ಗೃಹ ಸಚಿವರ ಕಚೇರಿ ಆಪ್ತ ಕಾರ್ಯದರ್ಶಿ ಸೋಗಿನಲ್ಲಿ ₹10 ಲಕ್ಷ ವಂಚನೆ!

By Kannadaprabha NewsFirst Published Dec 1, 2023, 4:49 AM IST
Highlights

ಗೃಹ ಸಚಿವರ ಕಚೇರಿಯಲ್ಲಿ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಎಸ್‌ಡಿಎ ಕೆಲಸ ಕೊಡಿಸುವುದಾಗಿ ₹10.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಬಾಗೇಪಲ್ಲಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಡಿ.1) : ಗೃಹ ಸಚಿವರ ಕಚೇರಿಯಲ್ಲಿ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಎಸ್‌ಡಿಎ ಕೆಲಸ ಕೊಡಿಸುವುದಾಗಿ ₹10.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಬಾಗೇಪಲ್ಲಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಡಿಗೇಹಳ್ಳಿ ರಾಜೀವ್‌ಗಾಂಧಿನಗರ ನಿವಾಸಿ ರಾಮಚಂದ್ರ(52) ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಮೂಲದ ಟಿ.ಶ್ರೀನಿವಾಸ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

ಏನಿದು ಪ್ರಕರಣ?

ದೂರುದಾರ ರಾಮಚಂದ್ರ ರಿಯಲ್‌ ಎಸ್ಟೇಟ್‌ ಡೀಲರ್‌ ಆಗಿದ್ದಾರೆ. ಇವರಿಗೆ ಆರೋಪಿ ಶ್ರೀನಿವಾಸ್‌ ಪರಿಚಿತ. ಹೋಮ್‌ ಮಿನಿಸ್ಟರ್‌ ಕಚೇರಿಯಲ್ಲಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದಾದರೂ ಸರ್ಕಾರಿ ಉದ್ಯೋಗ, ವರ್ಗಾವಣೆ ಏನಾದರೂ ಕೆಲಸವಿದ್ದರೆ ಹೇಳು ಮಾಡಿಸಿಕೊಡುವೆ ಎಂದಿದ್ದಾನೆ. ಈತನ ಮಾತು ನಂಬಿದ ರಾಮಚಂದ್ರ ಅವರು ಸಂತೋಷ್‌ ಎಂಬಾತನಿಗೆ ಈ ವಿಚಾರ ಹೇಳಿದ್ದಾರೆ.

ಎಸ್‌ಡಿಎ ಕೆಲಸದ ಆಫರ್‌:

2021ರ ಮಾರ್ಚ್‌ನಲ್ಲಿ ರಾಮಚಂದ್ರ ಅವರ ಕಚೇರಿಗೆ ಬಂದಿರುವ ಶ್ರೀನಿವಾಸ್‌, ಹೋಮ್‌ ಮಿನಿಸ್ಟರ್‌ ಕಚೇರಿಯಲ್ಲಿ ಎಸ್‌ಡಿಎ ಕೆಲಸ ಖಾಲಿ ಇದೆ. ಮೊದಲಿಗೆ ಮೂರು ವರ್ಷ ಗುತ್ತಿಗೆ ಆಧಾರದಡಿ ಕೆಲಸಕ್ಕೆ ತೆಗೆದುಕೊಂಡು ಬಳಿಕ ಖಾಯಂ ಮಾಡಲಾಗುತ್ತದೆ ಎಂದು ಹೇಳಿದ್ದಾನೆ. ಈ ಕೆಲಸಕ್ಕೆ ಸೇರಲು ಸಂತೋಷ್‌ ಒಪ್ಪಿದ್ದಾನೆ. ಈ ವೇಳೆ ಎಸ್‌ಡಿಎ ಕೆಲಸಕ್ಕೆ ₹10 ಲಕ್ಷ ಹಾಗೂ ಶ್ರೀನಿವಾಸ್‌ಗೆ ₹50 ಸಾವಿರ ಸೇರಿ ಒಟ್ಟು ₹10.50 ಲಕ್ಷಕ್ಕೆ ವ್ಯವಹಾರ ಕುದರಿಸಲಾಗಿದೆ. ಆರ್ಡರ್‌ ಕಾಪಿ ಬಂದ ಬಳಿಕ ಹಣ ಕೊಡುವುದಾಗಿ ರಾಮಚಂದ್ರ ಹೇಳಿದ್ದಾರೆ.

ಮುಂಗಡ ಹಣ ಪಡೆದು ವಂಚನೆ

ಬಳಿಕ ಕೆಲಸದ ಆರ್ಡರ್‌ ಕಾಪಿ ಬರುವುದು ಪಕ್ಕಾ ಇದೆ. ಹೀಗಾಗಿ ನನ್ನ ಖಾತೆಯಿಂದ ನನಗೆ ಹಣ ಹಾಕು. ನೀನು ಬಳಿಕ ಸಂತೋಷ್‌ನಿಂದ ಹಣ ತೆಗೆದಿಕೋ ಎಂದು ಆರೋಪಿ ಶ್ರೀನಿವಾಸ್‌, ರಾಮಚಂದ್ರಗೆ ಹೇಳಿದ್ದಾನೆ. ಈತನ ಮಾತು ನಂಬಿದ ರಾಮಚಂದ್ರ, ಬ್ಯಾಂಕ್‌ ಖಾತೆ ಹಾಗೂ ನಗದು ಮುಖಾಂತರ ಒಟ್ಟು ₹10.50 ಲಕ್ಷ ನೀಡಿದ್ದಾರೆ.

ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

ಎರಡು ವರ್ಷ ಕಳೆದರೂ ಇದುವರೆಗೆ ಕೆಲಸ ಕೊಡಿಸದೆ, ಹಣವನ್ನೂ ವಾಪಸ್‌ ನೀಡದೆ ಸುಳ್ಳು ಹೇಳಿಕೊಂಡು ಶ್ರೀನಿವಾಸ್‌ ಓಡಾಡುತ್ತಿದ್ದಾನೆ. ಇತ್ತೀಚೆಗೆ ಹಣ ಪೊಲೀಸ್‌ಗೆ ದೂರು ನೀಡುವುದಾಗಿ ಹೇಳಿದಾಗ ಆರೋಪಿ ಶ್ರೀನಿವಾಸ್‌ ₹5 ಲಕ್ಷ ವಾಪಾಸ್‌ ನೀಡಿದ್ದಾನೆ. ಉಳಿದ ಹಣ ಕೇಳಿದಾಗ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಮಚಂದ್ರ ದೂರಿನಲ್ಲಿ ಆರೋಪಿಸಿದ್ದಾರೆ.

click me!