ಬ್ರಿಜ್‌ಭೂಷಣ್ ಸಿಂಗ್ ಎದುರು ಚುರುಕುಗೊಂಡ ತನಿಖೆ
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ವಿರುದ್ದ 2 ಎಫ್ಐಆರ್ ದಾಖಲಾಗಿದೆ
ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಭಾರೀ ಒತ್ತಡವಿದೆ ಎಂದ ಸಾಕ್ಷಿ ಮಲಿಕ್
ನವದೆಹಲಿ(ಜೂ.11): ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಪೊಲೀಸರ ತನಿಖೆ ಬಗ್ಗೆ ದೇಶದ ಅಗ್ರ ಕುಸ್ತಿಪಟುಗಳು ಮತ್ತೊಮ್ಮೆ ಅಪಸ್ವರ ಎತ್ತಿದ್ದಾರೆ. ಈ ಬಾರಿ ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಬ್ರಿಜ್‌ಭೂಷಣ್ ತಮ್ಮ ಮನೆಯಲ್ಲೇ ಇರುವಾಗ ಅವರ ಮನೆ ಆವರಣದಲ್ಲೇ ಇರುವ ಕಚೇರಿಗೆ ದೂರುದಾರೆಯನ್ನು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದು.
ಬ್ರಿಜ್ ವಿರುದ್ಧ ದೆಹಲಿ ಪೊಲೀಸರಿಗೆ ಅಪ್ರಾಪ್ತೆ ಸೇರಿದಂತೆ 7 ಮಂದಿ ದೂರು ದಾಖಲಿಸಿದ್ದು, 2 ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಶುಕ್ರವಾರ ದೂರುದಾರೆ ಕುಸ್ತಿಪಟುವೊಬ್ಬರನ್ನು ಬ್ರಿಜ್‌ರ ಅಧಿಕೃತ ಕಚೇರಿಗೆ ಕರೆತಂದು ಸುಮಾರು ಒಂದೂವರೆ ಗಂಟೆಗಳ ಕಾಲ ಘಟನೆ ಬಗ್ಗೆ ವಿವರ ಕೇಳಿದ್ದರು. ಆದರೆ ಈ ಬಗ್ಗೆ ಕಿಡಿಕಾರಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ಬ್ರಿಜ್ ಮನೆಯಲ್ಲಿದ್ದಾಗಲೇ ದೂರುದಾರೆಯನ್ನು ಸ್ಥಳ ಪರಿಶೀಲನೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ತೆರಳುವ ಮುನ್ನ ಕುಸ್ತಿಪಟು, ಬ್ರಿಜ್ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿಸಿದಾಗ ಪೊಲೀಸರು ಇಲ್ಲ ಎಂದು ಸುಳ್ಳು ಹೇಳಿದ್ದಾರೆ. ಬಳಿಕ ಬ್ರಿಜ್ ಅಲ್ಲೇ ಇರುವುದು ತಿಳಿದು ದೂರುದಾರೆ ಹೆದರಿದ್ದಾಳೆ’ ಎಂದಿದ್ದು, ಇಡೀ ವ್ಯವಸ್ಥೆಯೇ ಬ್ರಿಜ್ರನ್ನು ರಕ್ಷಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
undefined
ರಾಜಿಯಾಗುವಂತೆ ಒತ್ತಡ: ಸಾಕ್ಷಿ
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳುವಂತೆ ಭಾರೀ ಒತ್ತಡ ಇರುವುದಾಗಿ ಕುಸ್ತಿಪಟು ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ. ‘ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಭಾರೀ ಒತ್ತಡವಿದೆ. ದೂರು ಹಿಂಪಡೆಯುವಂತೆ ಅಪ್ರಾಪ್ತೆಯ ತಂದೆ ಮೇಲೆಯೂ ಇನ್ನಿಲ್ಲದಂತೆ ಒತ್ತಡ ಹೇರಲಾಗಿದೆ. ಇದರಿಂದ ಅವರು ಖಿನ್ನತೆಗೆ ಒಳಗಾಗಿದ್ದಾರೆ. ಬ್ರಿಜ್‌ಭೂಷಣ್‌ರನ್ನು ಬಂಧಿಸಿದ್ದರೆ ಅಪ್ರಾಪ್ತೆಯ ತಂದೆ ಹೇಳಿಕೆ ಬದಲಿಸುತ್ತಿರಲಿಲ್ಲ. ಬ್ರಿಜ್ ಬಂಧಿಸದ ಹೊರತು ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಸಾಕ್ಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Wrestlers Protest: ರೆಸ್ಲರ್‌ಗಳಿಂದ ಏಷ್ಯನ್ ಗೇಮ್ಸ್ ಬಾಯ್ಕಾಟ್ ಬೆದರಿಕೆ!
