ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗಳ (6ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆಯು ಶುಕ್ರವಾರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದೆ.
ಬೆಂಗಳೂರು (ನ.19): ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗಳ (6ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆಯು ಶುಕ್ರವಾರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದೆ. ಒಟ್ಟು 15 ಸಾವಿರ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ 1624 ಹುದ್ದೆಗಳಿಗೆ ಯಾವುದೇ ಅಭ್ಯರ್ಥಿಗಳು ಆಯ್ಕೆಯಾಗದ ಕಾರಣ ಆ ಹುದ್ದೆಗಳು ಖಾಲಿ ಉಳಿದಂತಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಚಿಕ್ಕಬಳ್ಳಾಪುರ ಮೂಲದ ಸುರೇಶ್ ಬಾಹು ಎನ್ನುವವರು ಇಂಗ್ಲಿಷ್ ಶಿಕ್ಷಕರಾಗಿ, ಮಧುಗಿರಿ ಮೂಲದ ವೈ.ಆರ್.ರವಿಕುಮಾರ್ ಮತ್ತು ರಾಯಚೂರು ಜಿಲ್ಲೆಯ ಅಶ್ವತ್ಥಾಮ ಎಂಬುವರು ಸಮಾಜ ವಿಜ್ಞಾನ ವಿಷಯ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿದರು. ಈ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗೆ ಇಲಾಖಾ ವೆಬ್‌ಸೈಟ್‌ನಲ್ಲಿ schooleducation.kar.nic.inನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಧ್ಯಾನ: ಶಿಕ್ಷಣ ಸಚಿವರ ಆದೇಶಕ್ಕೆ ವೈಜ್ಞಾನಿಕ ಆಧಾರ ಇದೆಯೇ?, ಡಾ. ಭಂಡಾರಿ ಪ್ರಶ್ನೆ
15,000 ಹುದ್ದೆಗಳ ಪೈಕಿ ಹೆಚ್ಚು ಶಿಕ್ಷಕರ ಕೊರತೆ ಇರುವ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 5 ಸಾವಿರ ಹುದ್ದೆಗಳು ಮತ್ತು ಇತರೆ ಭಾಗದ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ 5 ಸಾವಿರ ಹುದ್ದೆಗಳಿಗೆ 4187 ಶಿಕ್ಷಕರು ಆಯ್ಕೆಯಾದರೆ, ಉಳಿದ ಭಾಗದ 10 ಸಾವಿರ ಹುದ್ದೆಗಳ ಪೈಕಿ 9176 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಆಯ್ಕೆಪಟ್ಟಿಯಲ್ಲಿ 1500 ಮಂದಿ ಸೇವಾನಿರತ ಶಿಕ್ಷಕರು ಇರಬಹುದೆಂದು ಅಂದಾಜಿಸಲಾಗಿದೆ ಎಂದರು.
ಆಕ್ಷೇಪಣೆಗೆ ನ.19ರಿಂದ 23ರವರೆಗೆ ಅವಕಾಶ: ಈ ತಾತ್ಕಾಲಿಕ ಆಯ್ಕೆಪಟ್ಟಿಗೆ ಬರುವ ಆಕ್ಷೇಪಣೆ ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಲಾಗುವುದು. ಇದಕ್ಕೆ ನ.19ರಿಂದ ನ.23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಂತಿಮ ಆಯ್ಕೆಪಟ್ಟಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗಬಹುದು, ಆಗದೆಯೂ ಇರಬಹುದು ಎಂದರು. ಬಳಿಕ ಆಯ್ಕೆಯಾದ ಎಲ್ಲ ಶಿಕ್ಷಕರಿಗೆ ಕನಿಷ್ಠ ದಿನಗಳ ತರಬೇತಿ ಬಳಿಕ ಶಾಲೆಗಳಿಗೆ ನಿಯೋಜಿಸಲಾಗುವುದು. ಈ ಹೊಸ ಶಿಕ್ಷಕರು ಮುಂದಿನ ಅಂದರೆ 2023-24ನೇ ಸಾಲಿನಿಂದ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸಚಿವರು ತಿಳಿಸಿದರು.
