ಫೈನಲ್ನಲ್ಲಿಂದು ಜೋಕೋವಿಚ್ಗೆ ನಾರ್ವೆಯ ರುಡ್ ಸವಾಲು
ಐತಿಹಾಸಿಕ 23ನೇ ಗ್ರ್ಯಾನ್ ಸ್ಲಾಂ ಜಯಿಸುವ ವಿಶ್ವಾಸದಲ್ಲಿ ಸರ್ಬಿಯಾದ ಟೆನಿಸಿಗ
ಸದ್ಯ ಜೋಕೋ ಹಾಗೂ ರಾಫೆಲ್ ನಡಾಲ್ ತಲಾ 22 ಗ್ರ್ಯಾನ್ಸ್ಲಾಂಗಳನ್ನು ಗೆದ್ದಿದ್ದಾರೆ
ಪ್ಯಾರಿಸ್(ಜೂ.11): 23 ಗ್ರ್ಯಾನ್ಸ್ಲಾಂ ಪ್ರಶಸ್ತಿಗಳನ್ನು ಗೆದ್ದು ಪುರುಷರ ಟೆನಿಸ್ನಲ್ಲಿ ಇತಿಹಾಸ ಸೃಷ್ಟಿಸಲು ಸರ್ಬಿಯಾದ ನೋವಾಕ್ ಜೋಕೋವಿಚ್ಗೆ ಇನ್ನೊಂದೇ ಹೆಜ್ಜೆ ಬಾಕಿಯಿದೆ. 3ನೇ ಶ್ರೇಯಾಂಕಿತ ಜೋಕೋ ಭಾನುವಾರ ಫ್ರೆಂಚ್ ಓಪನ್ ಟೂರ್ನಿಯ ಫೈನಲ್ನಲ್ಲಿ 4ನೇ ಶ್ರೇಯಾಂಕಿತ, ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ ಸೆಣಸಾಡಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಸದ್ಯ ಜೋಕೋವಿಚ್ ಹಾಗೂ ರಾಫೆಲ್ ನಡಾಲ್ ತಲಾ 22 ಟೆನಿಸ್ ಗ್ರ್ಯಾನ್ಸ್ಲಾಂಗಳನ್ನು ಗೆದ್ದಿದ್ದಾರೆ. ಒಂದು ವೇಳೆ ಜೋಕೋ ಫೈನಲ್ನಲ್ಲಿ ಗೆದ್ದರೆ ಪುರುಷರ ಸಿಂಗಲ್ಸ್ನಲ್ಲಿ ಅತಿ ಹೆಚ್ಚು ಗ್ರ್ಯಾನ್ಸ್ಲಾಂ ಗೆದ್ದ ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಲಿದೆ. ಮಹಿಳಾ ಸಿಂಗಲ್ಸ್ನಲ್ಲಿ ಆಸ್ಪ್ರೇಲಿಯಾದ ಮಾರ್ಗರೇಟ್ ಕೋರ್ಚ್ ದಾಖಲೆಯ 24 ಗ್ರ್ಯಾನ್ಸ್ಲಾಂ ಗೆದ್ದಿದ್ದರೆ, ಅಮೆರಿಕದ ಸೆರೆನಾ ವಿಲಿಯಮ್ಸ್ 23, ಜರ್ಮನಿಯ ಸ್ಟೆಫಿ ಗ್ರಾಫ್ 22 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಜೋಕೋ ಶುಕ್ರವಾರ ಮೊದಲ ಸೆಮೀಸ್ನಲ್ಲಿ ವಿಶ್ವ ನಂ.1, ಸ್ಪೇನ್ನ ಕಾರ್ಲೋಸ್ ಆಲ್ಕರಜ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೇರಿದ್ದಾರೆ. ಮತ್ತೊಂದೆಡೆ ಚೊಚ್ಚಲ ಗ್ರ್ಯಾನ್ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ರುಡ್, ಸೆಮೀಸ್ನಲ್ಲಿ ಜರ್ಮನಿಯ ಅಲೆಕ್ಸಾಂಡೆರ್ ಜ್ವೆರೆವ್ರನ್ನು 6-3, 6-4, 6-0 ಅಂತರದಲ್ಲಿ ಮಣಿಸಿ ಸತತ 2ನೇ ಬಾರಿ ಫ್ರೆಂಚ್ ಓಪನ್ ಫೈನಲ್ಗೇರಿದರು. ಒಟ್ಟಾರೆ ರುಡ್ಗೆ ಇದು 3ನೇ ಗ್ರ್ಯಾನ್ಸ್ಲಾಂ ಫೈನಲ್. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್ನಲ್ಲಿ ನಡಾಲ್ ವಿರುದ್ಧ ಸೋತಿದ್ದರೆ, ಯುಎಸ್ ಓಪನ್ನಲ್ಲಿ ಆಲ್ಕರಜ್ ವಿರುದ್ಧ ಸೋತು ರನ್ನರ್-ಅಪ್ ಆಗಿದ್ದರು.
