ಏನ್ ಐಡಿಯಾ ಗುರು..! ದಿಲ್ಲಿಲಿ ಹೊಲಗಳೀಗ ಕ್ರಿಕೆಟ್ ಅಂಗಳ..!

By Suvarna Web DeskFirst Published Nov 30, 2017, 7:53 PM IST
Highlights

ಗುರ್‌'ಗಾಂವ್ ಸುತ್ತ ಮುತ್ತಲಿನ ಹೊಲಗಳೀಗ ಕ್ರಿಕೆಟ್ ಮೈದಾನವಾಗಿ ಬದಲಾಗಿವೆ. ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಮೈದಾನವಿಲ್ಲ ಎನ್ನುವುದನ್ನು ತಿಳಿದುಕೊಂಡ ಹಲವು ರೈತರು, ತಮ್ಮ ಜಮೀನುಗಳನ್ನು ಸುಸಜ್ಜಿತ ಕ್ರಿಕೆಟ್ ಮೈದಾನಗಳಾಗಿ ಬದಲಿಸಿದ್ದಾರೆ.

ನವದೆಹಲಿ(ನ.30): ರಾಷ್ಟ್ರ ರಾಜಧಾನಿಗೆ ಅಂಟಿಕೊಂಡಿರುವ ಹರ್ಯಾಣದ ಗುರ್‌'ಗಾಂವ್‌'ನಲ್ಲಿ ಐಟಿ ಉದ್ಯಮದ್ದೇ ಕಾರುಬಾರು. ಕೆಲ ವರ್ಷಗಳ ಹಿಂದೆ ಹಳ್ಳಿಯಾಗಿದ್ದ ಗುರ್'ಗಾಂವ್ ಇಂದು ಆಕಾಶದೆತ್ತರದ ಕಟ್ಟಡಗಳಿಂದ ತುಂಬಿ ಹೋಗಿದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಗುರ್‌'ಗಾಂವ್ ಇಲ್ಲಿನ ರೈತರ ಬಾಳನ್ನೂ ಹಸನಾಗಿಸಿದೆ. ಆದರೆ ರೈತರು ಲಕ್ಷಾಂತರ ರೂಪಾಯಿ ಹಣ ನೋಡುತ್ತಿರುವುದು ಕೃಷಿಯಿಂದಲ್ಲ, ಬದಲಾಗಿ ಕ್ರಿಕೆಟ್‌'ನಿಂದ.

ಹೌದು, ಗುರ್‌'ಗಾಂವ್ ಸುತ್ತ ಮುತ್ತಲಿನ ಹೊಲಗಳೀಗ ಕ್ರಿಕೆಟ್ ಮೈದಾನವಾಗಿ ಬದಲಾಗಿವೆ. ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಮೈದಾನವಿಲ್ಲ ಎನ್ನುವುದನ್ನು ತಿಳಿದುಕೊಂಡ ಹಲವು ರೈತರು, ತಮ್ಮ ಜಮೀನುಗಳನ್ನು ಸುಸಜ್ಜಿತ ಕ್ರಿಕೆಟ್ ಮೈದಾನಗಳಾಗಿ ಬದಲಿಸಿದ್ದಾರೆ.

ದಿನಕ್ಕೆ 3 ಪಂದ್ಯ, ₹15 ಸಾವಿರ ಸಂಪಾದನೆ: ಒಂದರಿಂದ 2 ಲಕ್ಷ ರು. ಖರ್ಚು ಮಾಡಿ ಪಿಚ್ ಹಾಗೂ ಕ್ರಿಕೆಟ್ ಆಡಲು ಯೋಗ್ಯವಾದ ಔಟ್‌'ಫೀಲ್ಡ್ ತಯಾರಿಸಿರುವ ರೈತರು, ವಾರಾಂತ್ಯದಲ್ಲಿ ದಿನಕ್ಕೆ ₹15ರಿಂದ ₹20 ಸಾವಿರದವರೆಗೂ ಸಂಪಾದಿಸುತ್ತಿದ್ದಾರೆ. ಒಂದು ದಿನಕ್ಕೆ ಕನಿಷ್ಠ 3 ಟಿ20 ಪಂದ್ಯಗಳನ್ನು ನಡೆಸಬಹುದಾಗಿದ್ದು, ಪ್ರತಿ ಪಂದ್ಯಕ್ಕೆ ₹3,500-5,000 ನಿಗದಿ ಪಡಿಸಲಾಗಿದೆ. ಈ ಮೈದಾನಗಳಿಗೆ ಭಾರೀ ಬೇಡಿಕೆಯಿದ್ದು, ಹಲವು ದಿನಗಳ ಮೊದಲೇ ಮೈದಾನಗಳನ್ನು ಕಾಯ್ದಿರಿಸಬೇಕಿದೆ. ಕೃಷಿಗೆ ಹೋಲಿಸಿದರೆ ಇದರಿಂದ ಉತ್ತಮ ಲಾಭ ದೊರೆಯುತ್ತಿದೆ. ನೀರಿನ ಕೊರತೆ, ಕಾರ್ಮಿಕರ ಸಮಸ್ಯೆ ಇದೆಲ್ಲವನ್ನು ಲೆಕ್ಕಹಾಕಿದರೆ, ಕ್ರಿಕೆಟ್ ಮೈದಾನವನ್ನು ಬಾಡಿಗೆ ನೀಡುವುದರಿಂದಲೇ ಹೆಚ್ಚು ಲಾಭ ಎಂದು ತಮ್ಮ ಹೊಲವನ್ನು ಕ್ರಿಕೆಟ್ ಮೈದಾನವಾಗಿಸಿರುವ ರೈತರೊಬ್ಬರು ಹೇಳುತ್ತಾರೆ.

ಕಾಲೇಜು ಯುವಕರಿಗೂ ಉದ್ಯೋಗ

ಇಲ್ಲಿನ ಸುತ್ತ ಮುತ್ತಲಿನ ಹಳ್ಳಿಗಳ ಯುವಕರು ‘ಯು-ಟ್ಯೂಬ್’ನಲ್ಲಿ ವಿಡಿಯೋಗಳನ್ನು ನೋಡಿ ಅಂಪೈರಿಂಗ್ ಬಗ್ಗೆ ಕಲಿತುಕೊಂಡಿದ್ದಾರೆ. ವಾರಾಂತ್ಯದಲ್ಲಿ ನಡೆಯುವ ಪಂದ್ಯಗಳಿಗೆ ಅವರೇ ಅಂಪೈರ್‌'ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಒಂದು ದಿನಕ್ಕೆ ಕನಿಷ್ಠ ₹500-800 ಸಂಪಾದನೆಯಾಗಲಿದೆ. ಹಲವು ಮಾಜಿ ಕ್ರಿಕೆಟಿಗರು ಕ್ರಿಕೆಟ್ ಅಕಾಡೆಮಿಗಳನ್ನು ನಡೆಸಲು ಈ ಮೈದಾನದ ಮಾಲೀಕರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

click me!