ಕಲಬುರಗಿ ಜಿಲ್ಲೆಯ ಮಾಚನಾಳ ತಾಂಡಾಕ್ಕೆ ಕಂದಾಯ ಸಚಿವ ಅಶೋಕ ಬಂಪರ್ ಕೊಡುಗೆ ನೀಡಿದ್ದಾರೆ. ತಾಂಡಾ ವಾಸ್ತವ್ಯಕ್ಕೆ ಆಗಮಿಸಿರುವ ಅವರು ಮಂಗಳವಾರ ಗ್ರಾಮ ಸಭೆಯಲ್ಲಿ ಮಾತನಾಡಿ, ತಾಂಡಾದ ಸರ್ವತೋಮುಖ ಪ್ರಗತಿಗಾಗಿ 1 ಕೋಟಿ ರು.ಗಳ ವಿಶೇಷ ಅನುದಾನ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿದರು.
ಮಾಚನಾಳ (ಕಲಬುರಗಿ) (ಜ.18): ಕಲಬುರಗಿ ಜಿಲ್ಲೆಯ ಮಾಚನಾಳ ತಾಂಡಾಕ್ಕೆ ಕಂದಾಯ ಸಚಿವ ಅಶೋಕ ಬಂಪರ್ ಕೊಡುಗೆ ನೀಡಿದ್ದಾರೆ. ತಾಂಡಾ ವಾಸ್ತವ್ಯಕ್ಕೆ ಆಗಮಿಸಿರುವ ಅವರು ಮಂಗಳವಾರ ಗ್ರಾಮ ಸಭೆಯಲ್ಲಿ ಮಾತನಾಡಿ, ತಾಂಡಾದ ಸರ್ವತೋಮುಖ ಪ್ರಗತಿಗಾಗಿ 1 ಕೋಟಿ ರು.ಗಳ ವಿಶೇಷ ಅನುದಾನ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿದರು. ಮಾಚನಾಳ ತಾಂಡಾದಲ್ಲಿರುವ ಅಲೆಮಾರಿಗಳ ಬದುಕು ಹಸನಾಗಬೇಕು ಎಂಬುದೇ ಅನುದಾನ ಬಿಡುಗಡೆಯ ಹಿಂದಿನ ಉದ್ದೇಶವಾಗಿದೆ. ತಾಂಡಾದಲ್ಲಿ ಮೂಲ ಸವಲತ್ತಿಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಅಲ್ಲದೆ, ಬಿಡುಗಡೆ ಮಾಡಿರುವ 1 ಕೋಟಿ ರು.ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂಬರುವ 3 ದಿನಗಳಲ್ಲಿ ಈ ಅನುದಾನ ಮಾಚನಾಳ ತಾಂಡಾಕ್ಕೆ ತಲುಪಲಿದೆ ಎಂದು ತಿಳಿಸಿದರು. ತಾವು ಗ್ರಾಮ ವಾಸ್ತವ್ಯ ಮಾಡಿದರೆ, ಆ ಊರಲ್ಲಿ ಅಧಿಕಾರಿಗಳು ವಾಸ್ತವ್ಯ ಮಾಡುತ್ತಾರೆ. ಇದರಿಂದ ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ಯೋಜನೆಗಳು ಜನರ ಮನೆಗೇ ತಲುಪುತ್ತಿವೆ. ಹಲೋ ಕಂದಾಯ ಸಚಿವರೇ ಯೋಜನೆಯಿಂದ ಕಳೆದ 4 ತಿಂಗಳಲ್ಲಿ 40 ಸಾವಿರ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಇದು ಬಿಜೆಪಿಯ ಸಾಧನೆ. ಇದನ್ನೇ ಹಿಂದಿನವರು ಯಾಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
Grama Vastavya: ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ ಕುಟುಂಬಗಳಿಗೆ 1 ತಿಂಗಳಲ್ಲಿ ಹಕ್ಕುಪತ್ರ: ಸಚಿವ ಅಶೋಕ್ ಭರವಸೆ
ನೀವೇನು ಮಾಡಿದ್ದೀರಿ? ಎಂದು ಕಾಂಗ್ರೆಸ್‌ನವರು ಕೇಳುತ್ತಾರೆ. ನಾನು ಅವರಿಗೆ ಹೇಳುತ್ತೇನೆ. ನೀವೇನು ಮಾಡಿದ್ದೀರಿ, ನೀವ್ಯಾಕೆ ಮಾಡಲಾಗಲಿಲ್ಲ ಎಂದು ಮೊದಲು ಪ್ರಶ್ನಿಸಿಕೊಳ್ಳಿ. ನಂತರ ನಮ್ಮನ್ನು ಪ್ರಶ್ನಿಸಿ. ಇದನ್ನು ಬಿಟ್ಟು ನೀವು ಹೀಗೆ ಇಲ್ಲದ್ದನ್ನು ಪ್ರಶ್ನಿಸುತ್ತಲೇ ಅವನತಿ ದಾರಿಯಲ್ಲಿದ್ದೀರಿ ಎಂದು ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು. ದೇಶದಲ್ಲಿ ಉನ್ನತಿಗೆ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಹೆಚ್ಚಿನ ಕೆಲಸ ಮಾಡುತ್ತಿದೆ. ಹೀಗಾಗಿ, ಜನರ ಒಲವು ಬಿಜೆಪಿಯತ್ತ ಹೆಚ್ಚುತ್ತಿದೆ ಎಂದರು. ಸಮಾರಂಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗುತ್ತಿರುವ ತಾಂಡಾಗಳಲ್ಲಿ ಮೂಲ ಸವಲತ್ತಿನ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಲಿದೆ. ಇದಕ್ಕಾಗಿ ಸಿಎಂ ಅವರಿಗೆ ತಾವು ಪ್ರಭಾವ ಬೀರಿ ಯೋಜನೆ ರೂಪ ಪಡೆಯುವಂತೆ ಮಾಡಿ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.
Shivamogga: ಜ.28ಕ್ಕೆ ಹೊಳಲೂರಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ
ತಾಂಡಾದಲ್ಲಿ ಸಂಭ್ರಮ ಸಂತಸ: ಸಚಿವ ಅಶೋಕ ಅವರು ರಾತ್ರಿ 7.30 ಗಂಟೆಗೆ ತಾಂಡಾಕ್ಕೆ ಬರುತ್ತಿದ್ದಂತೆಯೇ ಅಲ್ಲಿ ಸಂತಸ ಮನೆ ಮಾಡಿತ್ತು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಜಿಲ್ಲಾಧಿಕಾರಿ ಯಶವಂತ, ತಹಸೀಲ್ದಾರ್ ವೆಂಕನಗೌಡ ಸೇರಿದಂತೆ ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಬಳಿಕ, ಊರಲ್ಲಿನ ಮಂದಿರಗಳಿಗೆ ತೆರಳಿ, ದೇವರ ದರ್ಶನ ಪಡೆದರು. ಬಳಿಕ, ಅಶೋಕ ಅವರನ್ನು ಎತ್ತಿನ ಬಂಡಿಯಲ್ಲಿ ಊರವರು ಸ್ವಾಗತಿಸಿದರು. ನಂತರ, ಸಚಿವರು ಗ್ರಾಮ ಸಭೆ ನಡೆಸಿ, ಊರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.