ಕಾನೂನು ಸಲಹೆ ಪಡೆದು ಸದಾಶಿವ ವರದಿ ಜಾರಿಗೆ ಯತ್ನ- ಕೆಎಚ್ ಮುನಿಯಪ್ಪ

By Kannadaprabha NewsFirst Published Jul 30, 2023, 5:15 AM IST
Highlights

  ಕಾನೂನು ಸಲಹೆ ಪಡೆದು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌ ಮುನಿಯಪ್ಪ ಹೇಳಿದರು.

ಹಿರಿಯೂರು (ಜು.30) :  ಕಾನೂನು ಸಲಹೆ ಪಡೆದು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌ ಮುನಿಯಪ್ಪ ಹೇಳಿದರು.

ನಗರದ ತುಳಸಿ ನಾರಾಯಣರಾವ್‌ ಕಲ್ಯಾಣ ಮಂಟಪದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವೀಗ ಕೊಟ್ಟಭರವಸೆಗಳನ್ನು ಈಡೇರಿಸುತ್ತಾ ನಿಮ್ಮ ನಂಬಿಕೆಗೆ ಅರ್ಹರಾಗುತ್ತಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ಬದಲಿಗೆ ಹಣ ಹಾಕಿದ್ದೇವೆ. 3 ಕೋಟಿ 40 ಲಕ್ಷ ವ್ಯಕ್ತಿಗಳಿಗೆ ಅಕ್ಕಿಯ ಹಣ ಸಂದಾಯ ಮಾಡಿದ್ದೇವೆ ಎಂದರು.

Blood letter: ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಬಸವರಾಜ ಪೂಜಾರಿ!

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸುಮಾರು 3 ಲಕ್ಷ ಕಾರ್ಡ್‌ಗಳು ಪೆಂಡಿಂಗ್‌ ಇವೆ. ಅವರಿಗೂ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಇಡೀ ದೇಶದಲ್ಲಿ ಇಷ್ಟುದೊಡ್ಡ ಯೋಜನೆಗಳ ಗ್ಯಾರಂಟಿಗಳನ್ನು ಒದಗಿಸಿದ್ದು ಕರ್ನಾಟಕ ಮಾತ್ರ. ಅದೂ ಕಾಂಗ್ರೆಸ್‌ ಸರ್ಕಾರದಿಂದ ಸಾಧ್ಯವಾಗಿದೆ. ನಾವು ಬಡವರ ಕೆಲಸ ಮಾಡಲು ಎಂದೂ ಹಿಂಜರಿಯುವುದಿಲ್ಲ. ಐದು ಗ್ಯಾರಂಟಿ ನಿಮ್ಮನ್ನು ತಲುಪಲಿವೆ. ಸಚಿವ ಸುಧಾಕರ್‌ ಅವರಿಂದ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆಗಳು ಪ್ರಗತಿ ಸಾಧಿಸಿವೆ. ಆತ ಜಾತಿಬಲದ ನಾಯಕನಲ್ಲ. ಸೇವಾ ಮನೋಭಾವದ ನಾಯಕ. ಒಗ್ಗಟ್ಟಿದ್ದರೆ ಮಾತ್ರ ಜನಾಂಗಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಆ ಸಮಾಜ ಮೊದಲು ಕೂಡಬೇಕು, ಒಂದಾಗಬೇಕು, ಒಗ್ಗಟ್ಟಾಗಬೇಕು. ಅಂಬೇಡ್ಕರ್‌ ಅವರು ನಮಗೆಲ್ಲ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ನಿಮಗೆಲ್ಲಾ ಮತ ನೀಡುವ ಶಕ್ತಿ ಕೊಟ್ಟು ನಮ್ಮನ್ನೆಲ್ಲಾ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ದುಡ್ದು ಕೊಡುವವರನ್ನು ಬಿಟ್ಟು ನಮ್ಮ ಕೆಲಸ ಮಾಡಿಕೊಡುವವರನ್ನು ಆರಿಸಿಕೊಳ್ಳಬೇಕು. ಆ ಕೆಲಸವನ್ನು ಈ ಬಾರಿ ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದರು. ಅಕ್ಕಿ ಕೊಡುವುದನ್ನು ವಿರೋಧಿಸಿದವರಿಗೆ ಹಸಿವಿನ ನೋವಿನ ಅರಿವಿರಲಾರದು. ಅವರೆಲ್ಲಾ ಹೊಟ್ಟೆತುಂಬಿದವರು. ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ ಸರ್ಕಾರ ಒಂದು ಹೊಸ ಶಕ್ತಿ ತುಂಬಿದೆ. ಜೀವನವೆಲ್ಲಾ ಸೇವಕರಂತೆಯೇ ಬಂದ ನಮ್ಮ ಸಮಾಜ ಮೊದಲು ರಾಜಕೀಯವಾಗಿ ಮೇಲೇರಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಮಾತನಾಡಿ, ಬರುವಂತಹ ದಿನಗಳಲ್ಲಿ ಸಾಮಾಜಿಕ ನ್ಯಾಯ ಇರುವಂತಹ ಯೋಜನೆಗಳನ್ನು ಎಲ್ಲರೂ ಸೇರಿ ಜಾರಿಗೆ ತರುತ್ತೇವೆ. ಮುಖ್ಯವಾಗಿ ಮಾದಿಗ ಜನಾಂಗ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಮಾತ್ರ ನಮ್ಮನ್ನು ಬಲಿಷ್ಠರನ್ನಾಗಿಸುತ್ತದೆ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ಇನ್ನೆರಡು ಯೋಜನೆ ಪ್ರಗತಿಯಲ್ಲಿವೆ. ನಮ್ಮ ಕ್ಷೇತ್ರದಲ್ಲಿ ಈಗಾಗಲೇ ಶೇ 63ರಷ್ಟುಗ್ಯಾರಂಟಿ ಯೋಜನೆಗೆ ಅರ್ಜಿಗಳು ಬಂದಿವೆ. ಕೊಟ್ಟಮಾತು ಉಳಿಸಿಕೊಂಡು ಜನೋಪಯೋಗಿ ಸರ್ಕಾರ ನೀಡುವುದೇ ನಮ್ಮ ಗುರಿಯಾಗಿದೆ ಎಂದರು.