ಬಂಧಿಸದಿದ್ದರೆ ಮತ್ತೆ ಸತ್ಯಾಗ್ರಹ: ಪೂನಿಯಾ
ಇನ್ನು ಬ್ರಿಜ್ರನ್ನು ಶೀಘ್ರ ಬಂಧಿಸದಿದ್ದರೆ ಮತ್ತೆ ಸತ್ಯಾಗ್ರಹ ಆರಂಭಿಸುವುದಾಗಿ ಭಜರಂಗ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಜೂ.15ರೊಳಗೆ ಬ್ರಿಜ್ರನ್ನು ಬಂಧಿಸಬೇಕು. ಇಲ್ಲದಿದ್ದರೆ ಜೂ.17ರಂದು ಜಂತರ್‌ಮಂತರ್ ಅಥವಾ ರಾಮ್ಲೀಲಾ ಮೈದಾನದಲ್ಲಿ ಮತ್ತೆ ಹೋರಾಟ ಶುರು ಮಾಡುತ್ತೇವೆ. ಶೀಘ್ರ ಬಂಧಿಸದಿದ್ದರೆ ಅಪ್ರಾಪ್ತೆಯಂತೆಯೇ ಇತರರೂ ತಮ್ಮ ಹೇಳಿಕೆಗಳನ್ನು ಬದಲಿಸುವಂತೆ ಬ್ರಿಜ್ ತಮ್ಮ ಪ್ರಭಾವ ಬಳಸಿ ಒತ್ತಡ ಹೇರಬಹುದು. ಈಗಾಗಲೇ ಅಪ್ರಾಪ್ತೆಯ ತಂದೆ ಕೂಡಾ ತಮಗೆ ಒತ್ತಡ ಇರುವುದನ್ನು ಒಪ್ಪಿದ್ದಾರೆ. ಅವರ ವಿರುದ್ಧ ಕಠಿಣ ಜಾರ್ಜ್ಶೀಟ್ ಸಲ್ಲಿಕೆಯಾದರೆ ಮಾತ್ರ ಬಂಧಿಸಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.
ಸಮಸ್ಯೆ ಬಗೆಹರಿದರಷ್ಟೇ ಏಷ್ಯಾಡ್ ಸ್ಪರ್ಧೆ: ಸಾಕ್ಷಿ
ಕುಸ್ತಿಪಟುಗಳು ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬು ಸುದ್ದಿ ಪ್ರಸಾರಗೊಂಡ ನಡುವೆಯೇ, ಎಲ್ಲಾ ಸಮಸ್ಯೆಗಳು ಬಗೆಹರಿದರಷ್ಟೇ ಕೂಟದಲ್ಲಿ ಪಾಲ್ಗೊಳ್ಳುವುದಾಗಿ ಸಾಕ್ಷಿ ಮಲಿಕ್ ಸ್ಪಷ್ಟಪಡಿಸಿದ್ದಾರೆ. ‘ನಾವು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಇದರಿಂದ ದಿನದೂಡುವುದೇ ಕಷ್ಟವಾಗುತ್ತಿದೆ. ಸಮಸ್ಯೆಗಳು ಬಗೆಹರಿದರಷ್ಟೇ ನಾವು ಏಷ್ಯಾಡ್ನಲ್ಲಿ ಸ್ಪರ್ಧಿಸುತ್ತೇವೆ’ ಎಂದಿದ್ದಾರೆ. ಏಷ್ಯನ್ ಗೇಮ್ಸ್ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಚೀನಾದಲ್ಲಿ ನಡೆಯಲಿದ್ದು, ಇದಕ್ಕೆ ಇದೇ ತಿಂಗಳಾಂತ್ಯಕ್ಕೆ ಆಯ್ಕೆ ಟ್ರಯಲ್ಸ್ ನಡೆಯುವ ಸಾಧ್ಯತೆಯಿದೆ.