ಈಗಾಗಲೇ ತಮಿಳುನಾಡಿನಲ್ಲಿ ಏಕರೂಪದ ನೇಮಕಾತಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಸಾಧಕ ಮತ್ತು ಬಾಧಕ ಕುರಿತು ಮಾಹಿತಿ ಪಡೆದುಕೊಂಡು ತಮಿಳುನಾಡು ಮಾದರಿಯಲ್ಲಿ ಏಕರೂಪದ ನೇಮಕಾತಿ ಮಾಡಿಕೊಳ್ಳಲು ಗೃಹ ಇಲಾಖೆ ಚಿಂತನೆ ನಡೆಸುತ್ತಿದೆ. ಏಕರೂಪ ನೇಮಕಾತಿಯಿಂದಾಗಿ ಕಡಿಮೆ ಸಿಬ್ಬಂದಿ ಇರುವ ವಿಭಾಗಕ್ಕೆ ನಿಯೋಜನೆ ಮಾಡಲು ಅನುಕೂಲವಾಗಲಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ
ಬೆಳಗಾವಿ(ನ.21): ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿನ ಡಿಎಆರ್, ಸಿಎಆರ್, ಕೆಎಸ್‌ಆರ್‌ಪಿ ಹಾಗೂ ನಾಗರಿಕ ಪೊಲೀಸ್ ನೇಮಕಾತಿಗೆ ಏಕರೂಪದ ನೇಮಕಾತಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಲ್ಲಿನ ಡಿಎಆರ್, ಸಿಎಆರ್, ಕೆಎಸ್‌ಆರ್‌ಪಿ ಹಾಗೂ ನಾಗರೀಕ ಪೊಲೀಸ್ ಹುದ್ದೆಗಳಿಗೆ ಪ್ರತ್ಯೇಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಹುದ್ದೆಗಳಿಗೆ ಈಗಾಗಲೇ ತಮಿಳುನಾಡಿನಲ್ಲಿ ಏಕರೂಪದ ನೇಮಕಾತಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಸಾಧಕ ಮತ್ತು ಬಾಧಕ ಕುರಿತು ಮಾಹಿತಿ ಪಡೆದುಕೊಂಡು ತಮಿಳುನಾಡು ಮಾದರಿಯಲ್ಲಿ ಏಕರೂಪದ ನೇಮಕಾತಿ ಮಾಡಿಕೊಳ್ಳಲು ಗೃಹ ಇಲಾಖೆ ಚಿಂತನೆ ನಡೆಸುತ್ತಿದೆ. ಏಕರೂಪ ನೇಮಕಾತಿಯಿಂದಾಗಿ ಕಡಿಮೆ ಸಿಬ್ಬಂದಿ ಇರುವ ವಿಭಾಗಕ್ಕೆ ನಿಯೋಜನೆ ಮಾಡಲು ಅನುಕೂಲವಾಗಲಿದೆ ಎಂದರು.
undefined
ಪದವೀಧರರಿಗೆ ಗುಡ್ ನ್ಯೂಸ್: 2024ರಿಂದ ಕಾಂಗ್ರೆಸ್ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ-ಸಿಎಂ ಸಿದ್ದರಾಮಯ್ಯ
ಇನ್ನು ರಾಜ್ಯದಲ್ಲಿ ಜಿಲ್ಲಾ ಕೇಂದ್ರಕ್ಕೆ ಒಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ ಸೆಲ್) ಕಚೇರಿ ಇದ್ದು, ಅದನ್ನು ಠಾಣೆಯನ್ನಾಗಿ ಪರಿವರ್ತನೆ ಮಾಡಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಶೀಘ್ರವೇ ಕಚೇರಿಗಳು ಠಾಣೆಗಳಾಗಿ ಕಾರ್ಯಾರಂಭ ಮಾಡಲಿದ್ದು, ನೇರವಾಗಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬಹುದು ಮತ್ತು ಆಪಾದಿತ ವ್ಯಕ್ತಿಯನ್ನು ಬಂಧಿಸಬಹುದು ಎಂದು ತಿಳಿಸಿದರು.
