ನೌಕರರಿಗೆ ವೇತನ ಸಹಿತ ರಜೆ ನೀಡಿ ರಾಜ್ಯ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಆದ್ರೆ, ಈ ಎರಡು ಕ್ಷೇತ್ರಗಳಲ್ಲಿಇರುವ ನೌಕರರಿಗೆ ಮಾತ್ರ
ಅನ್ವಯವಾಗಲಿದೆ.
ಬೆಂಗಳೂರು, (ನ.02): ನಾಳೆ ಅಂದ್ರೆ ನ.3ರಂದು ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳ ಮತದಾನದಲ್ಲಿ ಪಾಲ್ಗೊಳ್ಳಲಿರುವಂತ ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ಮಂಜೂರು ಮಾಡುವಂತೆ ರಾಜ್ಯ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ಇಂದು (ಸೋಮವಾರ) ಆದೇಶ ಹೊರಡಿಸಿರುವ ಕಾರ್ಮಿಕ ಇಲಾಖೆಯ ಆಯುಕ್ತರು, ನವೆಂಬರ್ 03ರಂದು ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಸದರಿ ದಿನದಂದು ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ವೇತನ ಸಹಿತ ರಜೆ ನೀಡಲು ಕ್ರಮ ವಹಿಸುವಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನಿರ್ದೇಶಿಸಲಾಗಿದೆ.
RR ನಗರ, ಶಿರಾದಲ್ಲಿ ಚುನಾವಣಾ ಸಿದ್ಧತೆ: ಎಲ್ಲೆಡೆ ಬಿಗಿ ಭದ್ರತೆ
ಈ ಹಿನ್ನಲೆಯಲ್ಲಿ ಚುನಾವಣೆ ಘೋಷಣೆ ಆಗಿರುವ ಮತಕ್ಷೇತ್ರಗಳಲ್ಲಿ ನೊಂದಾಯಿತರಾದ ಅರ್ಹ ಮತದಾರರಾದ ಎಲ್ಲಾ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ-3ಎ ರಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಅವಕಾಶ ನೀಡಲು ಆದೇಶಿಸಿದ್ದಾರೆ.