Teacher Recruitment: ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಸಭಾಪತಿ

By Suvarna News  |  First Published Dec 13, 2021, 6:20 PM IST

* ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಗಡುವು ನೀಡಿದ ಸಭಾಪತಿ
* ವಿಧಾನಪರಿಷತ್‍ನಲ್ಲಿ ಸರ್ಕಾರಕ್ಕೆ ಸೂಚಿಸಿದ ಸಭಾಪತಿ ಬಸವರಾಜ ಹೊರಟ್ಟಿ  
* ಗುರುವಾರದೊಳಗೆ ತೀರ್ಮಾನಿಸಬೇಕೆಂದು ಸೂಚನೆ


ಬೆಳಗಾವಿ, (ಡಿ.13):  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅನುದಾನಿತ ಶಿಕ್ಷಕರ ಹುದ್ದೆಗಳ(Teachers Recruitment) ಭರ್ತಿಗೆ ಕ್ರಮ ಕೈಗೊಳ್ಳುವ ಬಗ್ಗೆ ಗುರುವಾರದೊಳಗೆ ತೀರ್ಮಾನಿಸಬೇಕೆಂದು ವಿಧಾನಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಸರ್ಕಾರಕ್ಕೆ ಸೂಚಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮತ್ತಿತರರು ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (Dr CN Ashwath Narayan) ಉತ್ತರಿಸುವಾಗ ಮಧ್ಯಪ್ರವೇಶಿಸಿದ ಸಭಾಪತಿ ಗುರುವಾರದೊಳಗೆ ಆರ್ಥಿಕ, ಶಿಕ್ಷಣ ಇಲಾಖೆ ಸಚಿವರು, ಶಿಕ್ಷಣ(Education) ಕ್ಷೇತ್ರದ ಪ್ರತಿನಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತಿರ್ಮಾನಕ್ಕೆ ಬನ್ನಿ ಎಂದು ಗಡವು ನೀಡಿದರು.

Tap to resize

Latest Videos

Job Alert: ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ, 1500 ಶಿಕ್ಷಕರ ನೇಮಕಾತಿಗೆ ಸರ್ಕಾರ ಒಪ್ಪಿಗೆ

ಅಲ್ಲಿಯವರೆಗೆ ನೇಮಕಾತಿಗೆ (Recruitment) ಸಂಬಂಧಿಸಿದ ಪ್ರಶ್ನೋತ್ತರವನ್ನು ತಡೆ ಹಿಡಿದಿರುವುದಾಗಿ ಪ್ರಕಟಿಸಿದರು. ಇದಕ್ಕೂ ಮುನ್ನ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು, 2015ರವರೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಕೆಲವರು ಭರ್ತಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಸರಿಯಾದ ನಿಯಮ ಪಾಲನೆ ಮಾಡುತ್ತಿಲ್ಲ. ಹಾಗಾಗಿ ನೇಮಕಾತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾಗಿದ್ದು ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಆಡಳಿತ ಪಕ್ಷದ ಸದಸ್ಯ ಶಶೀಲ್.ಜಿ ನಮೋಶಿ ಮಾತನಾಡಿ, 2012ಕ್ಕಿಂತಲ್ಲೂ ಮೊದಲು ಖಾಲಿ ಇದ್ದ ಹುದ್ದೆಗಳು ಭರ್ತಿಗೆ ಅನುಮತಿ ನೀಡಲಾಗಿದೆ. ನಂತರ ಕೆಲ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಅನುಮತಿಯನ್ನು ತಡೆ ಹಿಡಿಯಲಾಗಿದೆ. ನೇಮಕಾತಿ ಅಸೂಚನೆಯ ಜÁಹಿರಾತನ್ನು ಯಾವ ಪತ್ರಿಕೆಯ ಯಾವ ಪುಟದಲ್ಲಿ ನೀಡಬೇಕು ಎಂದು ಕೇಳಿದರು.

ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಶಿಕ್ಷಣ ಇಲಾಖೆಯ ಸಮಸ್ಯೆಗಳು ಆರ್ಥಿಕ ಇಲಾಖೆಗೆ ತಿಳಿಯುವುದಿಲ್ಲ. ಸಚಿವರಾದವರು ಮುಖ್ಯಮಂತ್ರಿ ಬಳಿ ಹೋಗಿ ಗಟ್ಟಿ ಧ್ವನಿಯಲ್ಲಿ ಕೇಳಿ ಒತ್ತಡ ಹಾಕಿ ಅನುಮತಿ ಪಡೆಯಬೇಕು. ಹತ್ತು ವರ್ಷದಿಂದ ನೇಮಕಾತಿಗೆ ಅನುಮತಿ ನೀಡಿಲ್ಲ, ಬಹಳಷ್ಟು ಮಂದಿ ಚಿನ್ನದ ಪದಕ ಪಡೆದ ಪದವೀಧರರ ವಯೋಮಿತಿ ಮೀರುತ್ತಿದೆ. ಸರ್ಕಾರ ನೇಮಕಾತಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸದಸ್ಯ ಅರುಣ್ ಶಹಪೂರ್ ಮಾತನಾಡಿ, 2015ರ ಮೊದಲಿನ ಹುದ್ದೆಗಳಿಗೆ ಅನುಮತಿ ನೀಡಿದೆ. ಅನಂತರ ಅನುಮತಿ ನೀಡಿಲ್ಲ. ಹತ್ತು ವರ್ಷ ಶಿಕ್ಷಕರಿಲ್ಲದೆ ಶಾಲೆ ನಡೆಸುವುದು ಹೇಗೆ. ಕೆಲ ಹುದ್ದೆಗಳಿಗೆ ಅನುಮತಿ ನೀಡಿ, ಉಳಿದವಕ್ಕೆ ಅನುಮತಿ ನಿರಾಕರಿಸಿರುವುದರ ಹಿಂದಿನ ಮರ್ಮವೇನು? ಇದರ ಹಿಂದೆ ಹಣದ ವಹಿವಾಟು ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಸಚಿವ ಅಶ್ವಥನಾರಾಯಣ ಅವರು ಉತ್ತರ ನೀಡಿ, 2015ರವರೆಗೆ ಖಾಲಿ ಹುದ್ದೆ ಇದ್ದ 2081 ಹುದ್ದೆಗಳ ಪೈಕಿ 250 ಹುದ್ದೆ ಭರ್ತಿಗೆ ಅವಕಾಶ ನೀಡಲಾಗಿದೆ. 12 ಅರ್ಜಿಗಳು ಮಾತ್ರ ಬಂದಿವೆ. ಕೆಲವು ನಿಯಮಗಳ ಪಾಲನೆ ಕೊರತೆಯಿಂದಾಗಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಬಸವರಾಜ ಹೊರಟ್ಟಿ, ಇಲಾಖೆಯವರು ಅನುಮತಿ ನೀಡುವಾಗ ಸರಿಯಾದ ತಿಳುವಳಿಕೆ ನೀಡಬೇಕಿತ್ತು. ಇದು ಅಧಿಕಾರಿಗಳ ದೂರ್ತತನ ಎಂದು ಅಸಮಧಾನ ವ್ಯಕ್ತಪಡಿಸಿದರು. ಸಚಿವರ ಉತ್ತರಕ್ಕೂ ಮುನ್ನಾ ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುತ್ತೇವೆ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಆಗ ಉತ್ತರಿಸಿದ ಸಚಿವರು, 2081 ಹುದ್ದೆಯಲ್ಲಿ 250 ಹುದ್ದೆ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಉಳಿದ ಹುದ್ದೆಗಳ ಭರ್ತಿಗೆ ಸರ್ಕಾರ ಆರ್ಥಿಕ ಇಲಾಖೆಯ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

click me!