ಡೀಪ್‌ಫೇಕ್ ಫೋಟೋ ಮಾಡುತ್ತಿರುವ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬಂದಿದೆ. ಇಂತಹ ಕೃತ್ಯವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ವಿಕೃತ ಮನಸ್ಥಿತಿಯವರು ಯಾರನ್ನೂ ಬಿಡುವುದಿಲ್ಲ. ಆದ್ದರಿಂದ ಡೀಪ್ ಫೋಟೊ ಮಾಡುವವರನ್ನು ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಸೈಬರ್ ಅಪರಾಧ ಕುರಿತು ಗಂಭೀರವಾಗಿ ತೆಗೆದುಕೊಂಡು, ನಿಯಂತ್ರಣಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಟ್‌ಕಾಯಿನ್ ಪ್ರಕರಣ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಪರಮೇಶ್ವರ ಅವರು, ಬಿಟ್‌ಕಾಯಿನ್ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಯಾರೇ ಭಾಗಿಯಾಗಿದ್ದರೂ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 1700ಕ್ಕೂ ಹೆಚ್ಚು ವಾಹನಗಳು 15 ವರ್ಷಕ್ಕಿಂತ ಹೆಚ್ಚು ಹಳೆಯದ್ದಾಗಿದ್ದರಿಂದ ತೆಗೆದು ಹಾಕಲಾಗಿದೆ. ಹೊಸ ವಾಹನ ಖರೀದಿಸಲು ಈಗಾಗಲೇ ₹ 100 ಕೋಟಿ ನೀಡಿ, ಪೊಲೀಸ್ ಮಹಾನಿರ್ದೇಶಕರಿಗೆ ಖರೀದಿಸುವ ಅಧಿಕಾರ ನೀಡಲಾಗಿದ್ದು, ಅವರು ವಾಹನ ಖರೀದಿ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.
ನಗರದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಸೇರಿದಂತೆ ನಿಯಮ ಬಾಹಿರ ವಸ್ತುಗಳು ಪತ್ತೆಯಾಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಬೆಳವಣಿಕೆ ಕುರಿತು ಗಮನಕ್ಕೆ ಬಂದಿದೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು, ಅದನ್ನು ಈಗಾಗಲೇ ಕೈಗೊಂಡಿದ್ದೇವೆ. ಇನ್ನು ಕಾರಾಗೃಹದ ಅಧೀಕ್ಷಕರ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್‌ನ ಕಾರ್ಯವಿಧಾನಗಳ ಪ್ರಕಾರವೇ ಪೊಲೀಸರ ವರ್ಗಾವಣೆ ನಡೆಯುತ್ತವೆಯೇ ಹೊರತು, ಸಚಿವರು ಅಥವಾ ಶಾಸಕರ ಪತ್ರಗಳನ್ನು ಆಧರಿಸಿ ಅಲ್ಲ. ಇದಕ್ಕಾಗಿಯೇ ಒಂದು ವ್ಯವಸ್ಥೆ ಜಾರಿಯಲ್ಲಿದೆ. ವರ್ಗಾವಣೆ ವಿಚಾರವಾಗಿ ಆರೋಪ ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಈ ವ್ಯವಸ್ಥೆಯನ್ನು ಮರೆತಿರಬೇಕು ಎಂದರು.
ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಹೇಗೆ?
ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.4ರಿಂದ 10 ದಿನಗಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ3500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಅಗತ್ಯ ಭದ್ರತೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗೆ ವಸತಿ, ಊಟ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇನ್ನೀತರ ಅಗತ್ಯ ಸೌಕರ್ಯ ಕಲ್ಪಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಸೂಕ್ತ ಭದ್ರತೆ ನೀಡಿ ಅಹಿತಕರ ಘಟನೆ ಜರುಗದಂತೆ ನಿಗಾವಹಿಸುತ್ತವೆ ಎಂದರು.