40ಕ್ಕೂ ಹೆಚ್ಚು ಪಾಲಿಟೆಕ್ನಿಕ್ ಹಾಗೂ 19 ವೈದ್ಯಕೀಯ ಕಾಲೇಜುಗಳಿದ್ದು, ಇವುಗಳಲ್ಲೂ ಒಂದಷ್ಟುಕಾಲೇಜುಗಳ ಆಸ್ತಿಗಳು ಇದುವರೆಗೆ ಖಾತೆಯಾಗಿಲ್ಲ.
ಇದುವರೆಗೆ ಖಾತೆ ಬದಲಾವಣೆಯಾಗದ ಸರ್ಕಾರಿ ಶಾಲೆಗಳ ಸ್ವಾಧೀನದ ಸ್ಥಿರಾಸ್ತಿಗಳನ್ನು ಖಾತೆ ಮಾಡಿಕೊಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮನವಿ ಸಲ್ಲಿಸಿತ್ತು. ಇವುಗಳ ಜತೆಗೆ ಸರ್ಕಾರಿ ಕಾಲೇಜುಗಳಲ್ಲೂ ಇಂತಹ ಖಾತೆಯಾಗದ ಪ್ರಕರಣಗಳು ಇರಬಹುದೆಂಬ ಕಾರಣಕ್ಕೆ ಅವುಗಳ ದಾಖಲೆಗಳನ್ನು ಪರಿಶೀಲಿಸಿ ಏಪ್ರಿಲ್ ತಿಂಗಳ ಒಳಗೆ ಖಾತೆ ಬದಲಾವಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
- ತುಷಾರ್ ಗಿರಿನಾಥ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