ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಐಒಸಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಸೇರ್ಪಡೆಗೊಳಿಸಲು ಐಒಸಿ ಒಪ್ಪಿಗೆ ಸೂಚಿಸಿದೆ. ಡೋಪ್ ಟೆಸ್ಟ್‌ನಲ್ಲಿ ವಿಫಲರಾದ ಅರ್ಚನಾ ಜಾಧವ್‌ಗೆ 4 ವರ್ಷ ನಿಷೇಧ ಹೇರಲಾಗಿದೆ.
ಕೋಸ್ಟಾ ನವರಿನೊ(ಗ್ರೀಸ್): ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೇರಿದ ಮೊದಲ ಮಹಿಳೆ ಹಾಗೂ ಆಫ್ರಿಕಾದ ಪ್ರಥಮ ಪ್ರಜೆ ಎನಿಸಿಕೊಂಡಿದ್ದಾರೆ.
2 ಬಾರಿ ಒಲಿಂಪಿಕ್ ಈಜು ಸ್ಪರ್ಧೆಯ ಚಿನ್ನ ವಿಜೇತ, ಜಿಂಬಾಬ್ವೆಯ ಕ್ರೀಡಾ ಸಚಿವರಾಗಿರುವ 41 ವರ್ಷದ ಕೊವೆಂಟ್ರಿ ಗುರುವಾರ ನಡೆದ ಐಒಸಿ ಚುನಾವಣೆಯಲ್ಲಿ ಇತರ 6 ಮಂದಿಯನ್ನು ಹಿಂದಿಕ್ಕಿದರು. ಚಲಾವಣೆಯಾದ 97 ಮತಗಳ ಪೈಕಿ ಕೊವೆಂಟ್ರಿ 47 ಮತ ಗಳಿಸಿದರು. ಅವರು ಜೂನ್ 23ರಂದು ಅಧಿಕೃತವಾಗಿ ಅಧ್ಯಕ್ಷ ಹುದ್ದೆ ಸ್ವೀಕರಿಸಲಿದ್ದಾರೆ. ಅವರ ಅವಧಿ 8 ವರ್ಷಗಳ ಕಾಲ ಇರಲಿದೆ. ಭಾರತ ರೇಸ್‌ನಲ್ಲಿರುವ 2036ರ ಒಲಿಂಪಿಕ್ಸ್ ಆತಿಥ್ಯ ಬಗ್ಗೆ ಹೊಸ ಅಧ್ಯಕ್ಷರೇ ನಿರ್ಧಾರ ಕೈಗೊಳ್ಳಲಿದ್ದಾರೆ.
ಇನ್ನು, ಅಧ್ಯಕ್ಷ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಸೆಬಾಸ್ಟಿಯನ್ ಕೋ ಕೇವಲ 8 ಮತ ಪಡೆದರು. ಈ ವರೆಗೂ ಜರ್ಮನಿಯ ಥಾಮಸ್ ಬಾಕ್ ಅಧ್ಯಕ್ಷರಾಗಿದ್ದರು. ಅವರು ಗರಿಷ್ಠ 12 ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿದ್ದರು.
ಇದನ್ನೂ ಓದಿ: IPL 2025: ಈ ಬಾರಿ ಅಬ್ಬರಿಸಲು ರೆಡಿಯಾಗಿದ್ದಾರೆ ಟಾಪ್ 5 ಫಾರಿನ್ ಸ್ಟಾರ್ಸ್!
