ಕರ್ನಾಟಕದ ಪ್ರವಾಸಿ ತಾಣಗಳಲ್ಲಿ 10 ಸ್ಟಾರ್‌ ಹೋಟೆಲ್‌ ಶುರು?

By Kannadaprabha NewsFirst Published Aug 14, 2024, 8:40 AM IST
Highlights

ಪ್ರವಾಸೋದ್ಯಮ ನೀತಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಸಣ್ಣ ಪ್ರಮಾಣದ ಕ್ರೂಸ್‌ ಶಿಪ್‌ (ವಿಹಾರ ನೌಕೆ)ಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆಯನ್ನೂ ಉಲ್ಲೇಖಿಸಲಾಗುತ್ತಿದೆ. ಈ ಕ್ರೂಸ್‌ಗಳಲ್ಲಿ ಸಮುದ್ರದಲ್ಲಿರುವ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದೊಯ್ದು, ಅಲ್ಲಿ ವೀಕ್ಷಣೆ ಮಾಡಿಸಿ ನಂತರ ವಾಪಾಸು ಕರೆತರಲಾಗುತ್ತದೆ.
 

ಗಿರೀಶ್‌ ಗರಗ

ಬೆಂಗಳೂರು(ಆ.14):  ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೂಪಿಸಲಾಗಿದ್ದ ಪ್ರವಾಸೋದ್ಯಮ ನೀತಿ 2020-25ರ ಅವಧಿ ಈ ವರ್ಷದ ಅಂತ್ಯಕ್ಕೆ ಮುಕ್ತಾಯವಾಗುತ್ತಿದ್ದು, ಮುಂದಿನ 5 ವರ್ಷಕ್ಕೆ ಹೊಸ ಪ್ರವಾಸಿ ನೀತಿ ರೂಪಿಸಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಸ್ಟಾರ್‌ಹೋಟೆಲ್‌, ದರ್ಶಿನಿ ನಿರ್ಮಾಣ, ಕ್ರೂಸ್‌ಶಿಪ್‌ ಸಂಚಾರ ಸೇರಿದಂತೆ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತಹ 2025-2030ನೇ ಸಾಲಿನ ನೀತಿಯ ಕರಡು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಪ್ರಕಟಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

Latest Videos

ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ. ಪಾಟೀಲ್‌ ನೇತೃತ್ವದಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಪ್ರವಾಸಿ ತಾಣಗಳ ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದು, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವಂತಹ ಅಂಶಗಳನ್ನು ಅಳವಡಿಸಿದ ನೀತಿಯನ್ನು ಸಿದ್ಧಪಡಿಸಲಾಗಿದೆ. ಅದರ ಜತೆಗೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಟಾರ್‌ ಹೋಟೆಲ್‌ಗಳ ನಿರ್ಮಾಣ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ಸಲುವಾಗಿ ದರ್ಶಿನಿ ಮಾದರಿಯ ಹೋಟೆಲ್‌ಗಳನ್ನು ನಿರ್ಮಿಸುವ ಅಂಶಗಳನ್ನು ನೂತನ ನೀತಿಯಲ್ಲಿ ಅಳವಡಿಸಲಾಗಿದೆ.

ವಯನಾಡು ಭೂಕುಸಿತ ದುರಂತಕ್ಕೆ ಕೊಡಗು ಪ್ರವಾಸೋದ್ಯಮ ಕಂಗಾಲು: ಪ್ರವಾಸಿಗರ ಸಂಖ್ಯೆಯಲ್ಲಿ 10 ಲಕ್ಷ ಕೊರತೆ

10 ಸ್ಟಾರ್‌ ಹೋಟೆಲ್‌ಗಳು, 30 ದರ್ಶಿನಿ:

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಸ್ತವ್ಯಕ್ಕೆ ಪ್ರವಾಸೋದ್ಯಮ ಇಲಾಖೆಯಿಂದಲೇ ವ್ಯವಸ್ಥೆ ಮಾಡುವ ಸಲುವಾಗಿ 3ರಿಂದ 5 ಸ್ಟಾರ್‌ ಹೊಂದಿರುವ ಬೃಹತ್‌ ಹೋಟೆಲ್‌ಗಳ ನಿರ್ಮಾಣದ ಬಗ್ಗೆ ಪ್ರವಾಸಿ ನೀತಿಯಲ್ಲಿ ಉಲ್ಲೇಖಿಸಲಾಗುತ್ತಿದೆ. ಮೈಸೂರು, ಹಾಸನ, ಮಂಗಳೂರು, ಜೋಗ ಜಲಪಾತ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದ ಅಡಿಯಲ್ಲಿ ಸ್ಟಾರ್‌ ಹೋಟೆಲ್‌ಗಳ ನಿರ್ಮಾಣ ಮಾಡುವ ಕುರಿತು ನೀತಿಯಲ್ಲಿ ತಿಳಿಸಲಾಗುತ್ತಿದೆ.

ಹಾಗೆಯೇ, ಪ್ರವಾಸಿಗರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುವಂತೆ ಮಾಡಲು ದರ್ಶಿನಿ ಮಾದರಿಯ ಹೋಟೆಲ್‌ ನಿರ್ಮಿಸುವ ಬಗ್ಗೆಯೂ ನೀತಿಯಲ್ಲಿ ಹೇಳಲಾಗುತ್ತಿದೆ. ಈ ದರ್ಶಿನಿಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುತ್ತದೆ. ಮೊದಲಿಗೆ ಪ್ರಾಯೋಗಿಕವಾಗಿ 25ರಿಂದ 30 ಕಡೆಗಳಲ್ಲಿ ದರ್ಶಿನಿಗಳನ್ನು ನಿರ್ಮಿಸಿ, ಪ್ರವಾಸಿಗರಿಂದ ಬರುವ ಪ್ರತಿಕ್ರಿಯೆಯನ್ನಾಧರಿಸಿ ರಾಜ್ಯದಲ್ಲಿನ ಎಲ್ಲ ಪ್ರವಾಸಿ ತಾಣಗಳಿಗೂ ದರ್ಶಿನಿ ವಿಸ್ತರಿಸುವ ಬಗ್ಗೆಯೂ ನೀತಿ ರೂಪಿಸುವ ಸಂದರ್ಭದಲ್ಲಿ ಚರ್ಚಿಸಲಾಗಿದೆ.

