ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಗುರಿಯೊಂದಿಗೆ ವಿಂಬಲ್ಡನ್‌ಗೆ ಪ್ರವೇಶಿಸಿದ ಸೆರೆನಾ ಪ್ರಚಂಡ ಲಯದಲ್ಲಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.
ಲಂಡನ್(ಜು.14]: ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಂದು 7 ಬಾರಿ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಹಾಗೂ ಮಾಜಿ ನಂ.1 ಜರ್ಮನಿಯ ಆ್ಯಂಜಿಲಿಕ್ ಕೆರ್ಬರ್ ಸೆಣಸಾಡಲಿದ್ದಾರೆ. ಸೆರೆನಾ 24ನೇ ಗ್ರ್ಯಾಂಡ್‌ಸ್ಲಾಂ ಕಿರೀಟದ ಮೇಲೆ ಕಣ್ಣಿಟ್ಟಿದ್ದರೆ, ಕೆರ್ಬರ್ 3ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದಾರೆ. 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಹಾಗೂ ಯುಎಸ್ ಓಪನ್ ಗೆದ್ದಿದ್ದ ಕೆರ್ಬರ್, 2016ರ ವಿಂಬಲ್ಡನ್‌ನಲ್ಲಿ ರನ್ನರ್-ಅಪ್ ಆಗಿದ್ದರು. ಇದೀಗ ಮೊದಲ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ.
ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಗುರಿಯೊಂದಿಗೆ ವಿಂಬಲ್ಡನ್‌ಗೆ ಪ್ರವೇಶಿಸಿದ ಸೆರೆನಾ ಪ್ರಚಂಡ ಲಯದಲ್ಲಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಕ್ವಾರ್ಟರ್ ಫೈನಲ್ ಹೊರತು ಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲೂ ಸೆರೆನಾ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕೆರ್ಬರ್ ಸಹ 2ನೇ ಸುತ್ತಿನ ಪಂದ್ಯದಲ್ಲಿ ಮಾತ್ರ ಒಂದು ಸೆಟ್ ಸೋತಿದ್ದರು. ಅದನ್ನು ಹೊರತು ಪಡಿಸಿ ಇನ್ನೆಲ್ಲಾ ಪಂದ್ಯಗಳಲ್ಲೂ 2-0 ಸೆಟ್‌ಗಳಲ್ಲಿ ಗೆದ್ದು ಫೈನಲ್‌ಗೇರಿದ್ದಾರೆ.
ಸೆರೆನಾ 2 ತಿಂಗಳ ಹಿಂದೆ ನಡೆದ ಫ್ರೆಂಚ್ ಓಪನ್‌ನಲ್ಲೇ ಟ್ರೋಫಿ ಗೆಲ್ಲುವ ಭರವಸೆ ಹುಟ್ಟಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ದಾಖಲೆಯ 8ನೇ ವಿಂಬಲ್ಡನ್ ಗೆಲ್ಲುವ ಮೂಲಕ, ಗ್ರ್ಯಾಂಡ್‌ಸ್ಲಾಂ ಗೆಲುವಿನ ಲಯಕ್ಕೆ ಮರಳಲು ಕಾತರರಾಗಿದ್ದಾರೆ.