
ಹೈದರಾಬಾದ್(ಏ.24): ಕೆಲ ವೈಯಕ್ತಿಕ ಪ್ರದರ್ಶನಗಳ ಹೊರತಾಗಿ ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ, ಅಂಕಪಟ್ಟಿಯಲ್ಲಿ ಕೊನೆ 2 ಸ್ಥಾನಗಳಲ್ಲಿರುವ ತಂಡಗಳಾದ ಸನ್‌ರೈಸರ್ಸ್ ಹೈದರಾಬಾದ್-ಡೆಲ್ಲಿ ಕ್ಯಾಪಿಟಲ್ಸ್ ಸೋಮವಾರ ಪರಸ್ಪರ ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯಲ್ಲಿ ಪ್ಲೇ-ಆಫ್ಗೇರಲು ವಿಫಲವಾಗಿದ್ದ ಉಭಯ ತಂಡಗಳ ನಾಕೌಟ್ ಹಾದಿ ಈ ಬಾರಿಯೂ ಪಂದ್ಯದಿಂದ ಪಂದ್ಯಕ್ಕೆ ಕುಂಠಿತಗೊಳ್ಳುತ್ತಿವೆ. ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಹೈದ್ರಾಬಾದ್ 6ರಲ್ಲಿ 2, ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ 1 ಪಂದ್ಯ ಮಾತ್ರ ಗೆದ್ದಿದ್ದು, ಜಯದ ಹಳಿಗೆ ಮರಳಲು ಕಾಯುತ್ತಿವೆ.
ಆಡಿದ 6 ಪಂದ್ಯಗಳಲ್ಲಿ 4ರಲ್ಲಿ 145ಕ್ಕಿಂತ ಕಡಿಮೆ ರನ್ ಕಲೆಹಾಕಿದ್ದು ಹೈದ್ರಾಬಾದ್ನ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ. ಹ್ಯಾರಿ ಬ್ರೂಕ್ ಶತಕ ಹೊರತುಪಡಿಸಿ ಉಳಿದ 5 ಪಂದ್ಯಗಳಲ್ಲಿ ಗಳಿಸಿದ್ದು 56 ರನ್. ಉಳಿದಂತೆ ಯಾವ ಬ್ಯಾಟರ್ನ ಒಟ್ಟು ರನ್ ಗಳಿಕೆಯೂ 150 ದಾಟಿಲ್ಲ. ನಾಯಕ ಏಯ್ಡನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್‌ವಾಲ್ ಸ್ಥಿರತೆ ಕಾಯ್ದುಕೊಂಡಿಲ್ಲ. ಪ್ರತಿಭಾವಂತ ವೇಗಿಗಳು ತಂಡದಲ್ಲಿದ್ದರೂ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಸ್ಪಿನ್ನರ್ಗಳಾದ ಮಯಾಂಕ್ ಮಾರ್ಕಂಡೆ, ವಾಷಿಂಗ್ಟನ್ ಸುಂದರ್ ಮೇಲೆ ನಿರೀಕ್ಷೆ ಇದ್ದು, ಇವರು ಡೆಲ್ಲಿ ಆಟಗಾರರನ್ನು ಕಟ್ಟಿಹಾಕಲು ವಿಫಲವಾದರೆ ಹ್ಯಾಟ್ರಿಕ್ ಸೋಲು ಕಟ್ಟಿಟ್ಟ ಬುತ್ತಿ.
ಮತ್ತೊಂದೆಡೆ ಡೆಲ್ಲಿಯ ಪರಿಸ್ಥಿತಿ ಹೈದ್ರಾಬಾದ್ಗಿಂತ ಕಳಪೆ ಮಟ್ಟದ್ದು. ಸತತ 5 ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಎದ್ದು ಬಿದ್ದು ಗೆಲುವು ತನ್ನದಾಗಿಸಿಕೊಂಡಿದ್ದು, ಜಯದ ಹಳಿಯಲ್ಲೇ ಸಾಗುವ ತವಕದಲ್ಲಿದೆ. ಡೇವಿಡ್ ವಾರ್ನರ್ ಹಾಗೂ ಅಕ್ಷರ್ ಪಟೇಲ್ ಬಿಟ್ಟರೆ ಇತರರು ತಂಡಕ್ಕೆ ಯಾವ ರೀತಿಯಲ್ಲೂ ನೆರವಾಗುತ್ತಿಲ್ಲ. ಪೃಥ್ವಿ ಶಾ ಗಳಿಕೆ 12, 07, 00, 15, 00 ಮತ್ತು 13 ರನ್. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯ ಗರಿಷ್ಠ ಮೊತ್ತ 4. ಮನೀಶ್ ಪಾಂಡೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದ್ದು, ಬೌಲಿಂಗ್ ವಿಭಾಗಕ್ಕೆ ಇಶಾಂತ್ ಶರ್ಮಾ ಸೇರ್ಪಡೆ ಕೊಂಚ ಬಲ ಒದಗಿಸಿದೆ. ಆದರೆ ನೋಕಿಯಾ, ಕುಲ್ದೀಪ್ ಪರಿಣಾಮಕಾರಿಯಾಗದ್ದರೆ ಗೆಲುವು ಕಷ್ಟವಿದೆ.
IPL 2023 ಕೆಕೆಆರ್ ವಿರುದ್ಧ ದಾಖಲೆಯ ಗೆಲುವು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸಿಎಸ್‌ಕೆ!
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಒಟ್ಟು 21 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಪೈಪೋಟಿ ನಡೆಸಿವೆಯಾದರೂ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 21 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಸಂಭವನೀಯ ಆಟಗಾರರ ಪಟ್ಟಿ
ಸನ್‌ರೈಸರ್ಸ್ ಹೈದ್ರಾಬಾದ್: ಮಯಾಂಕ್ ಅಗರ್‌ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್(ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಯಾನ್ಸೆನ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಅಕ್ಷರ್ ಪಟೇಲ್, ಅಮಾನ್ ಖಾನ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಇಶಾಂತ್ ಶರ್ಮಾ, ಮುಕೇಶ್ ಕುಮಾರ್.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ ಈ ಆವೃತ್ತಿಯಲ್ಲಿ ಬೌಲರ್ಗಳೇ ಹೆಚ್ಚಿನ ನೆರವು ಪಡೆದಿದ್ದಾರೆ. 3 ಪಂದ್ಯಗಳಲ್ಲಿ 2 ಬಾರಿ ಚೇಸಿಂಗ್ ತಂಡ ಸೋತಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡಿದ ತಂಡ 170+ ಗಳಿಸಿದರೂ ರಕ್ಷಿಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.