ಭಾರತೀಯ ಕುಸ್ತಿ ಫೆಡರೇಶನ್ ಚುನಾವಣೆ ದಿನಾಂಕ ನಿಗದಿ
ಚುನಾವಣಾ ಪ್ರಕ್ರಿಯೆ ಆರಂಭಿಸಿದ ಐಒಎ
ಈ ಮೊದಲು ಜೂ.30ರೊಳಗೆ ನಡೆಸುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು
ನವದೆಹಲಿ(ಜೂ.13): ದೇಶದ ಅಗ್ರ ಕುಸ್ತಿಪಟುಗಳ ಪ್ರತಿಭಟನೆ ನಡುವೆ ಹಲವು ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಚುನಾವಣೆಯನ್ನು ಕೊನೆಗೂ ಜು.4ರಂದು ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ನಿರ್ಧರಿಸಿದೆ. ಇದಕ್ಕೆ ಈಗಾಗಲೇ ಸಿದ್ಧತೆ ಆರಂಭಗೊಂಡಿದ್ದು, ಜಮ್ಮು-ಕಾಶ್ಮೀರ ಹೈಕೋರ್ಚ್ನ ನಿವೃತ್ತ ಮುಖ್ಯ ನ್ಯಾಯಾಧೀಶ ಮಹೇಶ್ ಮಿತ್ತಲ್ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಕುಸ್ತಿಪಟುಗಳಿಂದ ಗಂಭೀರ ಆರೋಪಗಳಿಗೆ ತುತ್ತಾಗಿರುವ ಬ್ರಿಜ್ಭೂಷಣ್ ಸಿಂಗ್ ಅಧ್ಯಕ್ಷರಾಗಿದ್ದ ಹಾಲಿ ಸಮಿತಿಯನ್ನು ಈಗಾಗಲೇ ನಿಷ್ಕಿ್ರಯಗೊಳಿಸಲಾಗಿತ್ತು. ಈ ನಡುವೆ ಕೆಲ ದಿನಗಳ ಹಿಂದೆ ಚುನಾವಣೆಯನ್ನು ಜೂ.30ರೊಳಗೆ ನಡೆಸುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು. ಸದ್ಯ ಜೂ.4ಕ್ಕೆ ಚುನಾವಣೆ ನಿಗದಿಯಾಗಿದ್ದು, ಡಬ್ಲ್ಯುಎಫ್ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದರ ಪ್ರಕ್ರಿಯೆಗಳು ನಡೆಯಲಿವೆ. ಆದರೆ ವರದಿಗಳ ಪ್ರಕಾರ, ಚುನಾವಣಾಧಿಕಾರಿ ಮಹೇಶ್ ಮಿತ್ತಲ್ ಚುನಾವಣಾ ದಿನಾಂಕವನ್ನು ಅಂತಿಮಗೊಳಿಸಲಿದ್ದು, ಜು.4ರಂದೇ ಅಥವಾ ಕೆಲ ದಿನ ತಡವಾಗಿ ಚುನಾವಣೆ ನಡೆಸಬಹುದು.
undefined
ಸರ್ಕಾರ ಬ್ರಿಜ್‌ರನ್ನು ರಕ್ಷಿಸುತ್ತಿದೆ: ವಿನೇಶ್
2 ಎಫ್ಐಆರ್ ದಾಖಲಾದರೂ ಬ್ರಿಜ್ಭೂಷಣ್ ಇನ್ನೂ ಬಂಧನಕ್ಕೊಳಗಾಗದ್ದಕ್ಕೆ ಕಿಡಿಕಾರಿರುವ ಕುಸ್ತಿಪಟು ವಿನೇಶ್ ಫೋಗಾಟ್, ಸರ್ಕಾರ ಬ್ರಿಜ್‌ರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ‘ಸರ್ಕಾರ ನಮ್ಮ ಹಲವು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ ಬ್ರಿಜ್‌ರನ್ನು ಬಂಧಿಸುವ ಬಗ್ಗೆ ಹೇಳಿಲ್ಲ. ಅವರನ್ನು ಸರ್ಕಾರವೇ ರಕ್ಷಿಸುತ್ತಿದೆ. ಯಾಕೆ ಬಂಧಿಸುತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರನ್ನೇ ಕೇಳಬೇಕು. ಆದರೆ ನಮ್ಮ ಹೋರಾಟ ನಿಲ್ಲಲ್ಲ. ಬ್ರಿಜ್‌ರನ್ನು ಬಂಧಿಸುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ. ನಮ್ಮನ್ನು ಬೆಂಬಲಿಸಲು ದೇಶದೆಲ್ಲೆಡೆಯಿಂದ ಜನ ಮುಂದೆ ಬರುತ್ತಿದ್ದಾರೆ. ಅವರ ಧ್ವನಿಯನ್ನು ಸರ್ಕಾರ ಕಡೆಗಣಿಸಬಾರದು’ ಎಂದಿದ್ದಾರೆ.
