Karnataka Assembly session: ಸೋಮವಾರ ಬೆಳಗಾವಿ ಸದನ ಕದನ ಶುರು : ಅಧಿವೇಶನ ವೇಳೆ 75 ಪ್ರತಿಭಟನೆ?

By Kannadaprabha News  |  First Published Dec 12, 2021, 6:56 AM IST

*2 ವರ್ಷ ಬಳಿಕ ಉತ್ತರಾಧಿವೇಶನಕ್ಕೆ ವೇದಿಕೆ ಸಿದ್ಧ
*ಮತಾಂತರ ನಿಷೇಧ ಬಗ್ಗೆ ಭಾರೀ ಚರ್ಚೆ ಸಂಭವ
*ಕಮಿಷನ್‌, ಬಿಟ್ಕಾಯಿನ್‌ ಕೂಡ ಪ್ರಸ್ತಾಪ ಸಾಧ್ಯತೆ


ಬೆಂಗಳೂರು(ಡಿ. 12): ಕುಂದಾ ನಗರಿ ಬೆಳಗಾವಿಯಲ್ಲಿ (Belagavi) ಸೋಮವಾರದಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ (Karnataka Assembly session) ಆರಂಭಗೊಳ್ಳಲಿದ್ದು, ಬಿಟ್‌ ಕಾಯಿನ್‌ ಪ್ರಕರಣ, ಕಮಿಷನ್‌ ಸರ್ಕಾರ, ಮಳೆ ಹಾನಿ ಪರಿಹಾರ ನೀಡಿಕೆಯಲ್ಲಿ ವೈಫಲ್ಯ ಸೇರಿದಂತೆ ಹಲವು ಹತ್ತು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಅಧಿವೇಶನ ನಡೆಸುವುದರಿಂದ ವಂಚಿತವಾಗಿದ್ದ ಬೆಳಗಾವಿ, ಮತ್ತೊಮ್ಮೆ ಕಾವೇರಿದ ಅಧಿವೇಶನಕ್ಕೆ ಸಾಕ್ಷಿಯಾಗಲು ಅಣಿಯಾಗಿದೆ. 

ಇದರೊಟ್ಟಿಗೆ ಇದೇ ಅಧಿವೇಶನದಲ್ಲಿ ಮಂಡನೆಯಾಗಲಿರುವ ಮತಾಂತರ ನಿಷೇಧ ಕಾಯ್ದೆ (Anti Conversion Law) ಆಡಳಿತ ಹಾಗೂ ಪ್ರತಿಪಕ್ಷಗಳ ಸದನ-ಕದನವನ್ನು ಮತ್ತೊಂದು ಸ್ತರಕ್ಕೆ ಒಯ್ಯುವ ಸೂಚನೆಯನ್ನು ನೀಡಿದೆ.ಒಮಿಕ್ರೋನ್‌ ಭೀತಿಯ ನಡುವೆಯೇ ಡಿ.13 ರಿಂದ ಡಿ.24ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

Latest Videos

undefined

ಬೆಳಗಾವಿ ಅಧಿವೇಶನ ವೇಳೆ 75 ಪ್ರತಿಭಟನೆ?

ಸುವರ್ಣವಿಧಾನಸೌಧದಲ್ಲಿ ಡಿ.13ರಿಂದ 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಈ ಬಾರಿಯೂ ಪ್ರತಿಭಟನೆಗಳ ಬಿಸಿ ತಟ್ಟಲಿದೆ. ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರ ದಂಡೇ ಬೆಳಗಾವಿ ನಗರದತ್ತ ಹರಿದುಬರುತ್ತಿದೆ. ಇದುವರೆಗೆ ಪ್ರತಿಭಟನೆಗೆ ಅವಕಾಶ ಕೋರಿ 75 ಅರ್ಜಿಗಳು ಸಲ್ಲಿಕೆಯಾಗಿವೆ.

ಎಲ್ಲವನ್ನು ಎದುರಿಸಲು ಸರ್ಕಾರ ಸಿದ್ಧ!

ಪ್ರತಿಪಕ್ಷವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತದೆ. ರಾಜ್ಯ ವಿಧಾನಮಂಡಲ ಅಧಿವೇಶನವು ಸೋಮವಾರದಿಂದ ಆರಂಭವಾಗಲಿದ್ದು ಎಲ್ಲವನ್ನು ಎದುರಿಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ

