ಕಿರಿಯ ಪಶು ವೈದ್ಯರ ನೇಮಕ ಶೀಘ್ರ: ಸಚಿವ ಪ್ರಭು ಚವ್ಹಾಣ್‌

By Kannadaprabha NewsFirst Published Jul 20, 2022, 4:00 AM IST
Highlights

ಬೆಳಗಾವಿಯಲ್ಲಿ 82 ಪಶು ಆ್ಯಂಬುಲೆನ್ಸ್‌, ಪ್ರಯೋಗಾಲಯ, ತರಬೇತಿ ಕೇಂದ್ರ, ಸಂಚಾರಿ ಚಿಕಿತ್ಸಾ ಘಟಕ ಲೋಕಾರ್ಪಣೆ

ಬೆಳಗಾವಿ(ಜು.20): ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಪಶು ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗಿದೆ. ಶೀಘ್ರದಲ್ಲೇ 250 ಕಿರಿಯ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು. ಸುವರ್ಣ ವಿಧಾನಸೌಧದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಹಾಗೂ ಇಲಾಖೆಯ ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ, 82 ಪಶು ಸಂಜೀವಿನಿ ಆ್ಯಂಬುಲೆನ್ಸ್‌, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ರೈತರ ತರಬೇತಿ ಕೇಂದ್ರ ಹಾಗೂ ಪಶು ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.

ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯರ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೆಲವರು ನ್ಯಾಯಾಲಯಕ್ಕೆ ಪಿಐಎಲ್‌ ಹಾಕಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಶೀಘ್ರ 400 ಪಶು ವೈದ್ಯರ ನೇಮಕ ಮಾಡಲಾಗುವುದು. 12 ವರ್ಷಗಳಿಂದ ಇಲಾಖೆಯಲ್ಲಿ ಬಡ್ತಿ ಆಗಿರಲಿಲ್ಲ. ನಾನು ಬಂದ ಮೇಲೆ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.

ಪಿಎಸ್‌ಐ ನೇಮಕಕ್ಕೆ ಮರು ಪರೀಕ್ಷೆ ನಡೆಸದಂತೆ ಕೋರಿದ್ದ ಅರ್ಜಿ ವಜಾ

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾನು 20 ಸಾವಿರ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದೇನೆ. ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 900 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಕ್ರೀದ್‌ ವೇಳೆ ಶೇ.70 ರಷ್ಟುಗೋವುಗಳ ರಕ್ಷಣೆಯಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಬೇಕು. ಗೋಪಾಲಕ, ಗೋರಕ್ಷಕ ನರೇಂದ್ರ ಮೋದಿ ಅವರ ಆರ್ಶೀವಾದದಿಂದ ರಾಜ್ಯಕ್ಕೆ 275 ಪಶು ಆ್ಯಂಬುಲೆನ್ಸ್‌ಗಳು ಬಂದಿವೆ. ಇದಕ್ಕಾಗಿ ಪ್ರಧಾನಿ ಅವರನ್ನು ಅಭಿನಂದಿಸುತ್ತೇನೆ. ನಾನು ಸಚಿವನಾದ ಮೇಲೆ 15 ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡಿದ್ದೆ. ಆಗ ನನ್ನನ್ನು ಕೇಂದ್ರಕ್ಕೆ ಕರೆಯಿಸಿ ಕರ್ನಾಟಕದಲ್ಲಿ ಪಶುಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು, ಆ್ಯಂಬುಲೆನ್ಸ್‌ ಸೇವೆಗಳ ಕುರಿತು ಚರ್ಚಿಸಲಾಯಿತು. ಇದು ನಮ್ಮ ಕರ್ನಾಟಕ ಸರ್ಕಾರದ ಪ್ರಯೋಗ. ಆ್ಯಂಬುಲೆನ್ಸ್‌ಗಳ ನಿರ್ವಹಣೆ ಶೇ.60ರಷ್ಟುಕೇಂದ್ರದ್ದು, ಶೇ.40ರಷ್ಟು ರಾಜ್ಯ ಸರ್ಕಾರದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಶು ಸಾಕಣೆ, ಚಿಕಿತ್ಸೆ, ಆಸ್ಪತ್ರೆ, ಲಾಭ ಸೇರಿ ಇನ್ನಿತರ ವಿಷಯಗಳ ಕುರಿತು ಇಲಾಖೆ ಮಾಡಿರುವ ಸಾಧನೆ ಬಗ್ಗೆ 8 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಅಡಿ 18 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳ ಚೆಕ್‌ ವಿತರಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ವಿಧಾನಸಭೆ ಉಪ ಸಭಾಧ್ಯಕ್ಷ ವಿಶ್ವನಾಥ ಮಾಮನಿ ಇತರರು ಇದ್ದರು.

1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ಆ್ಯಂಬುಲೆನ್ಸ್‌

ಗೋಮಾತೆ ಕಸಾಯಿಖಾನೆಗೆ ಹೋಗಬಾರದು. ನಮಗೆ ಹುಷಾರಿಲ್ಲ ಎಂದರೆ 108ಕ್ಕೆ ಕರೆ ಮಾಡುತ್ತೇವೆ. ಜಾನುವಾರುಗಳಿಗೆ ಹುಷಾರಿಲ್ಲದಿದ್ದರೆ 1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ಆ್ಯಂಬುಲೆನ್ಸ್‌ ಬಂದು ಸೇವೆ ನೀಡುತ್ತದೆ. ಪ್ರಾಣಿ ಸಹಾಯವಾಣಿ ಕೇಂದ್ರದಲ್ಲಿ 24*7 ಕೆಲಸ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಆದಮೇಲೆ ಹೆಚ್ಚು ಕೋಳಿ ಸಾಕಣೆಗೆ ಒತ್ತು ನೀಡಲಾಗುವುದು ಎಂದು ಸಚಿವ ಚವ್ಹಾಣ್‌ ಹೇಳಿದರು.

