ಈ ಭಾನುವಾರ ರಾಜ್ಯದಲ್ಲಿ ಕಂಪ್ಲೀಟ್‌ ಲಾಕ್ ಡೌನ್ ಇಲ್ಲ!

By Suvarna NewsFirst Published May 30, 2020, 1:55 PM IST
Highlights

ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ| ಸಿಎಂ ಕಚೇರಿ ಪ್ರಕಟಣೆ

ಬೆಂಗಳೂರು(ಮೇ.30): ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆ ಕರ್ನಾಟಕದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರ ಅನ್ವಯ ಕೆಲ ಸಡಿಲಿಕೆ ಘೋಷಿಸಿದ್ದರಾದರೂ, ಭಾನುವಾರ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು.ಆದರೀಗ ರಜಾ ದಿನದಂದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಈ ನಿಯಮವನ್ನೂ ಸಡಿಲಿಸಿದೆ. ಸಿಎಂ ಕಚೇರಿಯಿಂದ ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದ್ದು,  ಭಾನುವಾರ ಸಂಪೂರ್ಣ ಲಾಕ್​ಡೌನ್ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್

ಹೌದು ನಾಲ್ಕನೇ ಹಂತದ ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಕರ್ನಾಟಕ ಸರ್ಕಾರ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆವರೆಗೆ ರಾಜ್ಯಾದ್ಯಂತ ಕರ್ಫ್ಯೂ ವಿಧಿಸಲಾಗಿತ್ತು. ಆದರೀಗ ವಾರದ ಉಳಿದ ದಿನಗಳಂತೆ 31.05.2020 ರಂದು ಭಾನುವಾರವೂ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರ ಲಾಕ್​ಡೌನ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ತೆಗೆದುಕೊಂಡಿದೆ. ವಿಪಕ್ಷಗಳೂ ಕೂಡ ಭಾನುವಾರದ ಲಾಕ್​ಡೌನ್ ಕ್ರಮವನ್ನು ತೀವ್ರವಾಗಿ ಟೀಕೆ ಮಾಡಿದ್ದವು.

ವಾರಕ್ಕೆ ಒಂದು ದಿನ ಲಾಕ್​ಡೌನ್ ಮಾಡುವುದು ಅಸಂಬದ್ಧ ಎಂದು ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಯಡಿಯೂರಪ್ಪ ಸರ್ಕಾರದ ಸಂಡೇ ಲಾಕ್​ಡೌನ್ ಕ್ರಮದ ಔಚಿತ್ಯವನ್ನು ಪ್ರಶ್ನೆ ಮಾಡಿದ್ದರು. ಸರ್ಕಾರ ಭಾನುವಾರದ ಲಾಕ್​ಡೌನ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಎಂಬಂತಹ ಸುದ್ದಿಗಳಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಸರ್ಕಾರ ನಿರ್ಧಾರ ಬದಲಿಸಿದೆ.

ಇನ್ನು ಮೇ. 24ರ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಇದ್ದು ಯಶಸ್ವಿಯಾಗಿತ್ತು. ಜನರೆಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿದ್ದು, ಮನೆಯಲ್ಲೇ ಉಳಿದುಕೊಂಡಿದ್ದರು.

click me!