ಮೈಸೂರು ದಸರಾಗೆ ಇಂದು ಚಾಲನೆ; ಈ ಬಾರಿ ಸರಳ, ಸುರಕ್ಷಿತ ದಸರಾ!

Kannadaprabha News   | Asianet News
Published : Oct 17, 2020, 09:45 AM ISTUpdated : Oct 17, 2020, 09:52 AM IST
ಮೈಸೂರು ದಸರಾಗೆ ಇಂದು ಚಾಲನೆ; ಈ ಬಾರಿ ಸರಳ, ಸುರಕ್ಷಿತ ದಸರಾ!

ಸಾರಾಂಶ

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ | ಬೆಳಗ್ಗೆ 7.45ಕ್ಕೆ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ |  ಸಿಎಂ ಆಗಿ 5 ನೇ ಬಾರಿ ಪಾಲ್ಗೊಳ್ಳಲಿರುವ ಯಡಿಯೂರಪ್ಪ | 26ರಂದು ಮಧ್ಯಾಹ್ನ 2.59ಕ್ಕೆ ಜಂಬೂ ಸವಾರಿಗೆ ಚಾಲನೆ

ಬೆಂಗಳೂರು (ಅ. 17): ಕೊರೋನಾ ಮಹಾಮಾರಿಯ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಬೆಳಗ್ಗೆ 7.45 ರಿಂದ 8.15 ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಪದ್ಮಶ್ರೀ ಡಾ.ಸಿ.ಎನ್‌.ಮಂಜುನಾಥ್‌ ಉದ್ಘಾಟಿಸುವರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ ಜೋಶಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಸೇರಿ ಅನೇಕ ಗಣ್ಯರು ಉಪಸ್ಥಿತರಿರುವರು.

ಕೊರೋನಾ ವಾರಿಯರ್ಸ್‌ಗೆ ಗೌರವ: ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಈ ದಸರಾದಲ್ಲಿ ಗೌರವ ಸಲ್ಲಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ವಾರಿಯ​ರ್‍ಸ್ಗಳಾದ ವೈದ್ಯ ಡಾ.ಟಿ.ಆರ್‌.ನವೀನ್‌, ಪೊಲೀಸ್‌ ಕಾನ್‌ಸ್ಟೇಬಲ್‌ ಪಿ.ಕುಮಾರ್‌, ಪೌರ ಕಾರ್ಮಿಕರಾದ ಮರಗಮ್ಮ, ಆಶಾ ಕಾರ್ಯಕರ್ತೆ ನೂರ್‌ ಜಾನ್‌, ಸ್ಟಾಫ್‌ ನರ್ಸ್‌ ಪಿ.ಎಂ.ರುಕ್ಮಿಣಿ ಹಾಗೂ ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡಿರುವ ಸಾಮಾಜಿಕ ಕಾರ್ಯಕರ್ತ ಅಯೂಬ್‌ ಅಹಮದ್‌ ಅವರನ್ನು ಸನ್ಮಾನಿಸಲಾಗುತ್ತಿದೆ.

ಹಿಂದೆಯೂ ಆಗಿತ್ತು ಅದ್ದೂರಿ ದಸರಾಗೆ ಅಡೆತಡೆ : ಈ ಬಾರಿಯೂ ಹಲವು ಆಚರಣೆಗೆ ಬ್ರೇಕ್

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತ: ಈ ಬಾರಿ ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಶನಿವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಬೆಂಗಳೂರಿನ ಪಂಡಿತ ವಿನಾಯಕ ತೊರವಿ ಅವರಿಗೆ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡುವರು. ಉಳಿದಂತೆ ಈ ಹಿಂದಿನ ವರ್ಷಗಳಂತೆ ವಸ್ತು ಪ್ರದರ್ಶನ, ಕ್ರೀಡಾಕೂಟ, ಚಲನ ಚಿತ್ರೋತ್ಸವ, ಯುವ ದಸರಾ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ಇರುವುದಿಲ್ಲ.

26 ರಂದು ಜಂಬೂ ಸವಾರಿ: ಅ.26 ರಂದು ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಂದಿಧ್ವಜ ಪೂಜೆ ನೆರವೇರಿಸುವರು. ನಂತರ 3.40ರಿಂದ 4.15ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸುವರು. ಸಂಪ್ರದಾಯದಂತೆ ಪ್ರತಿವರ್ಷ ನಡೆಯುತ್ತಿದ್ದ ಪಂಜಿನ ಕವಾಯತು ಕೂಡ ಕೊರೋನಾ ಆತಂಕ ಹಿನ್ನೆಲೆಯಲ್ಲಿ ಈ ಬಾರಿ ರದ್ದಾಗಿದೆ.

ಅಗತ್ಯ ಮುನ್ನೆಚ್ಚರಿಕೆ: ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಜಂಬೂ ಸವಾರಿಯನ್ನು ಮೊಟಕುಗೊಳಿಸಲಾಗಿದೆ, ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಸರಳವಾಗಿ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ದಸರಾ ಆಚರಿಸಲು ರಾಜ್ಯ ಸರ್ಕಾರ ಅನುಮತಿ, ಈ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯ

ಸಿಎಂ ಆಗಿ 5ನೇ ಬಾರಿ ಪಾಲ್ಗೊಳ್ಳುತ್ತಿರುವ ಬಿಎಸ್‌ವೈ

ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 5ನೇ ಬಾರಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೆ 2008ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸತತ ಮೂರು ವರ್ಷ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. 2019ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ 4ನೇ ದಸರೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಬಿಎಸ್‌ವೈ ಪಾಲಿಗೆ ಐದನೇ ದಸರಾ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸತತ 5 ದಸರೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಅತಿಹೆಚ್ಚು ಬಾರಿ ಭಾಗವಹಿಸಿದ ಮುಖ್ಯಮಂತ್ರಿಗಳಾದಿಯಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಜಂಟಿಯಾಗಿ ಮೊದಲನೇ ಸ್ಥಾನದಲ್ಲಿದ್ದಾರೆ.

- ಅಂಶಿ ಪ್ರಸನ್ನ ಕುಮಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