
ಬೆಂಗಳೂರು(ಜೂ.19): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ವೇಗ ಮತ್ತಷ್ಟುಹೆಚ್ಚಾಗಿದ್ದು ಗುರುವಾರ 12 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ಒಂದರಲ್ಲೇ 8 ಮಂದಿ ಮೃತಪಟ್ಟಿದ್ದು, ಈ ಮೂಲಕ ಬೆಂಗಳೂರು ಹಾಗೂ ರಾಜ್ಯ ಎರಡರಲ್ಲೂ ಈವರೆಗೆ ದಿನವೊಂದರಲ್ಲಿ ಅತ್ಯಧಿಕ ಸಂಖ್ಯೆಯ ಸಾವು ವರದಿಯಾದಂತಾಗಿದೆ.
ರಾಜ್ಯದಲ್ಲಿ ಈವರೆಗೆ ಒಂದೇ ದಿನ (ಜೂನ್ 13ರಂದು) 10 ಸಾವು ವರದಿಯಾಗಿದ್ದೇ ದಾಖಲೆಯಾಗಿತ್ತು. ಗುರುವಾರದ 12 ಸಾವಿನ ಮೂಲಕ ಆತ್ಮಹತ್ಯೆ ಸೇರಿ ಅನ್ಯ ಕಾರಣದಿಂದ ಮೃತಪಟ್ಟ4 ಮಂದಿ ಸೋಂಕಿತರನ್ನು ಹೊರತುಪಡಿಸಿ ಒಟ್ಟು ಸಾವು 114ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 844 ಸೋಂಕಿತರಲ್ಲಿ ಬರೋಬ್ಬರಿ 51 ಮಂದಿ ಮೃತಪಟ್ಟಿದ್ದು ಸಾವಿನ ದರ ಶೇ.6.04ಕ್ಕೆ ಏರಿಕೆಯಾಗಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಕಳೆದ 18 ದಿನಗಳಲ್ಲಿ 64 ಮಂದಿ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲೇ ಬರೋಬ್ಬರಿ 18 ಮಂದಿ ಮೃತಪಟ್ಟಿದ್ದಾರೆ.
ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ, ಬಯಸಿದ್ದು ಆಗಲ್ಲ!
ಗುರುವಾರ ಬೆಂಗಳೂರಿನಲ್ಲಿ 8, ಬೀದರ್, ವಿಜಯಪುರ, ಕಲಬುರಗಿ, ಕೊಪ್ಪಳದಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಈ ಪೈಕಿ ಜೂ.6 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದ 57 ವರ್ಷದ ಸೋಂಕಿತ ವ್ಯಕ್ತಿಯ ಸಾವನ್ನು 12 ದಿನಗಳ ಬಳಿಕ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.
ಬೆಂಗಳೂರಿನಲ್ಲಿ 8 ಸಾವು:
12 ಸಾವಿನ ಪ್ರಕರಣದಲ್ಲಿ ಬೆಂಗಳೂರಿನಲ್ಲಿ 57 ವರ್ಷದ ವ್ಯಕ್ತಿ ಜೂ. 3ರಂದು ಆಸ್ಪತ್ರೆಗೆ ದಾಖಲಾಗಿ ಜೂ.6 ರಂದು ಮೃತಪಟ್ಟಿದ್ದಾರೆ. ಉಳಿದಂತೆ ಬಳ್ಳಾರಿ ಪ್ರಯಾಣ ಹಿನ್ನೆಲೆ ಹೊಂದಿದ್ದ ಬೆಂಗಳೂರಿನ 58 ವರ್ಷದ ನಿವಾಸಿ ಅಧಿಕ ರಕ್ತದೊತ್ತಡದಿಂದ ಜೂ. 6 ರಂದು ಆಸ್ಪತ್ರೆಗೆ ದಾಖಲಾಗಿ ಜೂ.13 ರಂದು ಮೃತಪಟ್ಟಿದ್ದಾರೆ. ಜೂ.7 ರಂದು ಐಎಲ್‌ಐ (ವಿಷಮ ಶೀತ ಜ್ವರ) ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿದ್ದ 39 ವರ್ಷದ ವ್ಯಕ್ತಿ ಜೂ.14 ರಂದು ಸಾವನ್ನಪ್ಪಿದ್ದಾರೆ.