2028ರ ಒಲಿಂಪಿಕ್ಸ್‌ಗೆ ಬಾಕ್ಸಿಂಗ್ ಕ್ರೀಡೆ ಸೇರ್ಪಡೆ
ಕೋಸ್ಟಾ ನವರಿನೊ(ಗ್ರೀಸ್): 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯರು ಸರ್ವಾನುಮತದೊಂದಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಐಒಸಿ ಆಡಳಿತ ಮಂಡಳಿಯ 144ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಐಒಸಿ ಅಧ್ಯಕ್ಷ ಥಾಮಸ್ ಬಾಕ್, ಬಾಕ್ಸಿಂಗ್ ಸೇರ್ಪಡೆಗೆ ಇಚ್ಛಿಸುವ ಸದಸ್ಯರೆಲ್ಲ ಕೈ ಎತ್ತಿ ಎಂದು ಕೇಳಿದಾಗ, ಸಭೆಯಲ್ಲಿದ್ದ ಎಲ್ಲರೂ ಕೈ ಮೇಲೆತ್ತಿ ಸಮ್ಮತಿ ಸೂಚಿಸಿದರು. 2022ರ ಫೆಬ್ರವರಿಯಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿರುವ ಕ್ರೀಡೆಗಳ ಪಟ್ಟಿಯಿಂದ ಬಾಕ್ಸಿಂಗ್ ಅನ್ನು ಕೈಬಿಡಲಾಗಿತ್ತು. ಭಾರತ ಸೇರಿದಂತೆ ಹಲವು ದೇಶಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೇ’ ಅಂತ ಹೇಳ್ಬೇಡಿ: ಎಬಿ ಡಿವಿಲಿಯರ್ಸ್‌ಗೆ ಕೊಹ್ಲಿ ಖಡಕ್ ಎಚ್ಚರಿಕೆ!
ಡೋಪ್ ಟೆಸ್ಟ್‌ನಲ್ಲಿ ವಿಫಲ: ಅರ್ಚನಾಗೆ 4 ವರ್ಷ ನಿಷೇಧ
ನವದೆಹಲಿ: ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಭಾರತದ ಓಟಗಾರ್ತಿ ಅರ್ಚನಾ ಜಾಧವ್‌ಗೆ ವಿಶ್ವ ಅಥ್ಲೆಟಿಕ್ಸ್‌ನ ಸಮಗ್ರತಾ ಘಟಕ(ಎಐಯು) 4 ವರ್ಷ ನಿಷೇಧ ಹೇರಿದೆ. ಕಳೆದ ಡಿಸೆಂಬರ್‌ನಲ್ಲಿ ಪುಣೆ ಹಾಫ್ ಮ್ಯಾರಥಾನ್‌ನಲ್ಲಿ ಅರ್ಚನಾ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಒಕ್ಸಾಂಡ್ರೊಲೀನ್ ಎಂಬ ನಿಷೇಧಿತ ಪದಾರ್ಥ ಪತ್ತೆಯಾಗಿತ್ತು. ಹೀಗಾಗಿ ಜ.7ರಂದು ಅರ್ಚನಾರನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸಲಾಗಿತ್ತು.
ಅರ್ಚನಾಗೆ ಡೋಪಿಂಗ್ ನಿಯಮವನ್ನು ಉಲ್ಲಂಘಿಸಿದ ಬಗ್ಗೆ ಒಪ್ಪಿಕೊಳ್ಳಲು ಮಾ.3ರವರೆಗೆ ಸಮಯವಕಾಶ ನೀಡಲಾಗಿತ್ತು. ಆದರೆ ಅರ್ಚನಾ ನಿಯಮ ಉಲ್ಲಂಘನೆ ಉದ್ದೇಶಪೂರ್ವಕವಲ್ಲ ಎಂದು ಸಾಬೀತುಪಡಿಸಿಲ್ಲ. ಅಲ್ಲದೇ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಎಐಯು ಈ ನಿರ್ಧಾರ ಕೈಗೊಂಡಿದೆ. ಅದರ ಪ್ರಕಾರ ಜ.7ರಿಂದ ಪ್ರಾರಂಭವಾಗುವಂತೆ 4 ವರ್ಷಗಳ ಕಾಲ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ. ಜೊತೆಗೆ 2024ರ ಡಿಸೆಂಬರ್ 15ರ ನಂತರದ ಸ್ಪರ್ಧೆಯ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.