ಪ್ಯಾರಾ ಬ್ಯಾಡ್ಮಿಂಟನ್: ರಾಜ್ಯದ ಆನಂದ್ ಕೋಚ್
ಬೆಂಗಳೂರು: ಜೂ.14ರಿಂದ 18ರ ವರೆಗೂ ಕೆನಡಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕದ ಆನಂದ್ ಕುಮಾರ್, ಭಾರತ ತಂಡದ ಕೋಚ್ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ಟೂರ್ನಿಯಲ್ಲಿ ಭಾರತದ 12 ಪ್ಯಾರಾ ಶಟ್ಲರ್‌ಗಳು ಸ್ಪರ್ಧಿಸಲಿದ್ದಾರೆ.
23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ದಾಖಲೆ ಬರೆದ ನೋವಾಕ್ ಜೋಕೋವಿಚ್!
ಸ್ಕ್ವ್ಯಾಶ್ ವಿಶ್ವಕಪ್: ಇಂದು ಭಾರತ-ಹಾಂಕಾಂಗ್ ಫೈಟ್
ಚೆನ್ನೈ: 4ನೇ ಆವೃತ್ತಿಯ ಸ್ಕ್ವ್ಯಾಶ್ ವಿಶ್ವಕಪ್ ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಆತಿಥೇಯ ಭಾರತವನ್ನು ಅನುಭವಿಗಳಾದ ಸೌರವ್ ಘೋಷಲ್ ಹಾಗೂ ಜೋಶ್ನಾ ಚಿನ್ನಪ್ಪ ಮುನ್ನಡೆಸಲಿದ್ದಾರೆ. ಅಭಯ್ ಸಿಂಗ್ ಹಾಗೂ ತಾನ್ವಿ ಖನ್ನಾ ಕೂಡಾ 4 ಮಂದಿಯ ಭಾರತ ತಂಡದಲ್ಲಿದ್ದಾರೆ. ಮಿಶ್ರ ತಂಡ ವಿಭಾಗದ ಟೂರ್ನಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಮಂಗಳವಾರ ಹಾಂಕಾಂಗ್ ವಿರುದ್ಧ ಅಭಿಯಾನ ಆರಂಭಿಸಲಿದೆ. ಬಳಿಕ ಚೀನಾ, ದ.ಆಫ್ರಿಕಾ ಹಾಗೂ ಜಪಾನ್ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮೀಸ್ಗೇರಲಿವೆ. ಜೂ.17ಕ್ಕೆ ಫೈನಲ್ ನಡೆಯಲಿದೆ.
ಏಷ್ಯನ್ ಮಹಿಳಾ ಚೆಸ್: ಭಾರತದ ದಿವ್ಯಾಗೆ ಪ್ರಶಸ್ತಿ
ಆಲ್ಮಟಿ(ಕಜಕಸ್ತಾನ): ಭಾರತದ ತಾರಾ ಚೆಸ್ ಪಟು ದಿವ್ಯಾ ದೇಶ್ಮುಖ್ ಮಹಿಳೆಯರ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ಇಲ್ಲಿ ನಡೆದ ಕೂಟದ 9ನೇ ಹಾಗೂ ಕೊನೆ ಸುತ್ತಿನಲ್ಲಿ 17 ವರ್ಷದ ದಿವ್ಯಾ ಡ್ರಾ ಸಾಧಿಸುವುದರೊಂದಿಗೆ ಒಟ್ಟು 7.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಇದೇ ವೇಳೆ ಭಾರತದ ಮೇರಿ ಆ್ಯನ್ ಗೊಮೆಸ್ 6.5 ಅಂಕ ಸಂಪಾದಿಸಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು.