ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕೊರೋನಾ ಸೋಂಕು!

By Kannadaprabha NewsFirst Published Jun 27, 2020, 7:23 AM IST
Highlights

ನಗರ ಪೊಲೀಸ್‌ ಕಮೀಷನರ್‌ ಕಚೇರಿಗೇ ಒಕ್ಕರಿಸಿದ ಸೋಂಕು!| 11 ಸಿಬ್ಬಂದಿಗೆ ಸೋಂಕು 3 ದಿನ ಕಮೀಷನರ್‌ ಕಚೇರಿ ಸೀಲ್‌!

ಬೆಂಗಳೂರು(ಜೂ.27): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಇದೀಗ ಸೋಂಕು ನಗರ ಪೊಲೀಸರನ್ನು ಬೆನ್ನು ಬಿಡದಂತೆ ಕಾಣುತ್ತಿದೆ.

ಶುಕ್ರವಾರ ಒಂದೇ ದಿನ ಕ್ವೀನ್ಸ್‌ ರಸ್ತೆಯಲ್ಲಿರುವ ನಗರ ಪೊಲೀಸ್‌ ಆಯುಕ್ತ ಕಚೇರಿಯಲ್ಲಿರುವ ಸಿಬ್ಬಂದಿ ಸೇರಿ 11ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಚೇರಿಯನ್ನು ಮೂರು ದಿನ ಶನಿವಾರದಿಂದ ಸೋಮವಾರದವರೆಗೆ ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.

ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!

ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಮನೆಯಿಂದ ಅಥವಾ ಉಪ ವಿಭಾಗದ ಕಚೇರಿಯಿಂದ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ನಗರ ನಿಯಂತ್ರಣ ಕೋಣೆಯಲ್ಲಿ ನಿಯಮಿತ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಗುರುವಾರ ಕರೊನಾ ಪಾಸಿಟಿವ್‌ ಬಂದ ಬೆನ್ನಲ್ಲೇ ಕಚೇರಿಯನ್ನು ಒಂದು ದಿನ ಸಂಪೂರ್ಣವಾಗಿ ಮುಚ್ಚಿ ಸ್ಯಾನಿಟೈಸ್‌ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮತ್ತೆ ಕಚೇರಿ ತೆರೆದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ನಿಯಮಿತ ಸಿಬ್ಬಂದಿ ಕಚೇರಿಯಲ್ಲಿ ಕೆಲಸ ಮುಂದುವರೆಸಿದ್ದಾರೆ.

ಸಿಟಿ ಮಾರುಕಟ್ಟೆಯ ಒಬ್ಬರು ಎಎಸ್‌ಐ, 3 ಕಾನ್‌ಸ್ಟೇಬಲ್‌ ಹಾಗೂ ಹೋಮ್‌ ಗಾರ್ಡ್‌, ಬಂಡೇಪಾಳ್ಯ ಮತ್ತು ಚಾಮರಾಜಪೇಟೆ ಠಾಣೆಯ ತಲಾ ಒಬ್ಬ ಹೋಮ್‌ ಗಾರ್ಡ್‌, ಎಚ್‌ಎಎಲ್‌ನ ಹೆಡ್‌ ಕಾನ್‌ಸ್ಟೇಬಲ್‌, ಕೆಂಗೇರಿ ಠಾಣೆ ಸಿಬ್ಬಂದಿ ಸೇರಿ 11 ಮಂದಿಗೆ ಸೋಂಕು ತಗುಲಿದೆ. ಒಟ್ಟಾರೆ ನಗರದಲ್ಲಿ ಇದುವರೆಗೂ 105ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

ದೇಶದಲ್ಲಿ 5,00,000 ಕೇಸ್‌: ಐದೇ ದಿನದಲ್ಲಿ 4ರಿಂದ 5 ಲಕ್ಷಕ್ಕೇರಿದ ಸೋಂಕಿತರು!

ಇನ್ನು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕೇಳಿ ಬರುತ್ತಿದ್ದು, ಬಂಡೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಮ್ ಗಾರ್ಡ್‌ಗೆ ಕೊರೋನಾ ದೃಢವಾಗಿ ಪೊಲೀಸರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್‌ ಕಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

click me!