
ನವದೆಹಲಿ(ನ.30): ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಗ್ವಾಲಿಯರ್'ನ ಐಟಿಎಂ ವಿಶ್ವ ವಿದ್ಯಾಲಯ ಯುವಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಭಾರತೀಯ ಕ್ರಿಕೆಟ್ ಹಾಗೂ ಸಮಾಜ ಸೇವೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡುತ್ತಿರುವುದಾಗಿ ಐಟಿಎಂ ವಿವಿ ತಿಳಿಸಿದೆ.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಯುವರಾಜ್ ‘ಈ ಗೌರವ ನನಗೆ ಸಿಗುತ್ತಿರುವುದು ಹೆಮ್ಮೆ ಎನಿಸುತ್ತಿದೆ. ನನ್ನ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ, ಎಂದು ಹೇಳಿದ್ದಾರೆ.
ಸಮಕಾಲೀನ ಡಾಕ್ಟರೇಟ್ ಪಡೆದವರು: ಟೀಂ ಇಂಡಿಯಾ ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಕ್ರಮವಾಗಿ ಅಸ್ಸಾಂ ಹಾಗೂ ಮೌಂಟ್'ಫೋರ್ಟ್ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದರು. ಆದರೆ ಇತ್ತೀಚೆಗಷ್ಟೇ ಬೆಂಗಳೂರು ವಿವಿ ರಾಹುಲ್ ದ್ರಾವಿಡ್'ಗೆ ಡಾಕ್ಟರೇಟ್ ಪ್ರಶಸ್ತಿ ನೀಡಲು ಮುಂದಾದಾಗ 'ವಾಲ್' ಖ್ಯಾತಿಯ ದ್ರಾವಿಡ್ ನಯವಾಗಿ ತಿರಸ್ಕರಿಸಿದ್ದರು.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಟೀಂ ಇಂಡಿಯಾಗೆ 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದುಕೊಟ್ಟ ಯುವಿ, YouWeCan ಫೌಂಡೇಶನ್ ಅಡಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದರುವ ಎಡಗೈ ಆಲ್ರೌಂಡರ್ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇದಕ್ಕಾಗಿ ಫಿಟ್'ನೆಸ್'ನತ್ತ ಗಮನ ಹರಿಸಿರುವ ಯುವಿ, ಯೋ-ಯೋ ಟೆಸ್ಟ್ ಪಾಸ್ ಮಾಡಲು ಬೆಂಗಳೂರಿನ ಎನ್'ಸಿಎದಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.