ವಿಪಕ್ಷಗಳು ಸಜ್ಜು

ಕಲಾಪದಲ್ಲಿ ಈ ವಿಚಾರಕ್ಕಿಂತ ರಾಜಕೀಯ (Politics) ಪ್ರಾಮುಖ್ಯದ ವಿಚಾರಗಳೇ ಹೆಚ್ಚು ಸದ್ದು ಮಾಡುವ ಲಕ್ಷಣಗಳಿವೆ. ಶೇ.40 ರಷ್ಟು ಕಮಿಷನ್‌ ಪಡೆಯುವ ವಿಚಾರ, ಬಿಟ್‌ಕಾಯಿನ್‌ ದಂಧೆ, ಮಳೆಯಿಂದ ಆಗಿರುವ ಬೆಳೆ ನಷ್ಟಹಾಗೂ ಹಾನಿಗೆ ಪರಿಹಾರ ನೀಡದಿರುವುದು, ಕೊರೋನಾ ನಿರ್ವಹಣೆಯಲ್ಲಿನ ವೈಫಲ್ಯ, ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡದೇ ಇರುವುದು, ಮೇಕೆದಾಟು ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಸಜ್ಜಾಗಿದೆ.

Anti Conversion Law in Karnataka: ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?: ಈಶ್ವರಪ್ಪ

ಬಿಟ್‌ ಕಾಯಿನ್‌ ದಂಧೆ ವಿಷಯ ಸಹ ಕಾಂಗ್ರೆಸ್‌ (Congress) ಮತ್ತು ಬಿಜೆಪಿ (BJP) ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಸದನದ ಹೊರಗೆ ಸಾಕಷ್ಟುಆರೋಪ-ಪ್ರತ್ಯಾರೋಪ ನಡೆದಿದ್ದು, ಸದನದಲ್ಲಿಯೂ ಪುನಃ ಮುಂದುವರೆಯುವುದನ್ನು ತಳ್ಳಿ ಹಾಕುವಂತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಜ್ಯಾದ್ಯಂತ ಉಂಟಾಗಿರುವ ಅನಿರೀಕ್ಷಿತ ಅತಿವೃಷ್ಠಿಯಿಂದಾಗಿ ಬೆಳೆ, ಆಸ್ತಿ ಹಾನಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸದಿರುವುದು. ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡದಿರುವುದು. ರಾಷ್ಟ್ರೀಯ ಶಿಕ್ಷಣ ನೀತಿ, ಆರಗ ಜ್ಞಾನೇಂದ್ರ ಅವರು ಪೊಲೀಸರ ಬಗ್ಗೆ ನೀಡಿರುವ ಹೇಳಿಕೆ ಮತ್ತಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲಿದೆ.

ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿ!

ಇದಕ್ಕೆ ತಕ್ಕ ಉತ್ತರ ನೀಡಲು ಸರ್ಕಾರ ಕೂಡ ಸಜ್ಜಾಗಿದೆ. ಆದರೆ,ರಾಜ್ಯ ಸರ್ಕಾರ ಮತಾಂತರದ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಕಾಯ್ದೆ ಮಂಡನೆಗೆ ತೀರ್ಮಾನಿಸಿರುವುದು ಸದನದಲ್ಲಿ ಭಾರಿ ಕಿಡಿ ಹೊತ್ತಿಸುವ ಲಕ್ಷಣಗಳಿವೆ. ಸರ್ಕಾರದ ಈ ತೀರ್ಮಾನಕ್ಕೆ ಇದಕ್ಕೆ ಈಗಾಗಲೇ ಕಾಂಗ್ರೆಸ್‌ ಪಕ್ಷವು ವಿರೋಧ ವ್ಯಕ್ತಪಡಿಸಿದ್ದು ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಿದರೆ ಸಂಪೂರ್ಣ ವಿರೋಧ ವ್ಯಕ್ತಪಡಿಸುವುದಾಗಿ ಸ್ಪಷ್ಟಪಡಿಸಿದೆ. ಹೀಗಾಗಿ ಮತಾಂತರ ನಿಷೇಧ ಕಾಯಿದೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ.

Karnataka Politics: ಶ್ರೀಗಳ ಜತೆ ವಿಜಯೇಂದ್ರ ಮಹತ್ವದ ಚರ್ಚೆ, ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆ

ಏನು ಪ್ರಸ್ತಾಪಿಸಲು ಪ್ರತಿಪಕ್ಷ ಸಿದ್ಧತೆ?

ಬಿಟ್‌ಕಾಯಿನ್‌ ಹಗರಣ, ಶೇ.40 ಕಮಿಷನ್‌ ಆರೋಪ, ಮಳೆ ಹಾನಿ ಪರಿಹಾರ ವೈಫಲ್ಯ, ಮತಾಂತರ ತಡೆಗೆ ಹೊಸ ಕಾಯ್ದೆ, ಕೊರೋನಾ ನಿರ್ವಹಣೆ, ಮೇಕೆದಾಟು ಅಣೆಕಟ್ಟು ಯೋಜನೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂಎ ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

click me!