KAS Recruitment: 2011ರ ಕೆಎಎಸ್‌ ನೇಮಕಾತಿ ರಕ್ಷಣೆಗೆ ಸಂಪುಟ ನಿರ್ಧಾರ: ಮಾಧುಸ್ವಾಮಿ

By Kannadaprabha NewsFirst Published Jan 28, 2022, 8:47 AM IST
Highlights

* ಯಾವ ಸ್ವರೂಪದಲ್ಲಿ ಇದನ್ನು ಸದನದಲ್ಲಿ ಮಂಡಿಸಬೇಕು ಎಂಬ ಬಗ್ಗೆ ಶೀಘ್ರ ನಿರ್ಧಾರ
* 362 ಗೆಜೆಟೆಡ್‌ ಪ್ರೊಬೆಷನರಿ ನೇಮಕ ವಿವಾದ ಅಂತ್ಯಗೊಳಿಸಲು ಸರ್ಕಾರ ಪಣ
* ಸನ್ನಡತೆ ಆಧಾರದಲ್ಲಿ 166 ಕೈದಿಗಳ ಬಿಡುಗಡೆ 
 

ಬೆಂಗಳೂರು(ಜ.28): ಕರ್ನಾಟಕ ಲೋಕಸೇವಾ ಆಯೋಗದ (KPSC) 2011ರ ಬ್ಯಾಚ್‌ನ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಯನ್ನು ರಕ್ಷಣೆ ಮಾಡುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. ಮುಂದಿನ ಅಧಿವೇಶನದಲ್ಲಿ ಯಾವ ಸ್ವರೂಪದಲ್ಲಿ ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ(Cabinet Meeting) ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy), 2011ರ ಬ್ಯಾಚ್‌ನ 362 ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ(Gazetted Probationary Officers) ರಕ್ಷಣೆಗೆ ಈ ಹಿಂದೆ ಸರ್ಕಾರ ಮಾತು ನೀಡಿತ್ತು. ಅದನ್ನು ಯಾವ ರೂಪದಲ್ಲಿ ವಿಧಾನಸಭೆಗೆ ತರಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

Jobs Recruitment ಕರ್ನಾಟಕದಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸಂಪುಟ ಅನುಮೋದನೆ

ಕೆಪಿಎಸ್‌ಸಿ ಪಟ್ಟಿಯನ್ನು ಅಸಿಂಧುಗೊಳಿಸುವ ಮುನ್ನ ವಿಧಾನಸಭೆ ಮುಂದೆ ತಂದು ಅಭಿಪ್ರಾಯ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಆ ರೀತಿಯ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಮುಂದಿನ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ವಾಮಿತ್ವಕ್ಕೆ 287 ಕೋಟಿ:

ಕರ್ನಾಟಕದಲ್ಲಿ(Karnataka) ಸ್ವಾಮಿತ್ವ ಯೋಜನೆಗೆ 287 ಕೋಟಿ ರು. ಅನುದಾನ(Grants) ನೀಡಲಾಗಿದೆ. ಗ್ರಾಮೀಣ ವಸತಿ ಹಕ್ಕು, ಕೃಷಿ ಭೂಮಿಯ ಹಕ್ಕುಗಳ ದಾಖಲೆಗಳನ್ನು ಹಾಗೂ ಪಟ್ಟಣ, ನಗರದ ಆಸ್ತಿಗಳ ದಾಖಲೆ ಸಿದ್ಧಪಡಿಸಲು ಸಮೀಕ್ಷೆ ನೆರವಾಗಲಿದೆ. ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋಣ್‌ ಮೂಲಕ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ 287 ಕೋಟಿ ರು. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗದೆ ಎಂದು ಮಾಹಿತಿ ನೀಡಿದರು.
ವಿದ್ಯಾವಿಕಾಸ ಕಾರ್ಯಕ್ರಮದ ಸಮವಸ್ತ್ರಕ್ಕೆ 73.63 ಕೋಟಿ ನೀಡಲು ನಿರ್ಧರಿಸಲಾಗಿದೆ. ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳ ಪರಿಷ್ಕೃತ ಅಂದಾಜು 92.81 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿವರಾಮ ಕಾರಂತ ಬಡಾವಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿ​ಕಾರಕ್ಕೆ (BDA) 400 ಎಕರೆ ಜಮೀನು ನಿಗದಿಪಡಿಸಲಾಗಿದೆ. ಈ ಪೈಕಿ 66.17 ಎಕರೆ ಹಸ್ತಾಂತರ ಮಾಡಲಾಗಿದೆ ಎಂದು ವಿವರಿಸಿದರು.

3 ನಿಗಮಗಳ ವಿಲೀನ:

ಸರ್ಕಾರದ ಸುಪರ್ದಿಯಲ್ಲಿನ ಮೂರು ನಿಗಮಗಳನ್ನು ವಿಲೀನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮವನ್ನಾಗಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ.

Government Employees ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಸ್

166 ಕೈದಿಗಳ ಬಿಡುಗಡೆ:

ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಕೇಂದ್ರ ಕಾರಾಗೃಹದಲ್ಲಿನ 166 ಕೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜೀವಿತಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕೈದಿಗಳ ನಡತೆಯನ್ನು ಗಮನಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಇತರೆ ತೀರ್ಮಾನಗಳು:

* ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಇತರ 32 ಗ್ರಾಮಗಳಿಗೆ ವಿಸ್ತರಿಸುವ 22 ಕೋಟಿ ರು. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
* ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆಆರಂಭಿಸಲು 75 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.
* ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಭೀಮಾ ನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ 165 ಕೋಟಿ ರು. ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ.
* ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರಕಾರಿ ಜಮೀನನ್ನು ರಾಜ್ಯ ಗುಪ್ತವಾರ್ತೆ ಘಟಕದ ತರಬೇತಿ ಅಕಾಡೆಮಿಗೆ ಮಂಜೂರು
* ವರ್ತೂರು ಎಲೆವೇಟೆಡ್‌ ಕಾರಿಡಾರ್‌ ಅನ್ನು 1.3 ಕಿ.ಮೀ. ರಿಂದ 1.99 ಕಿ.ಮೀಗೆ ವಿಸ್ತರಿಸಿ, 488 ಕೋಟಿ ರು. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
* ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಾಕಿ ಇರುವ 300 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ 392.08 ಕೋಟಿ ರು. ಅಂದಾಜು ಆಡಳಿತಾತ್ಮಕ ಅನುಮೋದನೆ
* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ ಆರ್ಯಭಟ ಐಟಿ ಪಾರ್ಕಿನಲ್ಲಿ ಬಾಕಿಯಿರುವ ಮೂರು ಎಕರೆ ಜಮೀನನ್ನು 3 ಐಟಿ/ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡಲು ಒಪ್ಪಿಗೆ.
* ಮಂಗಳೂರು ನಗರಾಭಿವೃದ್ಧಿ ಪ್ರಾಧಿ​ಕಾರ ವ್ಯಾಪ್ತಿಯಲ್ಲಿ ವಸತಿ ಬಡಾವಣೆಗೆ 30.50 ಕೋಟಿ ರು. ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ.
 

click me!