ಸಾರಿಗೆ ಬಸ್‌ಗಳಲ್ಲಿ ಚಾಲಕ ಸಾಕು, ಪ್ರತ್ಯೇಕ ಕಂಡಕ್ಟರ್‌ ಬೇಡ: ಶಿಫಾರಸು

By Kannadaprabha NewsFirst Published Jul 20, 2022, 2:00 AM IST
Highlights

ಸೋರಿಕೆ ತಡೆಗಟ್ಟುವಿಕೆ, ಸಿಬ್ಬಂದಿಗಳ ಸೇವೆಯಲ್ಲಿ ದಕ್ಷತೆ ಹೆಚ್ಚಿಸುವ ಯಾವ ರೀತಿಯ ಬದಲಾವಣೆ ಮಾಡಬೇಕು ಎಂಬ ಬಗ್ಗೆ ಮಂಗಳವಾರ ಸಮಿತಿ ಸಲ್ಲಿಸಿರುವ 131 ಪುಟಗಳ ವರದಿಯಲ್ಲಿ ಸಲಹೆ ನೀಡಲಾಗಿದೆ.

ಬೆಂಗಳೂರು(ಜು.20):  ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಇನ್ನು ಮುಂದೆ ಬಸ್‌ ಖರೀದಿಗೆ ಸರ್ಕಾರ ಹಣ ನೀಡದೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸೌಲಭ್ಯ ಒದಗಿಸಬೇಕು, ಈಗಿರುವ 24 ಸಾವಿರ ಬಸ್‌ಗಳನ್ನು 2030ರ ವೇಳೆಗೆ 40 ಸಾವಿರಕ್ಕೆ ಹೆಚ್ಚಿಸಬೇಕು, ನಿಗಮಗಳು ತಮ್ಮ ಆದಾಯದಲ್ಲೇ ಮುಂದುವರೆಯಲು ಕ್ರಮ ಕೈಗೊಳ್ಳಬೇಕು. ಪ್ರತಿ ಬಸ್‌ಗೆ ಚಾಲಕ ಕಂ ನಿರ್ವಾಹಕರು ಮಾತ್ರ ಸೇವೆ ಸಲ್ಲಿಸಬೇಕು ಎಂಬುದು ಸೇರಿದಂತೆ ಹಲವಾರು ಶಿಫಾರಸುಗಳನ್ನು ನಿಗಮಗಳ ಪುನಶ್ಚೇತನ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸಮೂರ್ತಿ ಅವರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ನಿಗಮಗಳು ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಆರ್ಥಿಕವಾಗಿ ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಯಾವ್ಯಾವ ಕ್ರಮ ಕೈಗೊಳ್ಳಬೇಕು, ಸೋರಿಕೆ ತಡೆಗಟ್ಟುವಿಕೆ, ಸಿಬ್ಬಂದಿಗಳ ಸೇವೆಯಲ್ಲಿ ದಕ್ಷತೆ ಹೆಚ್ಚಿಸುವ ಯಾವ ರೀತಿಯ ಬದಲಾವಣೆ ಮಾಡಬೇಕು ಎಂಬ ಬಗ್ಗೆ ಮಂಗಳವಾರ ಸಮಿತಿ ಸಲ್ಲಿಸಿರುವ 131 ಪುಟಗಳ ವರದಿಯಲ್ಲಿ ಸಲಹೆ ನೀಡಲಾಗಿದೆ.

ಪಿಎಸ್‌ಐ ನೇಮಕಕ್ಕೆ ಮರು ಪರೀಕ್ಷೆ ನಡೆಸದಂತೆ ಕೋರಿದ್ದ ಅರ್ಜಿ ವಜಾ

ಕಳೆದ ಆರು ತಿಂಗಳಿನಿಂದ ರಾಜ್ಯದ ನಾಲ್ಕು ನಿಗಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿರುವ ಸಮಿತಿ, ಅವುಗಳಿಗೆ ಸೂಕ್ತ ಸಲಹೆಗಳು, ಸಾರಿಗೆ ನಿಗಮಗಳನ್ನು ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಸಿದ್ಧಪಡಿಸಿದೆ. ವರದಿಯನ್ನು ಶ್ರೀನಿವಾಸಮೂರ್ತಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಲ್ಲಿಸಿದರು.

ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚಿಸಲಾಗುವುದು. ಜತೆಗೆ, ಎಲ್ಲ ಶಿಫಾರಸುಗಳನ್ನು ಪರಿಶೀಲನೆ ನಡೆಸಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆ ನೀಡಿರುವುದಾಗಿ ಹಾಜರಿದ್ದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಕಾರ್ಯದರ್ಶಿ ಜಯರಾಂ ರಾಯಪುರ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್‌.ವಿ. ಪ್ರಸಾದ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಮತ್ತಿತರರಿದ್ದರು.
 

click me!