ಆದಿ ಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯಸಭಾ ಸದಸ್ಯ ಎಲ…. ಹನುಮಂತಯ್ಯ, ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ಬಿ ಎನ್‌ ಚಂದ್ರಪ್ಪ, ಜೆ.ಜೆ ಹಟ್ಟಿತಿಪ್ಪೇಸ್ವಾಮಿ, ಯುವ ಮುಖಂಡ ನಿಕೇತ್‌ ರಾಜ… ಮೌರ್ಯ, ಉದ್ಯಮಿ ವೆಂಕಟೇಶ್‌ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತಾಜ… ಪೀರ್‌, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಲಿಂಗೇಗೌಡ, ಕಾಶಾಮಯ್ಯ, ವಕೀಲ ರಂಗಸ್ವಾಮಿ, ಮಹಲಿಂಗಪ್ಪ, ಧನಂಜಯ ಕುಮಾರ್‌, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಗೀತಾ ನಾಗಕುಮಾರ್‌, ಬಾಲೇನಹಳ್ಳಿ ರಾಜಣ್ಣ, ಡಾ.ಸುಜಾತಾ ಮುಂತಾದವರು ಹಾಜರಿದ್ದರು.

ಸದಾಶಿವ ವರದಿ ಜಾರಿಗೆ ವಿರೋಧಿಸಿ ಬೆಂಗಳೂರಲ್ಲಿ ಎಸ್ಸಿ ಸಂಕಲ್ಪ ಸಮಾವೇಶ

ಅಧಿಕಾರ ಎನ್ನುವುದು ಅಲಂಕಾರ ಅಲ್ಲ. ಅದು ಆಭರಣವೂ ಅಲ್ಲ. ಅದು ಜನರ ಸೇವೆಗೆ ಸಿಕ್ಕ ಒಂದು ಅವಕಾಶ. ಅಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಾಧ್ಯವಾದಷ್ಟುಜನಸೇವೆ ಮಾಡುವುದೇ ರಾಜಕಾರಣವಾಗಬೇಕು. ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರವನ್ನು ಜನ ಆರಿಸಿದ್ದಾರೆ.

------ ಎಲ…. ಹನುಮಂತಯ್ಯ, ರಾಜ್ಯಸಭಾ ಸದಸ್ಯ

click me!