ಬರೋಬ್ಬರಿ 7100 ಹೊಸ ಸಹಾಯಕ ಪ್ರಾಧ್ಯಾಪಕ ಹುದ್ದೆ ಸೃಷ್ಟಿಗೆ ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವನೆ

By Gowthami K  |  First Published Jan 30, 2024, 1:04 PM IST

ರಾಜ್ಯದಲ್ಲಿನ ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 7,100 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.


ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿನ ಕಾರ್ಯಭಾರಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ 7,100 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 102 ಪಾಲಿಟೆಕ್ನಿಕ್‌ ಕಾಲೇಜು ಮತ್ತು 16 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಹಲವು ವರ್ಷಗಳಿಂದ ಕಾರ್ಯಭಾರಕ್ಕೆ ಅನುಗುಣವಾಗಿ ಕಾಯಂ ಸಹಾಯಕ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚಿಸಿ ನೇಮಕಾತಿ ಮಾಡಿಕೊಳ್ಳದೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿರುವ ಉನ್ನತ ಶಿಕ್ಷಣ ಇಲಾಖೆ ಇದೀಗ ಪದವಿ ಕಾಲೇಜುಗಳಿಗೆ 5800 ಹುದ್ದೆ ಸೇರಿ ಒಟ್ಟು 7100 ಹೊಸ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾತಿ ಪಡೆದು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.

Tap to resize

Latest Videos

undefined

ಸಶಸ್ತ್ರ ಮೀಸಲು ಪೊಲೀಸ್ ಪರೀಕ್ಷೆಯಲ್ಲೂ ಅಕ್ರಮ? ಪರೀಕ್ಷೆ ಬರೆದು 1 ಗಂಟೆ ತಡವಾಗಿ ಹೊರಬಂದ ಅಭ್ಯರ್ಥಿಗಳು!

ಪದವಿ ಕಾಲೇಜುಗಳಲ್ಲಿ ಪ್ರಸ್ತುತ ಇರುವ 7600 ಮಂಜೂರಾದ ಬೋಧಕ ಹುದ್ದೆಗಳ ಪೈಕಿ 1600 ರಷ್ಟು ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 1242 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರಿಂದ ಬಾಕಿ ಉಳಿಯುವುದು 400 ಹುದ್ದೆಗಳು ಮಾತ್ರ. ಅದೇ ರೀತಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಬಹುತೇಕ ಹುದ್ದೆಗಳು ಭರ್ತಿಯಾಗಿವೆ. ಆದರೂ, ಈ ಕಾಲೇಜುಗಳು ಪ್ರತಿ ವರ್ಷ 12 ಸಾವಿರದಷ್ಟು ಅತಿಥಿ ಉಪನ್ಯಾಸಕರನ್ನು ಅವಲಂಬಿಸಿದೆ. ಹಣಕಾಸಿನ ಕೊರತೆಯಿಂದಾಗಿ ಹೊಸ ಹುದ್ದೆಗಳನ್ನು ಸೃಷ್ಟಿಸದೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಜೊತೆಗೆ ಪ್ರತಿ ವರ್ಷ ಸೇವೆ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರ ಪ್ರತಿಭಟನೆ, ಮುಷ್ಕರದ ಬಿಸಿ ಸರ್ಕಾರಕ್ಕೆ ತಟ್ಟುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಹುದ್ದೆಗಳಿಗೆ ಮಂಜೂರಾತಿ ಪಡೆದು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ.

15ನೇ ವಯಸ್ಸಿಗೆ ಸ್ಟಾರ್ ನಟಿ ವಿವಾಹಿತ ದಕ್ಷಿಣದ ಸ್ಟಾರ್‌ ನಟನ ಜೊತೆ ಸಂ ...

ಇಲಾಖೆಯ ಉನ್ನತ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯದ 430 ಪದವಿ ಕಾಲೇಜುಗಳಿಗೆ 5,800 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಿಗೆ 1300 ಬೋಧಕ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಭರ್ತಿಗೆ ಅನುಮತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಕಾಯಂ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿ ಅನುಮತಿ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಅವರು ಒಪ್ಪಿದರೆ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿಯೇ ಈ ಹುದ್ದೆಗಳ ಭರ್ತಿ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.

ಅನುಮತಿ ಅನುಮಾನ: ಸಹಾಯಕ ಪ್ರಾಧ್ಯಾಪಕರುಗಳ ವೇತನ ಶ್ರೇಣಿ 52 ಸಾವಿರ ರು.ನಿಂದ 1.28 ಲಕ್ಷ ರು.ವರೆಗಿದೆ. ಈಗಾಗಲೇ 1242 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಈ ಹುದ್ದೆಗಳಿಗೆ ವಾರ್ಷಿಕ ಕನಿಷ್ಠ 85 ಕೋಟಿ ರು. ವೇತನ ನೀಡಬೇಕಾಗುತ್ತದೆ. ಹೊಸದಾಗಿ 7100 ಹುದ್ದೆಗಳ ವೇತನಕ್ಕೆ ವಾರ್ಷಿಕ ಸುಮಾರು 500 ಕೋಟಿ ರು.ಗಳಿಗೂ ಹೆಚ್ಚು ಅನುದಾನ ಬೇಕು. ಗ್ಯಾರಂಟಿ ಯೋಜನೆಗಳಿಗೆ 57 ರಿಂದ 60 ಸಾವಿರ ಕೋಟಿ ರು.ನಷ್ಟು ಅನುದಾನ ವೆಚ್ಚವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇದೆ. ಈ ಹಂತದಲ್ಲಿ 7100ರಷ್ಟು ದೊಡ್ಡ ಸಂಖ್ಯೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡುವುದು ಅನುಮಾನ ಎನ್ನುತ್ತವೆ ಆರ್ಥಿಕ ಇಲಾಖೆ ಮೂಲಗಳು.

ಪದವಿ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಕಾರ್ಯಭಾರಕ್ಕೆ ಅನುಗುಣವಾಗಿ ಹೊಸದಾಗಿ 7000 ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಂಜೂರಾತಿ ಹಾಗೂ ನೇಮಕಾತಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಇದಕ್ಕೆ ಅನುಮತಿ ನೀಡುವ ವಿಶ್ವಾಸವಿದೆ.

- ಡಾ.ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವರು

- ಹೊಸ ಹುದ್ದೆ ಸೃಷ್ಟಿ ಜತೆಗೆ ನೇಮಕಾತಿಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ

- ಪದವಿ ಕಾಲೇಜುಗಳಲ್ಲಿ ಪ್ರಸ್ತುತ 1600 ರಷ್ಟು ಬೋಧಕ ಹುದ್ದೆಗಳು ಖಾಲಿ

- 1242 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿ. 400 ಹುದ್ದೆಗಳು ಬಾಕಿ

- ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಬಹುತೇಕ ಹುದ್ದೆಗಳು ಭರ್ತಿ

- ಆದರೂ 12 ಸಾವಿರದಷ್ಟು ಅತಿಥಿ ಶಿಕ್ಷಕರನ್ನು ಅವಲಂಬಿಸಿರುವ ಕಾಲೇಜುಗಳು

click me!