ಮೋಟಾರು ವಾಹನ ನಿರೀಕ್ಷಕ ಹುದ್ದೆ ಶೀಘ್ರ ಭರ್ತಿ: ಸಚಿವ ರಾಮಲಿಂಗಾರೆಡ್ಡಿ

By Kannadaprabha NewsFirst Published Jul 7, 2024, 12:19 PM IST
Highlights

ಸಾರಿಗೆ ಇಲಾಖೆಯಲ್ಲಿ ಖಾಲಿ ಇದ್ದ 286 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ಪೈಕಿ ಈಗ 84 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಇನ್ನೂ 76 ಹುದ್ದೆ ಭರ್ತಿಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 
 

ಬೆಂಗಳೂರು (ಜು.07): ಸಾರಿಗೆ ಇಲಾಖೆಯಲ್ಲಿ ಖಾಲಿ ಇದ್ದ 286 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ಪೈಕಿ ಈಗ 84 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಇನ್ನೂ 76 ಹುದ್ದೆ ಭರ್ತಿಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸಾರಿಗೆ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 83 ಮೋಟಾರು ವಾಹನ ನಿರೀಕ್ಷಕರಿಗೆ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, 150 ಮೋಟಾರು ವಾಹನ ನಿರೀಕ್ಷಕ ಹುದ್ದೆ ಭರ್ತಿಗೆ 2016ರಲ್ಲಿಯೇ ರಾಜ್ಯ ಲೋಕಸೇವಾ ಆಯೋಗದಿಂದ ಪರೀಕ್ಷೆ ನಡೆಸಲಾಗಿತ್ತು. 

ಪರೀಕ್ಷೆ ನಡೆಸಿದ ನಂತರ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಯಾವುದಾದರು ಕಾರ್ಯಾಗಾರ (ಗ್ಯಾರೇಜ್‌)ದಲ್ಲಿ ಒಂದು ವರ್ಷ ಕಾಲ ಸೇವಾನುಭವ ಹೊಂದಿರುವವರನ್ನು ಮಾತ್ರ ಹುದ್ದೆಗೆ ಭರ್ತಿ ಮಾಡಬೇಕು ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದವು. ಹೀಗಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿ, ಇದೀಗ ಅರ್ಹ 83 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

Latest Videos

ಮತ್ತೆ ಸ್ಪೋಟಗೊಂಡ‌ ನಂದಿ ಸಕ್ಕರೆ ಕಾರ್ಖಾನೆ ಬಾಯ್ಲರ್: ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರು

ಹೊಸ ನೇಮಕಾತಿಯಾದರೂ ಇನ್ನೂ 202 ಹುದ್ದೆಗಳು ಖಾಲಿ ಉಳಿಯಲಿದ್ದು, ಆ ಪೈಕಿ 76 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಲೋಕಸೇವಾ ಆಯೋಗದಿಂದ ಪರೀಕ್ಷೆ ನಡೆಸಿ, ನಿಯಮದಂತೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಅದರ ಜತೆಗೆ ಇನ್ನೂ 110 ಮೋಟಾರು ವಾಹನ ನಿರೀಕ್ಷಕರ ಹುದ್ದೆ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಸಾರಿಗೆ ಆಯುಕ್ತ ಯೋಗೀಶ್‌, ಅಪರ ಸಾರಿಗೆ ಆಯುಕ್ತರಾದ ಮಲ್ಲಿಕಾರ್ಜುನ್‌, ಜ್ಞಾನೇಂದ್ರ ಕುಮಾರ್‌ ಇತರರಿದ್ದರು.

ಬಿಎಂಟಿಸಿಯ ನಿವೃತ್ತ ನೌಕರರಿಗೆ ಪಿಂಚಣಿ: ನಿವೃತ್ತ ನೌಕರರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಸಂಸ್ಥೆ ರೂಪಿಸಿರುವ ಪ್ರಯಾಸ್ ಯೋಜನೆ ಅಡಿಯಲ್ಲಿ ಬಿಎಂಟಿಸಿಯ 100ಕ್ಕೂ ಹೆಚ್ಚಿನ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪಿಂಚಣಿ ಪಾವತಿ ಆದೇಶವನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಯಾಸ್‌ ಯೋಜನೆ ಅಡಿಯಲ್ಲಿ 58 ವರ್ಷ ತುಂಬಿದ ನೌಕರರಿಗೆ ಅವರು ನಿವೃತ್ತರಾದ ತಿಂಗಳಲ್ಲೇ ಪಿಂಚಣಿ ಆದೇಶ ನೀಡುವ ವ್ಯವಸ್ಥೆ ಮಾಡಲಾಗಿದೆ. 

ರಾಜ್ಯದಲ್ಲಿ ಮಳೆ ಅಬ್ಬರ ಇಳಿಕೆ, ಪ್ರವಾಹ ಮುಂದುವರಿಕೆ: ಖಾನಾಪುರ 7 ಫಾಲ್ಸ್‌ ವೀಕ್ಷಣೆಗೆ ನಿರ್ಬಂಧ

ಆಮೂಲಕ ಪಿಂಚಣಿಗಾಗಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಅಲೆಯುವ ಬದಲು ಇಲಾಖೆಯಲ್ಲಿಯೇ ಪಿಂಚಣಿ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಅದರಿಂದ ನಿವೃತ್ತರಾದ ಮರು ತಿಂಗಳಿನಲ್ಲೇ ನಿವೃತ್ತಿ ವೇತನ ದೊರೆಯುವಂತಾಗಲಿದೆ, ಕಳೆದ ಮೂರು ವರ್ಷಗಳಲ್ಲಿ 160 ಪಿಂಚಣಿ ಪಾವತಿ ಆದೇಶ ನೀಡಲಾಗಿದ್ದು, ಈಗ 100ಕ್ಕೂ ಹೆಚ್ಚಿನ ನಿವೃತ್ತ ನೌಕರರಿಗೆ ಪಿಂಚಣಿ ಪಾವತಿ ಆದೇಶ ವಿತರಿಸಲಾಗಿದೆ ಎಂದರು.

click me!