ಕರಾವಳಿ, ಪರಿಸರ ಪ್ರವಾಸೋದ್ಯಮ:

2025-2030ನೇ ಸಾಲಿನ ಪ್ರವಾಸೋದ್ಯಮ ನೀತಿಯಲ್ಲಿ ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವ ಅಂಶದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಗುರುತಿಸಿರುವಂತೆ ಕರಾವಳಿ ಭಾಗದಲ್ಲಿಯೇ 40ಕ್ಕಿಂತ ಹೆಚ್ಚಿನ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಸೌಲಭ್ಯಗಳೂ ಇಲ್ಲ. ಅದರಲ್ಲೂ ಪ್ರವಾಸಿಗರಿಗೆ ವಸತಿ ಕಲ್ಪಿಸುವಂತಹ ವ್ಯವಸ್ಥೆಯಿಂದ ಇಲಾಖೆಯಿಂದಾಗಿಲ್ಲ. ಹೀಗಾಗಿ ಆ ಭಾಗದಲ್ಲಿ ಹೋಟೆಲ್‌ಗಳನ್ನು ನಿರ್ಮಿಸುವುದು ಹಾಗೂ ಪ್ರವಾಸಿ ತಾಣಗಳಲ್ಲಿ ಬೇಕಿರುವ ಮೂಲಸೌಕರ್ಯ ಒದಗಿಸುವ ಬಗ್ಗೆಯೂ ನೀತಿಯಲ್ಲಿ ತಿಳಿಸಲಾಗುತ್ತಿದೆ.

ಕ್ರೂಸ್‌ ಶಿಪ್‌ಗಳ ಸಂಚಾರ:

ಪ್ರವಾಸೋದ್ಯಮ ನೀತಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಸಣ್ಣ ಪ್ರಮಾಣದ ಕ್ರೂಸ್‌ ಶಿಪ್‌ (ವಿಹಾರ ನೌಕೆ)ಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆಯನ್ನೂ ಉಲ್ಲೇಖಿಸಲಾಗುತ್ತಿದೆ. ಸಮುದ್ರದಲ್ಲಿ ಐಷಾರಾಮಿ ಕ್ರೂಸ್‌ಗಳ ಮೂಲಕ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುತ್ತದೆ. ಈ ಕ್ರೂಸ್‌ಗಳಲ್ಲಿ ಸಮುದ್ರದಲ್ಲಿರುವ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದೊಯ್ದು, ಅಲ್ಲಿ ವೀಕ್ಷಣೆ ಮಾಡಿಸಿ ನಂತರ ವಾಪಾಸು ಕರೆತರಲಾಗುತ್ತದೆ. ಈ ಪ್ರವಾಸವು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ಪ್ರವಾಸೋದ್ಯಮ ಇಲಾಖೆ ಈಗಾಗಲೇ ನಿರ್ಧರಿಸಿದ್ದು, ಅದನ್ನು ನೂತನ ನೀತಿಯಲ್ಲೂ ಸೇರಿಸಲಾಗಿದೆ.

ಅದರ ಜತೆಗೆ, ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು, ಉದ್ಯೋಗ ಸೃಷ್ಟಿಯಂತಹ ಕ್ರಮಗಳಿಗೂ ನೀತಿಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದರ ಪ್ರಕಾರ ಅರಣ್ಯ, ಪರಿಸರಕ್ಕೆ ಮಾರಕವಾಗದಂತೆ ಅರಣ್ಯ ಪ್ರದೇಶದಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆಯೂ ನೀತಿಯಲ್ಲಿ ಉಲ್ಲೇಖಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ಪ್ರಸಿದ್ಧ ಮಧುಗಿರಿ ಏಕಶಿಲಾ ಬೆಟ್ಟಕ್ಕೆ 2025ರೊಳಗೆ ಕೇಬಲ್ ಕಾರ್

ಸದ್ಯ ಕರಡು ನೀತಿ ಸಿದ್ಧವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಿ ಅನುಮೋದನೆ ಪಡೆಯಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತ ನಂತರ ಅದನ್ನು ಪ್ರಕಟಿಸಲಾಗುತ್ತದೆ. 2025ರ ಜ. 1ರಿಂದ ನೂತನ ನೀತಿ ಅನುಷ್ಠಾನಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ರೂಸ್‌ ಶಿಪ್‌ನಲ್ಲಿ ಕರಾವಳಿ ಪ್ರವಾಸ

ಪ್ರವಾಸೋದ್ಯಮ ನೀತಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಸಣ್ಣ ಪ್ರಮಾಣದ ಕ್ರೂಸ್‌ ಶಿಪ್‌ (ವಿಹಾರ ನೌಕೆ)ಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆಯನ್ನೂ ಉಲ್ಲೇಖಿಸಲಾಗುತ್ತಿದೆ. ಈ ಕ್ರೂಸ್‌ಗಳಲ್ಲಿ ಸಮುದ್ರದಲ್ಲಿರುವ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದೊಯ್ದು, ಅಲ್ಲಿ ವೀಕ್ಷಣೆ ಮಾಡಿಸಿ ನಂತರ ವಾಪಾಸು ಕರೆತರಲಾಗುತ್ತದೆ.

click me!