ರೈತರಿಗೆ ಸಕಾಲದಲ್ಲಿ ಗೊಬ್ಬರ, ಸಾಲ ವಿತರಣೆ : ಸಿಎಂ

By Kannadaprabha NewsFirst Published Jun 2, 2021, 7:43 AM IST
Highlights
  • ಕೋವಿಡ್‌ ನಡುವೆಯೇ ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭಕ್ಕೆ ಕ್ಷಣಗಣನೆ
  •  ರೈತಾಪಿ ವರ್ಗದ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
  • ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪೂರ್ವಸಿದ್ಧತೆ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ 

ಬೆಂಗಳೂರು (ಜೂ.02):  ಕೋವಿಡ್‌ ನಡುವೆಯೇ ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಂಗಳವಾರ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪೂರ್ವಸಿದ್ಧತೆ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಭೆ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರಿಗೆ ಅಗತ್ಯ ಇರುವ ಡಿಎಪಿ ಗೊಬ್ಬರ ಮತ್ತು ಯೂರಿಯ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು. ಜೊತೆಗೆ ಪ್ರಸಕ್ತ ರಾಜ್ಯದಲ್ಲಿ 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ ಎಂದರು.

ಮಹತ್ವದ ಸಭೆ ಕರೆದ ಯಡಿಯೂರಪ್ಪ, ಸಿಎಂ ನಡೆ ಕುತೂಹಲ

ಆಹಾರ ಉತ್ಪಾದನೆ: ರಾಜ್ಯದಲ್ಲಿ ಈವರೆಗೆ ಚೆನ್ನಾಗಿ ಮಳೆಯಾಗಿದೆ. ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟುಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್‌ 6-7ರ ವೇಳೆಗೆ ಮುಂಗಾರು ಪ್ರಾರಂಭವಾಗಲಿದೆ. 2020-21ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್‌ಗಳಷ್ಟುಆಹಾರ ಧಾನ್ಯ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟುಹೆಚ್ಚಳವಾಗಿದೆ. ಈ ವರ್ಷ 135.48 ಲಕ್ಷ ಟನ್‌ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಕೃಷಿ ಸಾಲ: 2020-21ರಲ್ಲಿ ಕೃಷಿ ಸಾಲ ಗುರಿಗಿಂತ ಶೇ.16 ರಷ್ಟುಹೆಚ್ಚು ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಮೂರು ಸಾವಿರ ಕೋಟಿ ರು. ಹೆಚ್ಚುವರಿ ಗುರಿ ನಿಗದಿ ಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ 21 ಸಾವಿರ ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿ​ಸಿದಂತೆ 1067 ಕೋಟಿ ರು. ಪಾವತಿಗೆ ಬಾಕಿ ಇದ್ದು, ಕೂಡಲೇ 250 ಕೋಟಿ ರು. ಬಿಡುಗಡೆ ಮಾಡುವಂತೆ ಅ​ಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜೂ.3ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ: ಮುಂಗಾರು ಪೂರ್ವ ಭಾರೀ ಮಳೆ

ಪ್ರವಾಹ ಎದುರಿಸಲು ಸಿದ್ಧತೆ:  ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಿದ್ಧತೆ ನಡೆಸಲಾಗಿದ್ದು, ಪಂಚಾಯಿತಿ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ ತಿಳಿಸಿದರು. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾ​ಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟುಸಂಖ್ಯೆಯಲ್ಲಿದೆ. ಡಿಎಪಿ ಪೂರೈಕೆಯಲ್ಲಿದ್ದ ಸಮಸ್ಯೆ ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ತೋಟಗಾರಿಕಾ ಸಚಿವ ಶಂಕರ್‌, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮತ್ತು ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

15.23 ಕೋಟಿ ರು. ವರ್ಗಾವಣೆ :  ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಸೆಮಿಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಬಿಡುಗಡೆಯಾಗಿರುವ 19 ಕೋಟಿ ರು. ಪೈಕಿ 15.23 ಕೋಟಿ ರು. ಅನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದರು.

click me!