
ನವದೆಹಲಿ(ಏ.24): ಲೈಂಗಿಕ ಕಿರುಕುಳ ಸೇರಿ ಹಲವು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಾಗೂ ಮೇರಿ ಕೋಮ್ ನೇತೃತ್ವದ ಸಮಿತಿಯು ಕ್ರೀಡಾ ಸಚಿವಾಲಯಕ್ಕೆ ನೀಡಿದ್ದ ವರದಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ದೇಶದ ಅಗ್ರ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತೆ ಧರಣಿ ಆರಂಭಿಸಿದ್ದಾರೆ.
ಭಾರತದ ಅಗ್ರಕುಸ್ತಿಪಟುಗಳಾದ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಪೋಗಾಟ್ ಸೇರಿದಂತೆ ಹಲವು ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಮತ್ತೊಮ್ಮೆ ಪುನರಾರಂಭಿಸಿದ್ದಾರೆ.
ಜನವರಿ ಅಂತ್ಯದಲ್ಲೇ ತನಿಖೆ ಆರಂಭಿಸಿದ್ದ ಸಮಿತಿಯು ಇತ್ತೀಚೆಗಷ್ಟೇ ವರದಿ ಸಲ್ಲಿಸಿತ್ತು. ಆದರೆ ಭೂಷಣ್ರಿಂದ ಕಿರುಕುಳವಾದ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಮತ್ತು ಅವರಿಗೆ ಕ್ಲೀನ್‌ಚಿಟ್ ಸಿಗಲಿದೆ ಎಂದು ವರದಿಯಾಗಿತ್ತು. ಹೀಗಾಗಿ ಶುಕ್ರವಾರ ಕುನಾಟ್ನಲ್ಲಿರುವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಕುಸ್ತಿಪಟುಗಳು, ಭಾನುವಾರ ಜಂತರ್ಮಂತರ್ಗೆ ಆಗಮಿಸಿ ಧರಣಿ ಕುಳಿತಿದ್ದಾರೆ. ‘ಅಪ್ರಾಪ್ತ ಕುಸ್ತಿಪಟು ಸೇರಿದಂತೆ 7 ಮಂದಿ ಸೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ. ಆದರೆ ಪ್ರಕರಣವನ್ನೂ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಮತ್ತೆ ಧರಣಿ ಶುರುಮಾಡಿದ್ದೇವೆ. ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ’ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಎಚ್ಚರಿಸಿದ್ದಾರೆ.
ಇನ್ನು, ಪೊಲೀಸರಿಗೆ ದೂರು ಸಲ್ಲಿಸಿ 2 ದಿನಗಳಾದರೂ ಇನ್ನೂ ಎಫ್ಐಆರ್ ದಾಖಲಿಸಿದ್ದಕ್ಕೆ ದೆಹಲಿ ಮಹಿಳಾ ಆಯೋಗ ಕಿಡಿಕಾರಿದ್ದು, ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಆರ್ಚರಿ ವಿಶ್ವಕಪ್: ಭಾರತ ರೀಕರ್ವ್ ತಂಡಕ್ಕೆ ಬೆಳ್ಳಿ
ಅಂತಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಮೊದಲ ಹಂತದಲ್ಲಿ ಭಾರತದ ಪುರುಷರ ರೀಕರ್ವ್ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದ್ದು, 13 ವರ್ಷಗಳ ಬಳಿಕ ಚಿನ್ನ ತನ್ನದಾಗಿಸಿಕೊಳ್ಳುವ ಅವಕಾಶ ತಪ್ಪಿಸಿಕೊಂಡಿತು. ಭಾನುವಾರ ತರುಣ್ದೀಪ್, ಅತನು ದಾಸ್, ಧೀರಜ್ ಅವರನ್ನೊಳಗೊಂಡ ತಂಡ ಫೈನಲ್ನಲ್ಲಿ ಚೀನಾ ವಿರುದ್ಧ 4-5 ಅಂತರದಲ್ಲಿ ಸೋಲನುಭವಿಸಿತು.
IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!
ಭಾರತ ಪುರುಷರ ರೀಕರ್ವ್ ತಂಡ ಕೊನೆ ಬಾರಿ ಚಿನ್ನ ಗೆದ್ದಿದ್ದು 2010ರಲ್ಲಿ. ಬಳಿಕ 2014ರಲ್ಲಿ ಬೆಳ್ಳಿ ಜಯಿಸಿದ್ದ ಭಾರತ 9 ವರ್ಷಗಳ ಬಳಿಕ ಮೊದಲ ಸಲ ಫೈನಲ್ಗೇರಿತ್ತು. ಇದೇ ವೇಳೆ ವೈಯಕ್ತಿಕ ರೀಕರ್ವ್ ವಿಭಾಗದಲ್ಲಿ ಧೀರಜ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಬಾರಿ ಟೂರ್ನಿಯಲ್ಲಿ ಭಾರತ ಒಟ್ಟು 2 ಚಿನ್ನ ಸೇರಿ 4 ಪದಕ ಗೆದ್ದುಕೊಂಡಿದೆ. ಶನಿವಾರ ಮಿಶ್ರ ಕಾಂಪೌಂಡ್ ಹಾಗೂ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಒಲಿದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.