ಕಳೆದ 5 ದಿನಗಳಿಂದ ರಾಜ್ಯದಲ್ಲಿ ಕೊಂಚ ನಿಯಂತ್ರಣದಲ್ಲಿದ್ದ ಕೊರೋನಾ ವೈರಸ್, ಗುರುವಾರ ಮತ್ತೆ ‘ಸ್ಫೋಟ’ಗೊಂಡಿದೆ. ಒಂದೇ ದಿನ ರಾಜ್ಯದಲ್ಲಿ 30 ಮಂದಿಗೆ ಸೋಂಕು ಹರಡಿದೆ.
ಬೆಂಗಳೂರು(ಮೇ.01): ಕಳೆದ 5 ದಿನಗಳಿಂದ ರಾಜ್ಯದಲ್ಲಿ ಕೊಂಚ ನಿಯಂತ್ರಣದಲ್ಲಿದ್ದ ಕೊರೋನಾ ವೈರಸ್, ಗುರುವಾರ ಮತ್ತೆ ‘ಸ್ಫೋಟ’ಗೊಂಡಿದೆ. ಒಂದೇ ದಿನ ರಾಜ್ಯದಲ್ಲಿ 30 ಮಂದಿಗೆ ಸೋಂಕು ಹರಡಿದೆ.
ಈ ಪೈಕಿ ದಿಲ್ಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಧರ್ಮಸಭೆ ಹಿನ್ನೆಲೆಯಿಂದ ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 11 ಮಂದಿಗೆ ಸೋಂಕು ತಾಗಿದೆ. ಇದೇ ರೀತಿ ಹಾಟ್‌ಸ್ಪಾಟ್ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲೂ 8 ಪ್ರಕರಣಗಳು ನಿನ್ನೆ ದೃಢಪಟ್ಟಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 565ಕ್ಕೆ ಹೆಚ್ಚಳವಾಗಿದೆ.
undefined
ಇಂದಿನಿಂದ ಮಾಸ್ಕ್ ಧರಿಸದಿದ್ದರೆ 1000 ರು. ದಂಡ!
ಬೆಳಗಾವಿಯ ಹಿರೇಬಾಗೇವಾಡಿಯ ತಬ್ಲೀಘಿ ನಂಟು ಮಾತ್ರವಲ್ಲದೆ ಇತರೆ ಮೂವರಿಗೆ ಸೋಂಕು ತಗುಲಿದೆ. ಇದರಿಂದಾಗಿ ಬೆಳಗಾವಿಯೊಂದರಲ್ಲೇ 14 ಪ್ರಕರಣಗಳು ಗುರುವಾರ ದೃಢಪಟ್ಟಿದೆ. ಇದನ್ನು ಬಿಟ್ಟರೆ ಪಾದರಾಯನಪುರ ಸೇರಿ ಬೆಂಗಳೂರಲ್ಲಿ 10, ವಿಜಯಪುರದಲ್ಲಿ 2, ಕಲಬುರಗಿ, ದಾವಣಗೆರೆ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.
ಕಳೆದ ಐದು ದಿನದಲ್ಲಿ 60 ಮಂದಿಗೆ ಗುಣಮುಖರಾಗಿ ಬಿಡುಗಡೆಯಾಗಿದ್ದರೆ, 54 ಮಂದಿಗೆ ಮಾತ್ರ ಹೊಸದಾಗಿ ಸೋಂಕು ದೃಢಪಟ್ಟಿತ್ತು. ಆದರೆ ಗುರುವಾರ 30 ಜನರಿಗೆ ಸೋಂಕು ತಾಗಿ, 13 ಮಂದಿ ಮಾತ್ರ ಗುಣಮುಖರಾಗಿದ್ದಾರೆ.
