ಶಾಲೆಗಳಲ್ಲಿ ಧ್ಯಾನ: ಶಿಕ್ಷಣ ಸಚಿವರ ಆದೇಶಕ್ಕೆ ವೈಜ್ಞಾನಿಕ ಆಧಾರ ಇದೆಯೇ?, ಡಾ. ಭಂಡಾರಿ ಪ್ರಶ್ನೆ
ಮಕ್ಕಳ ಮಾನಸಿಕ ಸಮಸ್ಯೆ ಕಡಿಮೆ ಮಾಡಲು ಆಟೋಟಗಳನ್ನು ವ್ಯವಸ್ಥೆ ಮಾಡಿ ಅಂತ ಶಿfಷಣ ಸಚಿವ ನಾಗೇಶ್‌ಗೆ ಸಲಹೆ ನೀಡಿದ ಡಾ.ಭಂಡಾರಿ
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ನ.05): ವಿದ್ಯಾರ್ಥಿಗಳು ಪ್ರತಿ ದಿನ 10 ನಿಮಿಷ ಧ್ಯಾನ ನಡೆಸಲು ಶಾಲೆಗಳಿಗೆ ಸೂಚನೆ ನೀಡಿರುವ ಶಿಕ್ಷಣ ಸಚಿವರ ನಿರ್ಧಾರಕ್ಕೆ ನಾಡಿನ ಕೆಲ ಸಾಹಿತಿಗಳು, ಚಿಂತಕರು, ಲೇಖಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ನಾಡಿನ ವಿವಿಧ ಭಾಗಗಳ ಲೇಖಕರು, ಸಾಹಿತಿಗಳಿಂದ ಜಂಟಿ ಹೇಳಿಕೆಗಳನ್ನ ಬಿಡುಗಡೆ ಮಾಡಿದ್ದಾರೆ.
ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಿ, ಒತ್ತಡ ಕಡಿಮೆ ಮಾಡಲು ಧ್ಯಾನ ವ್ಯವಸ್ಥೆ ಮಾಡುವಂತೆ ಸಚಿವ ಬಿ.ಸಿ. ನಾಗೇಶ್ ನೀಡಿರುವ ಟಿಪ್ಪಣಿ ಇದಾಗಿದ್ದು, ಸಚಿವರ ನಿರ್ಧಾರಕ್ಕೆ ಜಂಟಿ ಹೇಳಿಕೆಯ ಮೂಲಕ ವಿರೋಧ ವ್ಯಕ್ತಪಡಿಸಿರುವ ಚಿಂತಕರು, ಹಲವು ಅಂಶಗಳ ಬಗ್ಗೆ ತಮ್ಮ ಆಕ್ಷೇಪ ದಾಖಲಿಸಿದ್ದಾರೆ. ಈ ಪೈಕಿ ಉಡುಪಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅವರು ಕೂಡಾ ಒಬ್ಬರು. ತಮ್ಮ ಆಕ್ಷೇಪ ಏಕೆ ಎನ್ನುವ ವಿಚಾರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಡಾ. ಪಿ.ವಿ. ಭಂಡಾರಿ ಅವರು, ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ವೈಜ್ಞಾನಿಕ ಆಧಾರ ಇರಬೇಕು. ಮೊಬೈಲ್ ಚಟದಿಂದ ಮಕ್ಕಳ ಏಕಾಗ್ರತೆ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಶಾಲೆಗಳನ್ನು ಬಹಳಷ್ಟು ದಿನ ಮುಚ್ಚಿಟ್ಟ ಪರಿಣಾಮ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಿದೆ. ಶಾಲೆ ತೆಗೆಯಿರಿ ಎಂದು ಯುನಿಸೆಫ್ ಹೇಳಿದಾಗಲೂ ಶಾಲೆ ಮುಚ್ಚಿದರು. ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಆನ್ಲೈನ್ ಶಿಕ್ಷಣವೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ ಅಂತ ಹೇಳಿದ್ದಾರೆ.
ಶಾಲೆಗಳಲ್ಲಿ ಧ್ಯಾನದ ವಿಚಾರಕ್ಕೆ ಟ್ವೀಟ್ ವಾರ್: ಸಿದ್ದು ವಿರುದ್ಧ ಸಚಿವ ನಾಗೇಶ್ ಗರಂ..!