ಗೋಮಾತೆಯ ಸೇವಕನಾದ್ದರಿಂದ ನಾ ಔಟ್‌ ಆಗಲಿಲ್ಲ, ಇನ್‌ ಆದೆ

ಸಂಪುಟ ವಿಸ್ತರಣೆ ವೇಳೆ ನಾನು ಔಟ್‌.. ಔಟ್‌.. ಔಟ್‌... ಎಂದು ಟಿವಿಯಲ್ಲಿ ಹೇಳುತ್ತಿದ್ದರು. ಆದರೆ, ನಾನು ನಿಜವಾದ ಗೋಸೇವಕನಾಗಿರುವುದರಿಂದ ನಾನು ಔಟ್‌ ಆಗುವುದಿಲ್ಲ ಎಂದು ಹೇಳಿದ್ದೆ. ಹೀಗಾಗಿ, ನಾನು ಔಟ್‌ ಆಗಲಿಲ್ಲ. ಇನ್‌ ಆದೆ. ನನಗೆ ಗೋಮಾತಾ ಇಲಾಖೆಯನ್ನೇ ನೀಡಿ ಎಂದು ಹೇಳಿದ್ದೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

ಮೈಸೂರು, ಕಲಬುರಗಿ ವಿಭಾಗದಲ್ಲೂ ಆ್ಯಂಬುಲೆನ್ಸ್‌

ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಯೋಜನೆ ನಮ್ಮ ಸರ್ಕಾರದ ಯೋಜನೆಯಾಗಿದ್ದು, ಇದರಿಂದಾಗಿ ರೈತರಿಗೆ ಒಳ್ಳೆಯದಾಗಬೇಕು ಅಷ್ಟೆಎಂದು ಸಚಿವ ಪ್ರಭು ಚವ್ಹಾಣ್‌ ಹೇಳಿದರು. ಬೆಳಗಾವಿ ವಿಭಾಗ ಮಟ್ಟದಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು, ಕಲಬುರಗಿ ವಿಭಾಗದಲ್ಲೂ ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು. ಆ್ಯಂಬುಲೆನ್ಸ್‌ನಲ್ಲಿ ಸ್ಕ್ಯಾನಿಂಗ್‌ ಮಷಿನ್‌, ಓರ್ವ ಪಶು ವೈದ್ಯ, ಸಹಾಯಕ, ಚಾಲಕ ಇರುತ್ತಾರೆ. ಈ ಆ್ಯಂಬುಲೆನ್ಸ್‌ ಸೇವೆಯಿಂದ ರೈತರಿಗೆ ಅನುಕೂಲವಾಗಲಿದೆ.

ಮುಂದೆಯೂ ಇದೇ ಖಾತೆ ಸಿಗಲಿ

ಮುಂದೆಯೂ ಪಶು ಸಂಗೋಪನಾ ಸಚಿವನಾಗಬೇಕೆಂಬ ಇಚ್ಛೆ ಇದೆ. ನಮ್ಮ ಕುಲದೇವತಾ ಸೇವಾಲಾಲ್‌ ಮಹಾರಾಜರ ಜೊತೆ 7,000 ಹಸುಗಳು ಇದ್ದವು. ಅವರ ರೀತಿಯಲ್ಲೇ ಪಶುಗಳ ಸೇವೆ ಮಾಡಬೇಕೆಂಬ ಉದ್ದೇಶ ನನ್ನಲ್ಲಿದೆ ಅಂತ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ. 

ಸಾವಯವ ಕೃಷಿ ಅಳವಡಿಸಿಕೊಳ್ಳಿ: ಕಾರಜೋಳ

ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ನಾವೆಲ್ಲ ಸೇವಿಸುವ ಆಹಾರ ವಿಷಪೂರಿತಗೊಂಡು, ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಹೀಗಾಗಿ ರೈತರು ಸಾವಯವ ಗೊಬ್ಬರಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್‌ ಖರ್ಗೆ

ನಗರದ ಸುವರ್ಣ ವಿಧಾನಸೌಧದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮಂಗಳವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಹಾಗೂ ಇಲಾಖೆಯ ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ರೈತರ ತರಬೇತಿ ಕೇಂದ್ರ ಹಾಗೂ ಪಶು ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದರು.

ದನ, ಎಮ್ಮೆ, ಕರು, ಹಸು, ಕುರಿಗಳನ್ನು ಸಾಕುವ ಮೂಲಕ ಸಾವಯವ ಗೊಬ್ಬರ ಬಳಸಿ, ಭೂಮಿ ಫಲವತ್ತತೆ ಹೆಚ್ಚಿಸುವ ಜೊತೆಗೆ ಗುಣಮಟ್ಟದ ಬೆಳೆ ಬೆಳೆಯಬಹುದು. ಮುಂದಿನ ಹಂತದಲ್ಲಿ ಸಾವಯವ ಕೃಷಿ, ಜಾನುವಾರು ಸಾಕಣೆ ಪೋ›ತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಿವೆ. ಕೇಂದ್ರ ಸರ್ಕಾರ ಪಶುಸಾಕಣೆ ಪೋ›ತ್ಸಾಹಿಸುವ ಮೂಲಕ ರೈತರ ಆದಾಯವನ್ನೂ ದ್ವಿಗುಣಗೊಳಿಸುತ್ತಿದೆ ಎಂದು ತಿಳಿಸಿದರು.
 

click me!