ಮಹಾ ಡಿಸಿಎಂ ಪವಾರ್ ವಿರುದ್ಧ ಕರ್ನಾಟಕ ಕೆಂಡ!| ಬೆಳಗಾವಿ, ಕಾರವಾರ ನಮ್ಮದು ಎಂಬ ಹೇಳಿಕೆಗೆ ಪಕ್ಷಾತೀತ ಆಕ್ರೋಶ| ಇದು ಉದ್ಧಟತನದ ಪರಮಾವಧಿ: ಮುಖ್ಯಮಂತ್ರಿ ಯಡಿಯೂರಪ್ಪ|
ಬೆಂಗಳೂರು(ನ.19): ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಧಾರ್ಷ್ಟ್ಯದ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಎಲ್ಲಾ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹೇಳಿಕೆ ಉದ್ಧಟತನದ ಪರಮಾವಧಿ. ಬೆಳಗಾವಿ, ಕಾರವಾರ, ನಿಪ್ಪಾಣಿ ಎಂದೆಂದಿಗೂ ಕರ್ನಾಟಕದ್ದೇ ಭಾಗ. ಅಜಿತ್ ಪವಾರ್ ಅವರು ಉಭಯ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
undefined
ಬೆಳಗಾವಿ, ಕಾರವಾರ ನಮ್ದು: ಬೆಂಕಿಗೆ ಮಹಾ ಡಿಸಿಎಂ ತುಪ್ಪ!
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಾರವಾರ, ನಿಪ್ಪಾಣಿ, ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಜೊತೆಗೆ ಮಹಾಜನ್ ವರದಿಯ ಪ್ರಕಾರ ಸೊಲ್ಲಾಪುರ ಕೂಡ ನಮಗೆ ಸೇರಬೇಕು. ಹೀಗಾಗಿ ಅಜಿತ್ ಪವಾರ್ ಅವರು ವಿನಾಕಾರಣ ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಬಾರದು. ಹೀಗೆ ಮಾಡಿದರೆ ಸೊಲ್ಲಾಪುರಕ್ಕಾಗಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಅಜಿತ್ ಪವಾರ್ ಈ ಹಿಂದೆ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ವಿಚಾರಕ್ಕೂ ಇದೇ ರೀತಿ ಹೇಳಿಕೆ ನೀಡಿದ್ದರು. ಅದರ ಪರಿಣಾಮವನ್ನು ಅವರು ಮರೆತಂತಿದೆ. ಸೂರ್ಯ ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿರುತ್ತದೆ. ಅಜಿತ್ ಪವಾರ್ ಅವರ ಇಂತಹ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗಳ ಉದ್ಧಟತನದ ಹೇಳಿಕೆಯನ್ನು ಸಹಿಸುವುದಿಲ್ಲ. ತಾಯಿ ಭುವನೇಶ್ವರಿಯ ಮೇಲೆ ಆಣೆ ಬೆಳಗಾವಿ, ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
'ಕೇಂದ್ರಕ್ಕೆ ನನ್ನ ಮೇಲೆ ಲವ್, ಅದಕ್ಕೇ ಐಟಿ ನೋಟಿಸ್ ಬಂದಿದೆ!'
ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು, ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಬೆಂಕಿ ಹಚ್ಚುವುದೇ ಮಹಾರಾಷ್ಟ್ರ ನಾಯಕರ ಚಾಳಿಯಾಗಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪವಾರ್ ಅವರು ತಮ್ಮ ಘನತೆಗೆ ತಕ್ಕ ಹೇಳಿಕೆ ನೀಡಿಲ್ಲ. ಬೆಳಗಾವಿ ಕನ್ನಡಿಗರದ್ದೇ ಹೊರತು ಯಾರ ಅಪ್ಪನದೂ ಅಲ್ಲ ಎಂದರು.