ಮಕ್ಕಳಿಗೆ ಅಗತ್ಯವಿರುವುದು ಸರಿಯಾದ ಕೌನ್ಸಿಲಿಂಗ್, ಹೊರತು ಧ್ಯಾನವಲ್ಲ. ಸ್ಕೂಲ್ ಕೌನ್ಸಿಲರ್‌ಗಳನ್ನ ನೇಮಕ ಮಾಡಬೇಕು. ಶಾಲೆಗಳಲ್ಲಿ ಮಕ್ಕಳ ಸಮಸ್ಯೆಗಳಿಗೆ ಕೌನ್ಸಿಲಿಂಗ್ ಮೂಲಕ ಪರಿಹಾರ ಸಿಗಬೇಕು. ಶಿಕ್ಷಣದ ಮಾರ್ಗಸೂಚಿಗಳಲ್ಲಿ ಧ್ಯಾನ ಮಾಡಬೇಕೆಂದು ಎಲ್ಲೂ ಸೂಚಿಸಿಲ್ಲ. ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಧ್ಯಾನ ಮಾಡಲು ಸೂಚಿಸಿದ್ದಾರೆ. ಸಚಿವರು ಮತ್ತು ಸರ್ಕಾರ ಜವಾಬ್ದಾರಿ ಮರೆಯುತ್ತಿದೆ ಅಂತ ಡಾ. ಪಿ.ವಿ. ಭಂಡಾರಿ ಹೇಳಿದ್ದಾರೆ.
ಯಾಕೆ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ ಎಂದು ಮೊದಲು ಗಮನಿಸಬೇಕು. ಈ ಬಗ್ಗೆ ಮನೋರೋಗ ತಜ್ಞರು ಮನೋವೈದ್ಯಕೀಯ ಸಂಘಗಳು ಅನೇಕ ಬಾರಿ ಮಾತನಾಡಿವೆ. ಯಾವುದೇ ಮನೋರೋಗ ತಜ್ಞರನ್ನು ಕೇಳಿ ಈ ನಿರ್ಧಾರ ಮಾಡಿಲ್ಲ. ವೈಜ್ಞಾನಿಕ ಆಧಾರವಿಲ್ಲದೆ ಸರ್ಕಾರ ಈ ರೀತಿ ನಿರ್ಧಾರ ಕೈಗೊಳ್ಳುತ್ತಿದೆ. ಹತ್ತು ನಿಮಿಷದ ಧ್ಯಾನದಿಂದ ಸಮಸ್ಯೆ ಬಗೆಹರಿಯುತ್ತಾ? ಅಂತ ಸಚಿವ ನಾಗೇಶ್ ಅವರಿಗೆ ಭಂಡಾರಿ ಅವರು ಪ್ರಶ್ನಿಸಿದ್ದಾರೆ.