ವಿಷಯವಾರು ಹುದ್ದೆಗಳ ಆಯ್ಕೆಪಟ್ಟಿ: ಇನ್ನು ವಿಷಯವಾರು ಇಂಗ್ಲೀಷ್ ಭಾಷೆಯಲ್ಲಿ ಖಾಲಿ ಇದ್ದ 1807 ಹುದ್ದೆಗಳಿಗೆ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಖಾಲಿ ಇದ್ದ 6500 ಹುದ್ದೆಗಳಿಗೆ 5550, ಸಮಾಜ ಪಾಠಗಳ 4693 ಹುದ್ದೆಗಳಿಗೆ 4521 ಜನ, ಜೀವ ವಿಜ್ಞಾನದ 2000 ಹುದ್ದೆಗಳಿಗೆ 1624 ಮಂದಿ ಆಯ್ಕೆಯಾಗಿದ್ದಾರೆ. ಇನ್ನು ಈ ಬಾರಿ ಸಿಇಟಿ ಬರೆದಿದ್ದ 10 ಮಂದಿ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಮೂವರು ಆಯ್ಕೆಯಾಗಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನೇಮಕಾತಿಯಲ್ಲಿ ಶೇ.1ರಷ್ಟುಮೀಸಲಾತಿ ನೀಡಲಾಗಿತ್ತು. ಅದೇ ರೀತಿ ಎಂಜಿನಿಯರಿಂಗ್ ಶಿಕ್ಷಣ ಹಿನ್ನೆಲೆಯ 34 ಅಭ್ಯರ್ಥಿಗಳಲ್ಲಿ 19 ಮಂದಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
1:1 ಅನುಪಾತದ ಆಯ್ಕೆ ಪಟ್ಟಿಗೂ ಮುನ್ನ 1:2 ಅನುಪಾತದ ಆಯ್ಕೆ ಪಟ್ಟಿಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಅವುಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲಿಸಿ ಬಳಿಕ 1:1 ಅನುಪಾತದ ಪಟ್ಟಿಸಿದ್ಧಪಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತ ಆರ್.ವಿಶಾಲ್ ಇದ್ದರು.
ಫೆಬ್ರವರಿಯಲ್ಲಿ 2500 ಹೈಸ್ಕೂಲ್ ಶಿಕ್ಷಕರ ನೇಮಕ: 2023ರ ಫೆಬ್ರವರಿಯಲ್ಲಿ ನಿಗದಿಯಂತೆ 2500 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ‘15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕವೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮತ್ತೆ ಸಿಇಟಿ ಯಾವಾಗ?’ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ಬರುವ ಫೆಬ್ರವರಿಯಲ್ಲಿ 2500 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದಷ್ಟೇ ಹೇಳಿದರು.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್
ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 10 ಸಾವಿರ ಶಿಕ್ಷಕರ ಹುದ್ದೆಗಳಿಗೆ ನಡೆಸಿದ ನೇಮಕಾತಿಯಲ್ಲಿ 2600 ಜನ ಮಾತ್ರ ಆಯ್ಕೆಯಾಗಿದ್ದರು. ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದಾಗ 10 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಸಿದಾಗ 3 ಸಾವಿರ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ನೇಮಕಾತಿ ನಿಯಮಗಳಿಗೆ ಒಂದಷ್ಟುಸುಧಾರಣೆ ತಂದ ಪರಿಣಾಮ 15 ಸಾವಿರ ಹುದ್ದೆಗಳಿಗೆ 13 ಸಾವಿರಕ್ಕೂ ಹೆಚ್ಚು ಜನ ನೇಮಕಗೊಂಡಿದ್ದಾರೆ.
- ಬಿ.ಸಿ.ನಾಗೇಶ್, ಶಿಕ್ಷಣ ಸಚಿವ