
ಬೆಂಗಳೂರು(ಡಿ.26): ಪರಿಸರ ಸ್ನೇಹಿ ಹೆಜ್ಜೆಯಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಬ್ರಾಡ್‌ಗೇಜ್ ಹಳಿಗಳ ಶೇಕಡ 100ರಷ್ಟು ವಿದ್ಯುದೀಕರಣ ಸಾಧಿಸಿದೆ. ಈ ಮೂಲಕ ನೈಋತ್ಯ ರೈಲ್ವೆ ವಲಯದಲ್ಲಿ ಈ ಸಾಧನೆ ಮಾಡಿದ ಮೊದಲ ವಿಭಾಗ ಎನ್ನಿಸಿಕೊಂಡಿದೆ.
ಹಾಸನದ ಹಿರಿಸಾವೆ ಮಾರ್ಗದಲ್ಲಿ ಈಚೆಗೆ 110 ಕಿ.ಮೀ ಸೆಕ್ಷನಲ್ ಸ್ಪೀಡ್ ಪ್ರಾಯೋಗಿಕ ಸಂಚಾರ ಯಶಸ್ವಿ ಆಗುವುದರ ಮೂಲಕ ಬೆಂಗಳೂರು ವಿಭಾಗವು ಶೇ.100ರಷ್ಟು ವಿದ್ಯುದೀಕರಣ ಸಾಧಿಸಿದಂತಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 971.151 ಕಿ.ಮೀ., ಆಂಧ್ರಪ್ರದೇಶದಲ್ಲಿ 172 ಕಿ.ಮೀ., ತಮಿಳುನಾಡಿನಲ್ಲಿ 173 ಕಿ.ಮೀ. ಸೇರಿದಂತೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ 1158.151 ಕಿ.ಮೀ. (ಟ್ರ್ಯಾಕ್ 1966 ಕಿ.ಮೀ.) ರೈಲ್ವೆ ಮಾರ್ಗ ವಿದ್ಯುದೀಕರಣ ಆಗಿದೆ.
ಆದರೆ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ಚಿಂತಾಮಣಿ ಬಳಿ ಟ್ರಾಕ್ಷನ್ ಸಬ್‌ಸ್ಟೇಷನ್ (ಟಿಎಸ್‌ಎಸ್) ಅಂದರೆ ಹಳಿಗೆ ವಿದ್ಯುತ್ ಪೂರೈಸುವ ಕೇಂದ್ರ ನಿರ್ಮಾಣ ಶೇ.95ರಷ್ಟಾಗಿದ್ದು, ಈ ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಇದಾದಲ್ಲಿ ಒಟ್ಟಾರೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಂತಾಗಲಿದೆ. ಈಗಾಗಲೇ ಬೆಂಗಳೂರು-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಎಲೆಕ್ಟ್ರಿಕ್ ರೈಲುಗಳು ಸಂಚರಿಸುತ್ತಿದ್ದು, ಈ ಉಪಕೇಂದ್ರ ನಿರ್ಮಾಣವಾದ ಬಳಿಕ ಬೆಂಗಳೂರು-ಕೋಲಾರ ಮಾರ್ಗದಲ್ಲಿ ಮೆಮು ಹಾಗೂ ಸರಕು ಸಾಗಣೆ ರೈಲು ಸಂಚರಿಸಲು ಅನುಕೂಲವಾಗಲಿದೆ.
ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ
ನಿಗದಿತ ಅವಧಿಗಿಂತ ಮೊದಲೇ ಬೆಂಗಳೂರು ವಿಭಾಗ ಶೇ. 100ರಷ್ಟು ವಿದ್ಯುದೀಕರಣ ಸಾಧಿಸಿದೆ. ಈ ವರ್ಷ ನಮಗೆ ಮಾರ್ಚ್ ಒಳಗೆ 118 ಕಿ.ಮೀ. ವಿದ್ಯುದೀಕರಣ ಮಾಡುವ ಗುರಿ ಇತ್ತು. ಅದನ್ನು ಕೂಡ ಬೇಗ ಸಾಧಿಸಿದ್ದೇವೆ. ಇದರಿಂದ ಪರಿಸರದ ಮೇಲಾಗುತ್ತಿದ್ದ ಇಂಗಾಲ ಮಾಲಿನ್ಯ ಗಣನೀಯವಾಗಿ ತಗ್ಗಲಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