ಜೂ.8 ರಂದು ಆಸ್ಪತ್ರೆಗೆ ದಾಖಲಾದ 40 ವರ್ಷದ ಮಹಿಳೆ ಅದೇ ದಿನ, ಜೂ.11 ರಂದು ಜ್ವರ, ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 68 ವರ್ಷದ ವ್ಯಕ್ತಿ ಜೂ.13 ರಂದು ಮೃತಪಟ್ಟಿದ್ದಾರೆ. ಅಧಿಕ ರಕ್ತದೊತ್ತಡದಿಂದ ಜೂ.14 ರಂದು ಆಸ್ಪತ್ರೆಗೆ ದಾಖಲಾಗಿದ್ದ 74 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂ.15 ರಂದು ಮೃತಪಟ್ಟಿದ್ದಾರೆ.
ವಿಶ್ವದ ಅತಿದೊಡ್ಡ ಕೊರೋನಾ ಆಸ್ಪತ್ರೆ ದೆಹಲಿಯಲ್ಲಿ ನಿರ್ಮಾಣ!
ಜೂ.13 ರಂದು ಜ್ವರದ ಹಿನ್ನೆಲೆಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ಸೋಂಕಿತೆ ಜೂ.17 ರಂದು, 31 ವರ್ಷದ ವ್ಯಕ್ತಿ ಐಎಲ್‌ಐ ಹಿನ್ನೆಲೆಯೊಂದಿಗೆ ಜೂ.18 ರಂದು ಮೃತರಾಗಿದ್ದಾರೆ.
ನಾಲ್ಕು ಜಿಲ್ಲೆಯಲ್ಲಿ ತಲಾ 1 ಸಾವು:
ಬೀದರ್‌ನಲ್ಲಿ ಕಂಟೈನ್‌ಮೆಂಟ್ ವಲಯದಲ್ಲಿ ರಾರಯಂಡಮ್ ಪರೀಕ್ಷೆ ವೇಳೆ ಜೂ.8 ರಂದು ಸೋಂಕು ಖಚಿತಪಟ್ಟಿದ್ದ 55 ವರ್ಷದ ಮಹಿಳೆ ಜೂ.18 ರಂದು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ತೀವ್ರ ಉಸಿರಾಟ ತೊಂದರೆ ಹಿಂದಿದ್ದ 66 ವರ್ಷದ ಮಹಿಳೆ ಜೂ.15 ರಂದು ಆಸ್ಪತ್ರೆಗೆ ದಾಖಲಾಗಿ 17 ರಂದು ಮೃತರಾಗಿದ್ದಾರೆ. ಕಲಬುರಗಿಯಲ್ಲಿ ಜ್ವರ, ಉಸಿರಾಟ ಸಮಸ್ಯೆಯಿಂದ ಜೂ.13 ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ವ್ಯಕ್ತಿ ಜೂ.15 ರಂದು ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ತೀವ್ರ ಉಸಿರಾಟ ತೊಂದರೆ ಕೆಮ್ಮು, ಜ್ವರದ ಹಿನ್ನೆಲೆಯೊಂದಿಗೆ ಜೂ.13 ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ಮಹಿಳೆ ಜೂ.17 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾಗೆ ಮೊದಲ ಪತ್ರಕರ್ತ ಬಲಿ
ಬೆಂಗಳೂರು: ಕೊರೋನಾ ವಾರಿಯರ್ಸ್‌ಗಳೂ ಸೋಂಕಿಗೆ ಬಲಿಯಾಗುತ್ತಿರುವ ಸರಣಿ ಮುಂದುವರಿದಿದೆ. ಈವರೆಗೆ ವೈದ್ಯರು, ಪೊಲೀಸರು ಆಯ್ತು ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಪತ್ರಕರ್ತರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ರಾಜ್ಯಮಟ್ಟದ ಪತ್ರಿಕೆಯೊಂದರ ಹಿರಿಯ ಪತ್ರಕರ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರಿಗೆ ಕೊರೋನಾ ಸೋಂಕು ಇದ್ದದ್ದು ದೃಢಪಟ್ಟಿದೆ.
ರಾಜ್ಯದಲ್ಲಿ 8000 ಗಡಿಗೆ ಸೋಂಕು
ರಾಜ್ಯದಲ್ಲಿ ಗುರುವಾರ 210 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗುವ ಮೂಲಕ 8 ಸಾವಿರದ ಗಡಿಯತ್ತ ಸಾಗಿದೆ. ಗುರುವಾರ ಬಳ್ಳಾರಿ ಜಿಂದಾಲ್ ಕಂಪನಿಯ 48 ಮಂದಿಗೆ ಸೋಂಕು ತಗುಲಿದೆ.