ಬೆಂಗಳೂರಿನಲ್ಲಿ ಒಂದೇ ಕುಟುಂಬದ 11 ಮಂದಿಗೆ ಸೋಂಕು!

By Kannadaprabha News  |  First Published May 31, 2020, 7:33 AM IST

ಒಂದೇ ಕುಟುಂಬದ 11 ಮಂದಿಗೆ ಸೋಂಕು!| ನಿನ್ನೆ ಮತ್ತೆ 39 ಮಂದಿಗೆ ಸೋಂಕು| ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಕೇಸ್‌


ಬೆಂಗಳೂರು(ಮೇ.31): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಒಂದೇ ಕುಟುಂಬದ 11 ಮಂದಿ ಸೇರಿ 39 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 342ಕ್ಕೆ ಏರಿಕೆಯಾಗಿದೆ. ಇದು ಬೆಂಗಳೂರಿನಲ್ಲಿ ಇದುವರೆಗಿನ ಏಕದಿನದ ಅತಿ ಹೆಚ್ಚು ಸೋಂಕಿನ ದಾಖಲೆಯಾಗಿದೆ.

ಈ ಮಧ್ಯೆ, ಪಾದರಾಯನಪುರ ಕಾರ್ಪೊರೇಟರ್‌ಗೆ (ಪಿ.2825) ಶುಕ್ರವಾರವೇ ಸೋಂಕು ದೃಢಪಟ್ಟಿತ್ತಾದರೂ, ಅದನ್ನು ಆರೋಗ್ಯ ಇಲಾಖೆ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಶನಿವಾರ ಎರಡು ಗಂಟೆಗಳ ಹೈಡ್ರಾಮಾ ಬಳಿಕ ಕಾರ್ಪೊರೇಟರ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

Tap to resize

Latest Videos

ಚಿನ್ನದ ಮಾಸ್ಕ್‌ಗೆ ದೂರ ಸರಿಯುತ್ತಾ ಕೊರೋನಾ?

ಶನಿವಾರದ 39 ಪ್ರಕರಣಗಳ ಪೈಕಿ ಡಿ.ಜೆ.ಹಳ್ಳಿಯಲ್ಲಿ ಒಂದೇ ಕುಟುಂಬದ 11 ಜನ ಸೇರಿ ಅಕ್ಕಪಕ್ಕದ ಮನೆಯವರೂ ಸೇರಿ ಒಟ್ಟು 13 ಜನರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರಿಗೂ ಪಿ.2180 ರೋಗಿಯ ಸಂಪರ್ಕದಿಂದ ಸೋಂಕು ಹರಡಿದೆ. ಈ ಪೈಕಿ ಎರಡು ಪ್ರಕರಣಗಳು ಆರೋಗ್ಯ ಇಲಾಖೆ ವರದಿ ಬಿಡುಗಡೆ ಬಳಿಕ ದೃಢಪಟ್ಟಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲ 14 ಜನರೂ ರೋಗಿಯ ಕುಟುಂಬದವರು ಹಾಗೂ ಸಂಬಂಧಿಕರೇ ಆಗಿದ್ದು ಅವರೊಂದಿಗಿನ ಸಂಪರ್ಕದಿಂದ ಇತರರಿಗೂ ಸೋಂಕು ಹರಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಪತ್ತೆಯಾಗದ 22 ಸೋಂಕಿತರ ಮೂಲ:
ರೂಪೇನ ಅಗ್ರಹಾರದಲ್ಲಿ 25 ವರ್ಷದ ಗರ್ಭಿಣಿಯೊಬ್ಬರಿಗೆ, ಛಲವಾದಿಪಾಳ್ಯದಲ್ಲಿ 19 ವರ್ಷದ ಮತ್ತೊಬ್ಬ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಈ ಎರಡು ಪ್ರಕರಣಗಳು ಸೇರಿದಂತೆ ಉಳಿದ 22 ಜನರಿಗೆ ಯಾವ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ. ಸಂಪರ್ಕ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ 22ರ ಪೈಕಿ 9 ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಾದರೆ, ಉಳಿದವು ಬಿಬಿಎಂಪಿ ವ್ಯಾಪ್ತಿಯಲ್ಲಿ ದೃಢಪಟ್ಟಪ್ರಕರಣಗಳಾಗಿವೆ.

ಈ ಹಿಂದೆ ಬಂದ ಸಾಂಕ್ರಾಮಿಕ ರೋಗಗಳು ಹೇಳದೇ, ಕೇಳದೇ ಎಲ್ಲಿಗೆ ಹೋದವು?

ಇನ್ನುಳಿದ ಎರಡು ಪ್ರಕರಣಗಳು ಪಾದರಾಯನಪುರದಲ್ಲಿ ನಡೆಸಲಾಗಿದ್ದ ಸಮುದಾಯ ಪರೀಕ್ಷೆಯಲ್ಲಿ ಪತ್ತೆಯಾಗಿವೆ. ಇದರಿಂದ ಸಮುದಾಯ ಪರೀಕ್ಷೆಯಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾದಂತಾಗಿದೆ.

21 ಜನ ಬಿಡುಗಡೆ
ಇನ್ನು ಶನಿವಾರ ಒಂದೇ ದಿನ ನಗರದಲ್ಲಿ ಸೋಂಕಿನಿಂದ ಗುಣಮುಖರಾದ 21 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 172 ಆಗಿದೆ. ಉಳಿದ 153 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 10 ಜನ ಸೋಂಕಿತರು ನಗರದಲ್ಲಿ ಮೃತಪಟ್ಟಿದ್ದಾರೆ. ಆದರೆ, ಶನಿವಾರ ಯಾವುದೇ ಸಾವು ಸಂಭವಿಸಿಲ್ಲ.

click me!