ಕಾರವಾರದ ಬಿಜೆಪಿ ಶಾಸಕಿ ರೂಪಾಲಿ ನಾಯ್‌್ಕ ಹೇಳಿಕೆ ನೀಡಿ, ತಾವು ಮರಾಠ ಸಮುದಾಯಕ್ಕೆ ಸೇರಿದವರಾದರೂ ಕನ್ನಡಿಗಳು. ಕರ್ನಾಟಕದಲ್ಲಿ ಜನಿಸಿ ಬದುಕು ಕಟ್ಟಿಕೊಂಡಿರುವ ನಾವು ಮಹಾರಾಷ್ಟ್ರದವರಿಗೆ ಬೆಂಬಲ ನೀಡುವುದಿಲ್ಲ. ಮಹಾರಾಷ್ಟ್ರದವರು ಅವರ ಗಡಿ ಕಾಯ್ದುಕೊಳ್ಳಲಿ. ನಮ್ಮ ಜಾಗಕ್ಕೆ ಕಾಲು ಹಾಕುವುದು ಬೇಡ. ಬೆಳಗಾವಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಬೆಂಕಿ ಹಚ್ಚಬಾರದು
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹೇಳಿಕೆ ಉದ್ಧಟತನದ ಪರಮಾವಧಿ. ಬೆಳಗಾವಿ, ಕಾರವಾರ, ನಿಪ್ಪಾಣಿ ಎಂದೆಂದಿಗೂ ಕರ್ನಾಟಕದ್ದೇ ಭಾಗ. ಅಜಿತ್ ಪವಾರ್ ಅವರು ಉಭಯ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಸೊಲ್ಲಾಪುರ ಕೇಳ್ತೀವಿ
ಕಾರವಾರ, ನಿಪ್ಪಾಣಿ, ಬೆಳಗಾವಿ ನಮ್ಮದು. ಮಹಾಜನ್ ವರದಿ ಪ್ರಕಾರ ಸೊಲ್ಲಾಪುರ ಕೂಡ ನಮಗೆ ಸೇರಬೇಕು. ಅಜಿತ್ ಪವಾರ್ ವಿನಾಕಾರಣ ಕನ್ನಡಿಗರನ್ನು ಕೆಣಕಬಾರದು. ಹೀಗೆ ಮಾಡಿದರೆ ಸೊಲ್ಲಾಪುರಕ್ಕಾಗಿ ಹೋರಾಡಬೇಕಾಗುತ್ತದೆ.
- ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಬೆಂಕಿ ಹಚ್ಚುವ ಚಾಳಿ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಬೆಂಕಿ ಹಚ್ಚುವುದೇ ಮಹಾರಾಷ್ಟ್ರ ನಾಯಕರ ಚಾಳಿಯಾಗಿದೆ. ಅಜಿತ್ ಪವಾರ್ ಆ ಕೆಲಸ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪವಾರ್ ಅವರು ತಮ್ಮ ಘನತೆಗೆ ತಕ್ಕ ಹೇಳಿಕೆ ನೀಡಿಲ್ಲ.
- ಪ್ರಭು ಚವ್ಹಾಣ, ಪಶುಸಂಗೋಪನಾ ಸಚಿವ
ಆತ್ಮನಿರ್ಭರ ಅನುದಾನ ಪಡೆಯುವಲ್ಲಿ ಕರ್ನಾಟಕ ನಂಬರ್ 1: ಸಚಿವ ಸೋಮಶೇಖರ್
ಮಹಾರಾಷ್ಟ್ರ ಬೆಂಬಲಿಸಲ್ಲ
ನಾನು ಮರಾಠ ಸಮುದಾಯಕ್ಕೆ ಸೇರಿದರೂ ಕನ್ನಡಿಗಳು. ಕರ್ನಾಟಕದಲ್ಲಿ ಜನಿಸಿ ಬದುಕು ಕಟ್ಟಿಕೊಂಡಿರುವ ನಾವು ಮಹಾರಾಷ್ಟ್ರದವರನ್ನು ಬೆಂಬಲಿಸಲ್ಲ. ಬೆಳಗಾವಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ.
- ರೂಪಾಲಿ ನಾಯ್‌್ಕ, ಕಾರವಾರ ಬಿಜೆಪಿ ಶಾಸಕಿ