ಪೊಲೀಸ್‌ ಇಲಾಖೆಯಲ್ಲಿ 4,547 ಹುದ್ದೆ ಭರ್ತಿ: ಸಚಿವ ಪರಮೇಶ್ವರ್‌

By Kannadaprabha NewsFirst Published Nov 23, 2023, 7:31 AM IST
Highlights

ಈಗಾಗಲೇ ನೋಟಿಫಿಕೇಷನ್‌ ಹೊರಡಿಸಿರುವ 402 ಪಿಎಸ್‌ಐ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು. ತದನಂತರ 600 ಮಂದಿ ಪಿಎಸ್‌ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು. ಒಟ್ಟು 6 ತಿಂಗಳಲ್ಲಿ 1,547 ಪಿಎಸ್‌ಐಗಳ ನೇಮಕ ಮಾಡಿಕೊಳ್ಳಲಾಗುವುದು: ಡಾ. ಪರಮೇಶ್ವರ್‌ 

ಬೆಂಗಳೂರು(ನ.23):  ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳೂ ಸೇರಿದಂತೆ ಮುಂದಿನ ಆರು ತಿಂಗಳಲ್ಲಿ 4,547 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅದರ ಭಾಗವಾಗಿ ಸದ್ಯ ಹೈಕೋರ್ಟ್‌ ಸೂಚನೆ ಮೇರೆಗೆ 545 ಪಿಎಸ್‌ಐ ಹುದ್ದೆಗಳಿಗೆ ಡಿಸೆಂಬರ್‌ನಲ್ಲಿ ಮರುಪರೀಕ್ಷೆ ನಡೆಸುತ್ತಿರುವುದಾಗಿ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4,547 ಹುದ್ದೆಗಳಲ್ಲಿ 1547 ಮಂದಿ ಪಿಎಸ್‌ಐ ಹಾಗೂ 3 ಸಾವಿರ ಕಾನ್ಸ್‌ಟೇಬಲ್‌ಗಳು ಇರಲಿದ್ದಾರೆ. ಪಿಎಸ್‌ಐ ಹುದ್ದೆಗಳ ಪೈಕಿ ಸದ್ಯ ಹೈಕೋರ್ಟ್‌ ಸೂಚನೆಯಂತೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅದಾದ ನಂತರ ಈಗಾಗಲೆ ನೋಟಿಫಿಕೇಷನ್‌ ಹೊರಡಿಸಿರುವ 402 ಪಿಎಸ್‌ಐ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು. ತದನಂತರ 600 ಮಂದಿ ಪಿಎಸ್‌ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು. ಒಟ್ಟು 6 ತಿಂಗಳಲ್ಲಿ 1,547 ಪಿಎಸ್‌ಐಗಳ ನೇಮಕ ಮಾಡಿಕೊಳ್ಳಲಾಗುವುದು. ಅದರ ಜತೆಗೆ ಎಎಸ್‌ಐ ಹುದ್ದೆಯಲ್ಲಿರುವವರಿಗೆ ಎಸ್‌ಐ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದರು.

Latest Videos

PSI RECRUITMENT 2023: ಡಿ.23ಕ್ಕೆ ಪಿಎಸ್‌ಐ ಮರುಪರೀಕ್ಷೆ ನಡೆಸಲು ಕೆಇಎ ಆದೇಶ: ಬೆಂಗಳೂರಲ್ಲಿ ಮಾತ್ರ ಅವಕಾಶ

ರಾಜ್ಯದಲ್ಲಿ ಒಟ್ಟು 15 ಸಾವಿರ ಕಾನ್ಸ್‌ಟೇಬಲ್‌ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಏಕಕಾಲಕ್ಕೆ ಭರ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೊದಲಿಗೆ 3 ಸಾವಿರ ಕಾನ್ಸ್‌ಟೇಬಲ್‌ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಎಲ್ಲರನ್ನೂ ಒಮ್ಮೆಲೇ ಭರ್ತಿ ಮಾಡಿಕೊಂಡರೆ ಆರ್ಥಿಕ ಹೊರೆಯ ಜತೆಗೆ, ಅವರಿಗೆ ತರಬೇತಿ ನೀಡಲು ಸಮಸ್ಯೆಯಾಗಲಿದೆ. ರಾಜ್ಯದಲ್ಲಿನ 6 ಪೊಲೀಸ್‌ ತರಬೇತಿ ಶಾಲೆಗಳಲ್ಲಿ ಒಮ್ಮೆಗೆ ತಲಾ 200 ಮಂದಿಗೆ ತರಬೇತಿ ನೀಡಲು ಮಾತ್ರ ಸಾಧ್ಯ. ಹೀಗಾಗಿ ಎಲ್ಲರನ್ನೂ ಒಮ್ಮೆಲೇ ಭರ್ತಿ ಮಾಡಿಕೊಂಡರೆ ಅವರಿಗೆ ತರಬೇತಿ ನೀಡುವುದು ಕಷ್ಟವಾಗಲಿದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಎರಡು ವರ್ಷಗಳಿಗೊಮ್ಮೆ ವರ್ಗಾವಣೆ

ಪೊಲೀಸ್‌ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ, ಅದನ್ನು ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಮುಂದೆ ಒಂದೇ ಜಾಗದಲ್ಲಿ ಎರಡು ವರ್ಷಗಳು ಸೇವೆ ಸಲ್ಲಿಸಿದ ನಂತರ ವರ್ಗಾವಣೆ ಮಾಡಲಾಗುತ್ತದೆ. ಆ ಕುರಿತಂತೆ ಕಾನೂನನ್ನೂ ರೂಪಿಸಲಾಗುವುದು ಎಂದು ಡಾ. ಪರಮೇಶ್ವರ್‌ ಹೇಳಿದರು.

click me!