ಸುಮ್ಮನೆ ಜನರನ್ನು ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ. ಸಮಸ್ಯೆಯ ಬುಡವನ್ನು ಮೊದಲು ಹುಡುಕಿ. ಕೇವಲ ತೋರ್ಪಡಿಕೆಯ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳಿಗೆ ವೈಜ್ಞಾನಿಕ ತಳಹದಿ ಬೇಕು. ಮೊಟ್ಟೆ ಕೊಡುವ ವಿಚಾರದಲ್ಲೂ ನಾವು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ದೇಶಾದ್ಯಂತ ತಜ್ಞರು ಮೊಟ್ಟೆ ನೀಡಬೇಕು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಅಭಿಪ್ರಾಯ ಪಡೆಯದೆ ಕೇವಲ ಸಸ್ಯಹಾರಿ ಆಹಾರ ಮಾತ್ರ ಮಕ್ಕಳಿಗೆ ಯೋಗ್ಯ ಎಂದು ಸರ್ಕಾರ ಹೇಳಿತ್ತು. 10 ನಿಮಿಷದ ಧ್ಯಾನದಿಂದ ಮಕ್ಕಳ ಒತ್ತಡ ಕಡಿಮೆಯಾಗುವುದಿದ್ದರೆ ಮಾಡಿ. ನಾನು ವಿರೋಧ ಮಾಡುತ್ತಿರುವುದು ರಾಜಕೀಯ ಕಾರಣಗಳಿಗೆ ಅಲ್ಲ. ಹಿಂದಿನ ಸರ್ಕಾರಗಳು ಇದ್ದಾಗ ಕೂಡ ಜನರ ಆರೋಗ್ಯ ಮಕ್ಕಳ ಶಿಕ್ಷಣದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಾಗಲೂ ಟೀಕಿಸಿದ್ದೆ. ಧ್ಯಾನಕ್ಕೆ ಸೂಚಿಸುವುದರ ಬದಲಾಗಿ ಮಾಡುವ ಕೆಲಸಗಳು ಬೇಕಾದಷ್ಟಿವೆ ಎಂದಿದ್ದಾರೆ. ಎಷ್ಟು ಶಾಲೆಗಳಲ್ಲಿ ವಿದ್ಯಾರ್ಥಿ ಆಪ್ತ ಸಮಾಲೋಚಕರು ಇದ್ದಾರೆ? ಎಂದು ಪ್ರಶ್ನಿಸಿರುವ ಡಾ.ಭಂಡಾರಿ, ಮಕ್ಕಳ ಮಾನಸಿಕ ಸಮಸ್ಯೆ ಕಡಿಮೆ ಮಾಡಲು ಆಟೋಟಗಳನ್ನು ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಶಾಲಾ ಕಾಲೇಜುಗಳಲ್ಲಿ 10 ನಿಮಿಷ ಧ್ಯಾನ, ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಕಿರಿಕ್!
ಪಿಯುಸಿ ಕಾಲೇಜಿನಲ್ಲಿ ಆಟೋಟಕ್ಕೆ ಯಾವುದೇ ಪ್ರೋತ್ಸಾಹ ಇಲ್ಲ. ದಿನವಿಡೀ ಶಿಕ್ಷಣದಲ್ಲೇ ವಿದ್ಯಾರ್ಥಿಗಳು ಮುಳುಗಿರುತ್ತಾರೆ. ಸಂಜೆಯ ಬಳಿಕ ಪಿಯುಸಿ ಮಕ್ಕಳಿಗೆ ಸಿಇಟಿ, ನೀಟ್ ತರಗತಿಯ ಒತ್ತಡಗಳಿವೆ. ಮಕ್ಕಳಿಗೆ ಮಾನಸಿಕ ಒತ್ತಡ ನೀಡದಂತೆ ಶಿಕ್ಷಣ ರೂಪಿಸುವುದು ಸರ್ಕಾರಕ್ಕೆ ಬೇಕಾಗಿಲ್ಲ. ಜನರಿಗೆ ಶೋ ಆಫ್ ಮಾಡಲು ಸರ್ಕಾರ ಈ ರೀತಿ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಶಿಕ್ಷಕರೇ ಧ್ಯಾನ ನಡೆಸಲು ಸೂಚಿಸಿದ್ದರೆ ನಾನು ಸ್ವಾಗತಿಸುತ್ತೇನೆ. ಇದು ವೈಜ್ಞಾನಿಕವೇ ಎಂಬುದಷ್ಟೇ ನಮ್ಮ ಪ್ರಶ್ನೆಯಾಗಿದೆ? ಎಂದು ಹೇಳಿದ್ದಾರೆ.
ನಾನಂತೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿರೋಧ ವ್ಯಕ್ತಪಡಿಸುತ್ತಿಲ್ಲ. ಸರ್ಕಾರದ ನಿರ್ಧಾರಗಳು ಮತ್ತು ಅದನ್ನು ವಿರೋಧಿಸುವವರಿಗೆ ಏನಾದರೂ ಅಜೆಂಡಾ ಇರುತ್ತೆ. ಯಾರಿಗೂ ಜನರ ಅಥವಾ ಮಕ್ಕಳ ಹಿತಾಸಕ್ತಿ ಬೇಕಾಗಿಲ್ಲ ಎಂದಿದ್ದಾರೆ.