
ಲಂಡನ್[ಜು.22]: 14ನೇ ಆವೃತ್ತಿಯ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ಜಯದ ಆರಂಭ ಪಡೆಯುವಲ್ಲಿ ಎಡವಿದೆ. ಆದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಲ್ಲಿ ಡ್ರಾ ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಪಂದ್ಯದಲ್ಲಿ 8 ಪೆನಾಲ್ಟಿ ಕಾರ್ನರ್‌ಗಳ ಜತೆ ಇಂಗ್ಲೆಂಡ್‌ನ ಅನೇಕ ಗೋಲು ಗಳಿಸುವ ಅವಕಾಶಗಳನ್ನು ವಿಫಲಗೊಳಿಸಿದ ಗೋಲ್ ಕೀಪರ್ ಸವಿತಾ ಪೂನಿಯಾ ಭಾರತ ಡ್ರಾ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಆತಿಥೇಯ ಇಂಗ್ಲೆಂಡ್‌ಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಬಲ ನೀಡಿದರು. ಆದರೆ ಒತ್ತಡಕ್ಕೆ ಮಣಿಯದ ಭಾರತ, ಅತ್ಯುತ್ತಮ ಆಟ ಪ್ರದರ್ಶಿಸಿತು. 25ನೇ ನಿಮಿಷದಲ್ಲಿ ನೇಹಾ ಗೋಯಲ್ ಭಾರತ ಪರ ಗೋಲು ಗಳಿಸಿ, ತಂಡ ಮುನ್ನಡೆ ಸಾಧಿಸಲು ಕಾರಣರಾದರು. ಮೊದಲಾರ್ಧದ ಮುಕ್ತಾಯಕ್ಕೆ ಭಾರತ 1-0 ಮುನ್ನಡೆ ಪಡೆದುಕೊಂಡಿತು.
ದ್ವಿತೀಯಾರ್ಧದ ಬಹುತೇಕ ಸಮಯ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿತು. ಇಂಗ್ಲೆಂಡ್ ಎಷ್ಟೇ ಬಾರಿ ಭಾರತದ ವೃತ್ತದೊಳಗೆ ಪ್ರವೇಶ ಮಾಡಿದರೂ, ರಾಣಿ ಪಡೆ ಒತ್ತಡಕ್ಕೆ ಸಿಲುಕಲಿಲ್ಲ. ಒಂದರ ಹಿಂದೆ ಒಂದು ಪೆನಾಲ್ಟಿ ಕಾರ್ನರ್ ಪಡೆದರೂ, ಇಂಗ್ಲೆಂಡ್‌ಗೆ ಗೋಲು ಗಳಿಸಲು ಸವಿತಾ ಹಾಗೂ ರಕ್ಷಣಾ ಪಡೆ ಬಿಡಲಿಲ್ಲ.
ಆದರೆ, 54ನೇ ನಿಮಿಷದಲ್ಲಿ ಸಿಕ್ಕ 9ನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇಂಗ್ಲೆಂಡ್ ಕೊನೆಗೂ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಲು ಯಶಸ್ವಿಯಾಯಿತು. ಓಸ್ಲೆ ಲಿಲ್ಲಿ ಇಂಗ್ಲೆಂಡ್
ಸಮಬಲಕ್ಕೆ ಕಾರಣರಾದರು. ಕೊನೆ 7 ನಿಮಿಷಗಳಲ್ಲಿ ಭಾರತ ಮುನ್ನಡೆ ಸಾಧಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾನೊಂದಿಗೆ ಮುಕ್ತಾಯಗೊಂಡಿತು. ಭಾರತ ತನ್ನ ಮುಂದಿನ ಪಂದ್ಯವನ್ನು ಜು.26ಕ್ಕೆ ಐರ್ಲೆಂಡ್ ವಿರುದ್ಧ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.