ಮೊಣಕೈ ಗಾಯದಿಂದ ಬಳಲಿ ಬೆಂಡಾಗಿದ್ದ ಜೋಕೋ 2 ವರ್ಷಗಳ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. 2016ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದೇ ಜೋಕೋರ ಕೊನೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿತ್ತು. ಸರ್ಬಿಯಾ ಆಟಗಾರನಿಗೆ ಇದು 4ನೇ ವಿಂಬಲ್ಡನ್ ಹಾಗೂ ಒಟ್ಟಾರೆ 13ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿದೆ.
ಲಂಡನ್[ಜು.16]: ದೈತ್ಯ ಸಂಹಾರಿ ಕೆವಿನ್ ಆ್ಯಂಡರ್‌ಸನ್‌ರನ್ನು ಸುಲಭವಾಗಿ ಬಗ್ಗುಬಡಿದ ನೋವಾಕ್ ಜೋಕೋವಿಚ್, 2018ರ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-2, 6-2,7-6 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಮೊಣಕೈ ಗಾಯದಿಂದ ಬಳಲಿ ಬೆಂಡಾಗಿದ್ದ ಜೋಕೋ 2 ವರ್ಷಗಳ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. 2016ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದೇ ಜೋಕೋರ ಕೊನೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿತ್ತು. ಸರ್ಬಿಯಾ ಆಟಗಾರನಿಗೆ ಇದು 4ನೇ ವಿಂಬಲ್ಡನ್ ಹಾಗೂ ಒಟ್ಟಾರೆ 13ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿದೆ. ಈ ಮೊದಲು 2011, 2014 ಹಾಗೂ 2015ರಲ್ಲಿ ಜೋಕೋವಿಚ್ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ವರ್ಷದ ಚಾಂಪಿಯನ್ ರೋಜರ್ ಫೆಡರರ್ ವಿರುದ್ಧ ಗೆದ್ದಿದ್ದ ಆ್ಯಂಡರ್‌ಸನ್, ಸೆಮೀಸ್‌ನಲ್ಲಿ ಜಾನ್ ಇಸ್ನರ್ ವಿರುದ್ಧ ಬರೋಬ್ಬರಿ 6 ಗಂಟೆ 36 ನಿಮಿಷಗಳ ಕಾಲ ಹೋರಾಡಿ ಜಯಿಸಿದ್ದರು. ಹೀಗಾಗಿ ಫೈನಲ್‌ನಲ್ಲೂ ಸಹ ಅವರಿಂದ ಭಾರೀ ಪೈಪೋಟಿ ಎದುರಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಪ್ರಚಂಡ ಲಯದಲ್ಲಿದ್ದ ಜೋಕೋವಿಚ್ ಮುಂದೆ ದಕ್ಷಿಣ ಆಫ್ರಿಕಾ ಆಟಗಾರನ ಜಾದೂ ನಡೆಯಲಿಲ್ಲ. ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಆ್ಯಂಡರ್‌ಸನ್ ಕನಸು ಈಡೇರಲಿಲ್ಲ.
ಮೊದಲೆರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದ ಜೋಕೋವಿಚ್‌ಗೆ 3ನೇ ಸೆಟ್‌ನಲ್ಲಿ ಸ್ವಲ್ಪ ಮಟ್ಟಿಗಿನ ಪೈಪೋಟಿ ಎದುರಾಯಿತು. ಬಹುತೇಕ ಸೆಟ್ ಗೆಲ್ಲುವ ಹಂತಕ್ಕೆ ಆ್ಯಂಡರ್‌ಸನ್ ತಲುಪಿದ್ದರು. ಆದರೆ ಒತ್ತಡ ನಿಭಾಯಿಸಿದ ಜೋಕೋವಿಚ್, 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿ, ಟೈ ಬ್ರೇಕರ್ ಚಾಲ್ತಿಗೆ ಬರುವಂತೆ ಮಾಡಿದರು. ಟೈ ಬ್ರೇಕರ್‌ನಲ್ಲಿ 7-3 ಅಂಕಗಳ ಅಂತರದಲ್ಲಿ ಜಯಿಸಿ ಗೇಮ್ ತಮ್ಮದಾಗಿಸಿಕೊಳ್ಳುವುದರೊಂದಿಗೆ ಪಂದ್ಯ ಗೆದ್ದರು. ಪಂದ್ಯ 2 ಗಂಟೆ 19 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ ಸತತ 3ನೇ ವರ್ಷ ವಿಂಬಲ್ಡನ್ ಪುರುಷರ ಫೈನಲ್ ಏಕಪಕ್ಷೀಯವಾಗಿ ಮುಕ್ತಾಯಗೊಂಡಿತು. ಕಳೆದ ವರ್ಷ ಫೆಡರರ್, ಅದಕ್ಕೂ ಮುನ್ನ ಆ್ಯಂಡಿ ಮರ್ರೆ ಸಹ ಸುಲಭ ಗೆಲುವು ದಾಖಲಿಸಿದ್ದರು.
ಕಳೆದ 56 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಫೆಡರರ್ ಹಾಗೂ ನಡಾಲ್ ಇಬ್ಬರೇ ಗೆದ್ದಿದ್ದರು.
ಗಾಯದಿಂದಾಗಿ ಮಂಕಾಗಿದ್ದ ಜೋಕೋವಿಚ್ ಈ ಜಯದೊಂದಿಗೆ ಪ್ರಶಸ್ತಿ ರೇಸ್‌ಗೆ ವಾಪಸಾಗಿದ್ದಾರೆ. ಮಾಜಿ ವಿಶ್ವ ನಂ.1 ಆಟಗಾರ ಜೋಕೋವಿಚ್ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡ ಬಳಿಕ ತಾವು ಹುಲ್ಲಿನ ಅಂಕಣದಲ್ಲಿ ಆಡುವುದು ಅನುಮಾನ ಎಂದಿದ್ದರು. ಅದರಲ್ಲೂ ಕ್ವೀನ್ಸ್ ಓಪನ್‌ನಲ್ಲಿ ಪರಾಭವಗೊಂಡ ಮೇಲಂತೂ ತಾವು ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರ ಪಟ್ಟಿಯಲ್ಲಿಲ್ಲ ಎಂದಿದ್ದರು. ಆದರೆ ತಮಗೇ ಅಚ್ಚರಿಯಾಗುವ ರೀತಿಯಲ್ಲಿ ಪ್ರದರ್ಶನ ತೋರಿದ ಜೋಕೋ, ಪ್ರಶಸ್ತಿಯೊಂದಿಗೆ ಹಿಂದಿರುಗಿದ್ದಾರೆ. ನಡಾಲ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ್ದು, ಜೋಕೋ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ವಿಂಬಲ್ಡನ್ ಜಯದೊಂದಿಗೆ ಜೋಕೋವಿಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ.