ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ| ಲಾಕ್‌ಡೌನ್ ಕಾರಣ ಪರಿಹಾರ ಘೋಷಿಸಿದ್ದ ಸರ್ಕಾರ| ಪ್ರತಿಯೊಬ್ಬರಿಗೆ 5 ಸಾವಿರ ರು. ನೀಡುವ ಪ್ಯಾಕೇಜ್ ಇದು
ಲಿಂಗರಾಜು ಕೋರಾ
ಬೆಂಗಳೂರು(ಜೂ.02): ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ ಲಾಕ್‌ಡೌನ್ ಸಂಕಷ್ಟದ ಪರಿಹಾರ ಕೋರಿ 1.77 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರು.ಗಳನ್ನು ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರ ಪರಿಹಾರಕ್ಕೆ ಪ್ರಕಟಿಸಿದೆ. ಪ್ರತಿ ಚಾಲಕರಿಗೆ 5 ಸಾವಿರ ರು. ನೀಡಲಾಗುತ್ತದೆ. ಆದರೆ, 1.77 ಲಕ್ಷ ಚಾಲಕರು ಅರ್ಜಿ ಸಲ್ಲಿಸಿರುವ ಕಾರಣ ಎಲ್ಲರಿಗೂ ನೀಡಿದರೆ 88 ಕೋಟಿ ರು. ಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಅನುದಾನದ ಬಗ್ಗೆ ಸರ್ಕಾರದ ಬಳಿ ಸ್ಪಷ್ಟನೆ ಕೇಳಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಬಿಡುಗಡೆ ಮಾಡಿರುವ 20 ಕೋಟಿ ರು. ಅನ್ನು ಘೋಷಿಸಿದರೆ ಐದು ಸಾವಿರ ರು. ನಂತೆ ಮೊದಲು ಅರ್ಜಿ ಸಲ್ಲಿಸಿದ 40 ಸಾವಿರ ಚಾಲಕರಿಗೆ ನೀಡಬೇಕಾಗುತ್ತದೆ. ಇನ್ನು ಉಳಿದವರಿಗೆ ಪರಿಹಾರ ನೀಡಲು ಮುಂದಿನ ಹಂತದ ಅನುದಾನ ಬಿಡುಗಡೆವರೆಗೆ ಕಾಯಬೇಕಾಗಬಹುದು ಅಥವಾ ಅಥವಾ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಮೊದಲ ಕಂತಿನ ರೂಪದಲ್ಲಿ (ತಲಾ 1130 ರು. ಬರುತ್ತದೆ) ನೀಡಬಹುದು ಎನ್ನಲಾಗಿದೆ.
ಪರಿಹಾರಕ್ಕೆ ಬೇಕು 387 ಕೋಟಿ:
ಚಾಲಕರಿಗೆ ಲಾಕ್‌ಡೌನ್ ಪರಿಹಾರ ಘೋಷಣೆ ಮಾಡಿದ ವೇಳೆ, ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದಂತೆ ಸರ್ಕಾರದ ಅಂದಾಜಿನಂತೆ ರಾಜ್ಯದಲ್ಲಿ ಚಾಲಕ ವೃತ್ತಿಯನ್ನೇ ಅವಲಂಬಿಸಿರುವ 7.75 ಲಕ್ಷ ಮಂದಿ, ಹಳದಿ ಬ್ಯಾಡ್ಜ್ ಹೊಂದಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿದ್ದಾರೆ. ಒಂದು ವೇಳೆ ಇವರೆಲ್ಲರೂ ಅರ್ಜಿ ಸಲ್ಲಿಸಿದರೆ ತಲಾ 5 ಸಾವಿರ ಪರಿಹಾರ ನೀಡಲು ಒಟ್ಟು 387 ಕೋಟಿ ರು.ಗಳಿಗೂ ಹೆಚ್ಚು ಅನುದಾನ ಬೇಕಾಗಬಹುದು.
ರಾಜ್ಯ ಸರ್ಕಾರ ಚಾಲಕರಿಗೆ ಕೆಲ ಕಠಿಣ ನಿಬಂಧನೆ ವಿಧಿಸಿ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮೇ 22ರಿಂದ ಅವಕಾಶ ನೀಡಿತ್ತು. ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ನಿಗದಿಪಡಿಸಲಾಗಿಲ್ಲ. ಪ್ರಸ್ತುತ ಕಳೆದ ಒಂದು ವಾರದಲ್ಲಿ ಒಂದು ವಾರದಲ್ಲಿ 1.77 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇದೀಗ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇತ್ತೀಚೆಗೆ ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಚಾಲಕರ ಒತ್ತಾಯದಂತೆ ವಾಹನ ಸುಸ್ಥಿರ ಪ್ರಮಾಣ ಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ವಿನಾಯಿತಿ ಸೇರಿದಂತೆ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಿದ್ದಾರೆ. ಈ ಬಗೆಗೆ ಶನಿವಾರ ಪರಿಷ್ಕೃತ ಆದೇಶವೂ ಹೊರಬಿದ್ದಿದೆ. ಹೀಗಾಗಿ ಇನ್ನು ಅರ್ಜಿ ಸಲ್ಲಿಕೆ ತೀವ್ರಗತಿಯಲ್ಲಿ ಹೆಚ್ಚಬಹುದು ಎನ್ನಲಾಗಿದೆ.
ಪ್ರಸ್ತುತ ಸರ್ಕಾರ 20 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಆದ್ಯತೆ ಮೇಲೆ ನೀಡುವುದಾ, ಕಂತಿನ ರೂಪದಲ್ಲಿ ನೀಡುವುದಾ ಎಂದು ಸರ್ಕಾರದ ಸಲಹೆ ಪಡೆಯಲಾಗುವುದು.
- ಶಿವಕುಮಾರ್, ಸಾರಿಗೆ ಇಲಾಖೆ ಆಯುಕ್ತ
ರಾಜ್ಯದಲ್ಲಿ 7.75 ಲಕ್ಷ ಅರ್ಹ ಚಾಲಕರಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಠಿಣ ನಿಬಂಧನೆಗಳನ್ನು ಕೈಬಿಟ್ಟು ಪರಿಹಾರ ನೀಡಬೇಕು. ಇದಕ್ಕೆ ಅಗತ್ಯದಷ್ಟುಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಚಂದ್ರು, ಓಲಾ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