ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟ
ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ
ಲಂಡನ್(ಜೂ.27): 2022ರ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಸೋಮವಾರದಿಂದ ಆರಂಭವಾಗಲಿದ್ದು, ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ. ಈ ಬಾರಿ ವಿಂಬಲ್ಡನ್ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ. ಹೀಗಾಗಿ ವಿಶ್ವ ನಂ.1 ಟೆನಿಸಿಗ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇನ್ನು, ಟೆನಿಸ್ ಇತಿಹಾಸದಲ್ಲೇ ಅತೀ ಹೆಚ್ಚು(23) ಗ್ರ್ಯಾನ್‌ಸ್ಲಾಂ ಗೆದ್ದಿರುವ ಅಮೆರಿಕದ ಮಾಜಿ ವಿಶ್ವ ನಂ.1 ಸೆರೆನಾ ವಿಲಿಯಮ್ಸ್ (Serena Williams) ವರ್ಷಗಳ ಬಳಿಕ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದು, 24ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿ ವಿಂಬಲ್ಡನ್ ಚಾಂಪಿಯನ್, ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ (Ashleigh Barty) ಈಗಾಗಲೇ ನಿವೃತ್ತಿಯಾಗಿದ್ದು, ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಇವರನ್ನು ಹೊರತುಪಡಿಸಿದ ಈ ಬಾರಿ ಫ್ರೆಂಚ್ ಓಪನ್ (French Open) ಗೆದ್ದಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್, 2021 ಯುಸ್ ಓಪನ್ ಚಾಂಪಿಯನ್ ಬ್ರಿಟನ್‌ನ ಎಮ್ಮಾ ರಾಡುಕಾನು, ಸ್ಪೇನ್‌ನ ಪಾಲಾ ಬಡೋಸಾ, ಕಳೆದ ಬಾರಿ ವಿಂಬಲ್ಡನ್ ರನ್ನರ್-ಅಪ್ ಚೆಕ್ ಗಣರಾಜ್ಯದ ಕರೋಲಿನಾ ಪಿಸ್ಕೋವಾ, ಅಮೆರಿಕದ ಜೆಸ್ಸಿಗಾ ಪೆಗುಲಾ ಕೂಡಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ರಾಫಾಗೆ 23ನೇ ಗ್ರ್ಯಾನ್‌ಸ್ಲಾಂ ಕನಸು:
ಈ ವರ್ಷ ಈಗಾಗಲೇ ಆಸ್ಪ್ರೇಲಿಯನ್ ಓಪನ್ (Australian Open) ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal) ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗ್ರ್ಯಾನ್‌ಸ್ಲಾಂ ಸಂಖ್ಯೆಯನ್ನು 23ಕ್ಕೆ ಏರಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೇ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ, ಹಾಲಿ ವಿಂಬಲ್ಡನ್ ಚಾಂಪಿಯನ್ ನೋವಾಕ್ ಜೋಕೋವಿಚ್ (Novak Djokovic) ಸತತ 2ನೇ ಪ್ರಶಸ್ತಿ ಗೆಲ್ಲಲುವ ತವಕದಲ್ಲಿದ್ದಾರೆ. ಈ ಇಬ್ಬರೂ ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
Commonwealth Games 2022: ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್
ಆದರೆ ಈ ಬಾರಿ ರೋಜರ್ ಫೆಡರರ್ (Roger Federer), ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಗಾಯದ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಉಳಿದಂತೆ ಫ್ರೆಂಚ್ ಓಪನ್ ರನ್ನರ್-ಅಪ್ ನಾರ್ವೆಯ ಕ್ಯಾಸ್ಪೆರ್ ರುಡ್, ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್, ಸ್ಪೇನ್‌ನ ಕಾರ್ಲೊಸ್ ಆಲ್ಕರಾಜ್, ಬ್ರಿಟನ್‌ನ ಆ್ಯಂಡಿ ಮರ್ರೆ ಕೂಡಾ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.
ಆರ್ಚರಿ ವಿಶ್ವಕಪ್: 3ನೇ ಪದಕ ಬಾಚಿದ ಭಾರತ
ಪ್ಯಾರಿಸ್: ಭಾರತ ಮಹಿಳಾ ರಿಕರ್ವ್ ತಂಡ ಆರ್ಚರಿ ವಿಶ್ವಕಪ್ 3 ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದು, ಭಾರತ 3 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಭಾನುವಾರ ನಡೆದ ರಿಕವ್‌ರ್ ಫೈನಲ್‌ನಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್ ಹಾಗೂ ಸಿಮ್ರನ್‌ಜಿತ್ ಕೌರ್ ಅವರನ್ನೊಳಗೊಂಡ ತಂಡ 1-5 ಅಂಕಗಳಿಂದ ಚೈನೀಸ್ ತೈಪೆ ತಂಡದ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ಭಾರತದ ಪರ ಅಭಿಷೇಕ್ ವರ್ಮಾ-ಜ್ಯೋತಿ ಸುರೇಖಾ ಜೋಡಿ ಕಾಂಪೌಂಡ್ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರೆ, ಜ್ಯೋತಿ ಅವರು ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.