ಕ್ಲಸ್ಟರ್ ಆದ ಹಳ್ಳಿ:
ಗುರುವಾರ ಏಕಾಏಕಿ ತಬ್ಲೀಘಿ ಜಮಾತ್ ಪ್ರವಾಸ ಹಿನ್ನೆಲೆಯ 128ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮದಲ್ಲಿ ಬರೋಬ್ಬರಿ 11 ಮಂದಿಗೆ ಕೊರೋನಾ ಸೋಂಕು ಉಂಟಾಗಿದೆ. ಈ 20 ವರ್ಷದ ಯುವಕನಿಗೆ ಏ.4 ರಂದು ಸೋಂಕು ದೃಢಪಟ್ಟಿತ್ತು. ಬಳಿಕ ಈತನಿಂದ ತಂದೆ, ತಾಯಿ, ಸಹೋದರ ಸೇರಿ 5 ಮಂದಿಗೆ ನೇರ ಸಂಪರ್ಕದಿಂದ ಹಾಗೂ ದ್ವಿತೀಯ ಸಂಪರ್ಕದಿಂದ ಒಂಬತ್ತು ಮಂದಿಗೆ ಸೇರಿ 14 ಮಂದಿಗೆ ಸೋಂಕು ಹರಡಿತ್ತು. ಗುರುವಾರ ಗ್ರಾಮದ 11 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 20 ವರ್ಷದ ಯುವಕನಿಂದ 27 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಡೀ ಗ್ರಾಮ ಸೋಂಕು ಕ್ಲಸ್ಟರ್ ಆಗಿ ಬದಲಾಗಿದೆ.
ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್! ಯಾವ ವಾಹನಕ್ಕೆಷ್ಟು ದಂಡ..?
ಗುರುವಾರ ಈತನ (128ನೇ ಸೋಂಕಿತ) ದ್ವಿತೀಯ ಸಂಪರ್ಕದಿಂದ ಸೋಂಕಿತರಾಗಿದ್ದ 483ನೇ ಸೋಂಕಿತನಿಂದ 4 ಮಂದಿಗೆ, 486ನೇ ಸೋಂಕಿತನಿಂದ 3 ಮಂದಿಗೆ, 496 ನೇ ಸೋಂಕಿತರಿಂದ ಇಬ್ಬರಿಗೆ, 494ನೇ ಸೋಂಕಿತರಿಂದ ಒಬ್ಬರಿಗೆ, 484ನೇ ಸೋಂಕಿತರಿಂದ ಒಬ್ಬರಿಗೆ ಸೇರಿ ಹನ್ನೊಂದು ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ 9 ವರ್ಷದ ಮಗು, 8 ವರ್ಷದ ಮಗು, 75 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಈ ಮೂಲಕ ಬೆಳಗಾವಿಯಲ್ಲೇ 14 ಮಂದಿಗೆ ಸೋಂಕು ದೃಢಪಟ್ಟಿದೆ.
ಪಾದರಾಯನಪುರದಲ್ಲಿ ‘ಸ್ಫೋಟ’:
ಕಳೆದ ನಾಲ್ಕು ದಿನಗಳಿಂದ ಕೇವಲ ಎರಡು ಸೋಂಕು ದೃಢಪಟ್ಟು ನಿರಾಳವಾಗಿದ್ದ ಬೆಂಗಳೂರಿನಲ್ಲಿ ಒಂದೇ ಬಾರಿಗೆ ಹತ್ತು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಪಾದರಾಯನಪುರ ಕಂಟೈನ್‌್ಮಂಟ್ ವಲಯದಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದ್ದು, ಪಾದರಾಯನಪುರ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಪಾದರಾಯನಪುರದಲ್ಲಿ ಕ್ವಾರಂಟೈನ್‌ನಲ್ಲಿದ್ದ ಆರು ಮಂದಿಗೆ ಸೋಂಕು ದೃಢಪಟ್ಟಿದ್ದರೆ, ರಾರಯಂಡಮ್ ಪರೀಕ್ಷೆ ವೇಳೆ ಇಬ್ಬರಿಗೆ ಸೋಂಕು ದೃಢಪಟ್ಟಿರುವುದು ಮತ್ತಷ್ಟುಆತಂಕ ಹೆಚ್ಚಿಸಿದೆ. ಈ ಮೂಲಕ ಪಾದರಾಯನಪುರದಲ್ಲಿ ರಾರಯಂಡಮ್ ಪರೀಕ್ಷೆ ವೇಳೆ ಮೂರು ಮಂದಿಗೆ ಸೋಂಕು ಖಚಿತವಾದಂತಾಗಿದೆ.
ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್..!
43 ವರ್ಷದ 292ನೇ ಸೋಂಕಿತನಿಂದ 4 ವರ್ಷದ ಹೆಣ್ಣು ಮಗು ಸೇರಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಈ ಸೋಂಕಿತನಿಗೆ ಎಲ್ಲಿಂದ ಸೋಂಕು ಬಂತು ಎಂಬುದು ಈವರೆಗೂ ತಿಳಿದುಬಂದಿಲ್ಲ. ಉಸಿರಾಟ ಸಮಸ್ಯೆ ಹಿನ್ನೆಲೆ ಹೊಂದಿದ್ದ 65 ವರ್ಷದ ವ್ಯಕ್ತಿಯಿಂದ (281ನೇ ಸೋಂಕಿತ)ಒಬ್ಬರಿಗೆ ಸೋಂಕು ಹರಡಿದೆ. ಉಳಿದಂತೆ ಪಾದರಾಯನಪುರ ಹೊರತಾಗಿ ಐಎಲ್‌ಐ ಹಾಗೂ ಸಾರಿ ಹಿನ್ನೆಲೆ ಹೊಂದಿರುವ ತಲಾ ಒಬ್ಬರಿಗೆ ಬೆಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ.
ಮುಂದುವರೆದ ಅಜ್ಜಿಯ ಸೋಂಕು ಜಾಲ:
ವಿಜಯಪುರದಲ್ಲಿ 221ನೇ ಸೋಂಕಿತ 60 ವರ್ಷದ ವೃದ್ಧೆಯಿಂದ ಗುರುವಾರ ಮತ್ತೆ ಇಬ್ಬರಿಗೆ ನೇರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಈ ಮೂಲಕ ಅಜ್ಜಿಯಿಂದ ನೇರವಾಗಿ 27 ಮಂದಿಗೆ ಸೋಂಕು ಅಂಟಿದಂತಾಗಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದ ಸೇರಿ 35ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿದಂತಾಗಿದೆ. ರಾಜ್ಯದಲ್ಲಿ ನೇರವಾಗಿ ಇಷ್ಟುಮಂದಿಗೆ ಬೇರೆ ಯಾರೂ ಸೋಂಕು ಅಂಟಿಸಿರಲಿಲ್ಲ. ಅಜ್ಜಿಯ ಸೋಂಕು ಜಾಲ ದಿನದಿಂದ ದಿನಕ್ಕೆ ವಿಸ್ತರಿಸಿದ್ದು ವಿಜಯಪುರ ಸಾರ್ವಜನಿಕರಲ್ಲಿ ಆತಂಕ ಮನೆ ಹೆಚ್ಚಾಗಿದೆ.
13 ಮಂದಿ ಗುಣಮುಖ:
ಗುರುವಾರ 30 ಮಂದಿಗೆ ಸೋಂಕು ದೃಢಪಟ್ಟಿದ್ದರೆ ಹದಿಮೂರು ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ 229 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾದಂತಾಗಿದೆ. ಗುರುವಾರ ಮೈಸೂರಿನಿಂದ 7, ಬೆಂಗಳೂರು ನಗರ 3, ಕಲಬುರಗಿ 1 ಹಾಗೂ ಅನ್ಯ ರಾಜ್ಯದ ಇಬ್ಬರು ಗುಣಮುಖರಾಗಿದ್ದಾರೆ. ಉಳಿದಂತೆ 314 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇತರೆ ಅಂಕಿ ಅಂಶ:
ಸೋಂಕಿತರ ಸಂಪರ್ಕದಿಂದ ಕ್ವಾರಂಟೈನ್‌ನಲ್ಲಿರುವವರು: 23,871
ಪ್ರಾಥಮಿಕ ಸಂಪರ್ಕ: 5,774
ದ್ವಿತೀಯ ಸಂಪರ್ಕ: 18,097
ಗುರುವಾರ ನಡೆಸಿದ ಒಟ್ಟು ಪರೀಕ್ಷೆ: 4,752
ನೆಗೆಟಿವ್ ವರದಿ: 4,307
ಪಾಸಿಟಿವ್ ವರದಿ: 30