2 ಬಾರಿ ಪ್ರಶಸ್ತಿ ಗೆದ್ದಿರುವ ಜೋಕೋ
ನೋವಾಕ್ ಜೋಕೋವಿಚ್ ಈ ವರೆಗೂ 6 ಬಾರಿ ಫ್ರೆಂಚ್ ಓಪನ್ ಫೈನಲ್ನಲ್ಲಿ ಆಡಿದ್ದು 2 ಬಾರಿ ಚಾಂಪಿಯನ್ ಆಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ಜೋಕೋ, 2021ರಲ್ಲಿ 2ನೇ ಬಾರಿಗೆ ಚಾಂಪಿಯನ್ ಆಗಿದ್ದರು. 2012, 2014, 2020ರಲ್ಲಿ ರಾಫೆಲ್ ನಡಾಲ್, 2015ರಲ್ಲಿ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಫೈನಲ್ನಲ್ಲಿ ಸೋತಿದ್ದರು. 2016ರ ಫೈನಲ್ನಲ್ಲಿ ಆ್ಯಂಡಿ ಮರ್ರೆ, 2021ರ ಫೈನಲ್ನಲ್ಲಿ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಜೋಕೋವಿಚ್ ಗೆದ್ದಿದ್ದರು.
ಆರ್ಚರಿ ಏಷ್ಯಾಕಪ್: 7 ಪದಕ ಜಯಿಸಿದ ಭಾರತ
ಸಿಂಗಾಪುರ: ಆರ್ಚರಿ ಏಷ್ಯಾಕಪ್-3 ಟೂರ್ನಿಯಲ್ಲಿ ಭಾರತ 6 ಬೆಳ್ಳಿ ಸೇರಿ ಒಟ್ಟು 7 ಪದಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಭಾನುವಾರ ಭಾರತೀಯ ಆರ್ಚರ್ಗಳು ಚೀನಾ, ಕೊರಿಯಾ ಸ್ಪರ್ಧಿಗಳ ಮುಂದೆ ಫೈನಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದೆ ಒಂದೂ ಚಿನ್ನ ಗೆಲ್ಲಲು ವಿಫಲರಾದರು. ಪುರುಷರ ರೀಕರ್ವ್ ವಿಭಾಗದಲ್ಲಿ ಪಾರ್ಥ್ ಸಾಲುಂಕೆ, ಮಹಿಳಾ ಕಾಂಪೌಂಡ್ನಲ್ಲಿ ರುಮಾ ಬಿಸ್ವಾಸ್ ಬೆಳ್ಳಿ ಗೆದ್ದರು.
French Open 2023: ಇಗಾ ಸ್ವಿಯಾಟೆಕ್ಗೆ 3ನೇ ಫ್ರೆಂಚ್ ಕಿರೀಟ! ವಿಶ್ವ ನಂ.1 ಪಟ್ಟವೂ ಭದ್ರ
ಕಾಂಪೌಂಡ್ ವಿಭಾಗದ ಪುರುಷ, ಮಹಿಳಾ ತಂಡ, ರೀಕರ್ವ್ ವಿಭಾಗದ ಪುರುಷ, ಮಹಿಳಾ ತಂಡ ಕೂಡಾ ಬೆಳ್ಳಿಗೆ ತೃಪ್ತಿಪಟ್ಟಿತು. ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಪ್ರಗತಿ ಕಂಚು ಜಯಿಸಿದರು. ಕೊರಿಯಾ 4 ಚಿನ್ನ ಸೇರಿ 7 ಪದಕದೊಂದಿಗೆ ಅಗ್ರಸ್ಥಾನ ಪಡೆದರೆ, ಚೀನಾ 3 ಚಿನ್ನ, 4 ಕಂಚಿನೊಂದಿಗೆ 2ನೇ ಸ್ಥಾನಿಯಾಯಿತು.
ಏಷ್ಯನ್ ನೆಟ್ಬಾಲ್: ಭಾರತ ಶುಭಾರಂಭ
ಜೊಂಬು: ಇಲ್ಲಿ ಆರಂಭಗೊಂಡ ಏಷ್ಯನ್ ಯೂತ್ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ಶುಭಾರಂಭ ಮಾಡಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ದ 46-40 ಅಂತರದಲ್ಲಿ ಗೆಲುವು ಸಾಧಿಸಿತು. ಭಾರತ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ಹಾಂಕಾಂಗ್ ವಿರುದ್ದ ಸೆಣಸಾಡಲಿದೆ.